ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್ ಯುಕೇಶ್ ಕುಮಾರ್ ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕಿನ ವಿವಿಧ ಹಾಡಿಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಕೆ ಮಾಡಿದರು.
ಹನಗೂಡು ಹೋಬಳಿಯ ದೊಡ್ಡ ಹೆಜ್ಜುರು, ಉಮ್ಮತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಲ್ಲೂರು ಪಾಲ, ಶಂಕರಪುರ ಹಾಡಿಗಳಿಗೆ ಭೇಟಿ ನೀಡಿ ವಸತಿ, ಶೌಚಾಲಯ,ಆಶ್ರಮ ಶಾಲೆಗಳಿಗೆ ಮೂಲಸೌಕರ್ಯ, ಗಿರಿಜನರಿಗೆ ಅಗತ್ಯವಾಗಿ ಕಲ್ಪಿಸಿರುವ ಮೂಲಭೂತ ಸೌಲಭ್ಯಗಳು, ಕಸ ವಿಲೇವಾರಿ ಘಟಕ,ನಿವೇಶನ ವಂಚಿತರ ಮಾಹಿತಿ ಕಲೆ ಹಾಕಿದರಲ್ಲದೆ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಗ್ರಾಮದಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಘಟಕ ನಿರ್ಮಾಣ ಮಾಡಲು ಕ್ರಿಯಾಯೋಜನೆ ಸಿದ್ದಪಡಿಸಿವಂತೆ ತಿಳಿಸಿ, ನಿವೇಶನ ವಂಚಿತರ ಮಾಹಿತಿ ಕಲೆ ಹಾಕಿ ನಿವೇಶನ ನೀಡುವ ಕೆಲಸಕ್ಕೆ ಮುಂದಾಗುವಂತೆ ಸೂಚಿಸಿದ್ದಾರೆ.
ಆಶ್ರಮ ಶಾಲೆಗಳ ಸಿಬ್ಬಂದಿಗಳು ವೇತನ ವಿಳಂಬವಾಗಿದ್ದು ತಿಂಗಳಿಗೆ ಸರಿಯಾಗಿ ವೇತನ ಸಿಕ್ಕರೆ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.ಆಶ್ರಮ ಶಾಲೆಗಳಿಗೆ ಶೌಚಾಲಯ, ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಕೋರಿದ್ದಾರೆ.

ಗ್ರಾಮದ ಜನರು ನಿವೇಶನ, ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದಾಗ ಸುತ್ತಮುತ್ತ ಕಂದಾಯ ಭೂಮಿಯಿರುವುದು ತಿಳಿದು ಬಂದಿದ್ದು, ಜಿಲ್ಲಾಧಿಕಾರಿಯವರ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಭೇಟಿ ಸಮಯದಲ್ಲಿ ಇಓ ಕೆ ಹೊಂಗಯ್ಯ,ಎಇಇ ಪುಟ್ಟರಾಜು,ಸಿಡಿಪಿಐ ಹರೀಶ್,ತಾಲ್ಲೂಕು ಯೋಜನಾಧಿಕಾರಿ ರಾಜೇಶ್,ಪರಿಶಿಷ್ಟ ಪಂಗಡ ಇಲಾಖೆ ಸಹಾಯಕ ನಿರ್ದೇಶಕ ಗಂಗಾಧರ್,ನರೇಗಾ ಸಹಾಯಕ ನಿರ್ದೇಶಕ ಎಸ್ ಗಿರಿಧರ್ ಸೇರಿದಂತೆ ಮತ್ತಿತರೇ
ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.