ಬಸವಣ್ಣ ಮತ್ತು ಕುವೆಂಪು ಅವರನ್ನು ಕುರಿತ ಓದು ನಮಗೆ ಹೊಸ ದರ್ಶನವನ್ನು ನೀಡುತ್ತದೆ. ಕುವೆಂಪು ಗೊಬ್ಬರ, ಕೋಳಿ, ಹೀರೆಹೂವಿನ ಬಗ್ಗೆ ಬರೆಯುತ್ತ ಶೂದ್ರ ಅಸ್ಮಿತೆಯನ್ನು ತೋರಿದ ಲೇಖಕ. ಕುವೆಂಪು ನಾಡು ನುಡಿಯ ಪ್ರತಿಪಾದಕರಾಗಿ ನಮಗೆ ಬಹಳ ಮುಖ್ಯರಾಗಿದ್ದಾರೆ ಎಂದು ವಿಮರ್ಶಕಿ ತಾರಿಣಿ ಶುಭದಾಯಿನಿ ಹೇಳಿದರು.
ಚಳ್ಳಕೆರೆಯ ಹುಣ್ಣಿಮೆ ಪ್ರಕಾಶನ ಸಂಸ್ಥೆಯಿಂದ ನಡೆದ ಕುವೆಂಪು ನೆನಪಿನ ಕಾರ್ಯಕ್ರಮದಲ್ಲಿ ಮಾತನಾಡಿ, “ಕುವೆಂಪು ಅವರು ಪ್ರಖರ ರಾಜಕೀಯ ಪ್ರಜ್ಞೆಯ ಕವಿ. ಕುವೆಂಪು ಅವರು ತಮ್ಮ ಸೃಜನಶೀಲ ಬರಹಗಳು ವಸಾಹತುಶಾಹಿ ವಿರೋಧಿನೆಲೆ, ರಾಜಶಾಹಿ ವಿರೋಧಿನೆಲೆ ಮತ್ತು ಪುರೋಹಿತಶಾಹಿಯ ವಿರೋಧ ಪ್ರಬಲವಾಗಿವೆ. ಕುವೆಂಪು ಐವತ್ತು ವರ್ಷಗಳ ಕಾಲ ನಿರಂತರವಾಗಿ ರಾಜಕೀಯ ಪ್ರಜ್ಞೆಯ ಕವಿತೆಗಳನ್ನು ಬರೆಯುತ್ತ ಅಂತಿಮವಾಗಿ ವಿಶ್ವಮಾನವ ಪ್ರಜ್ಞೆಗೆ ಹೊರಳುತ್ತಾರೆ. ವಸಾಹತುಶಾಹಿಯ ಆಧುನಿಕ ಶಿಕ್ಷಣ ಕ್ರಮವನ್ನು ಒಪ್ಪಿಕೊಳ್ಳುತ್ತ ಅದೇ ವೇಳೆ ಭಾರತದ ವಿಮೋಚನೆಯ ಪರವಾಗಿ ಮಾತನಾಡುತ್ತಾರೆ. ಇದು ಅವರ ವೈಶಿಷ್ಟ್ಯತೆ” ಎಂದು ಹೇಳಿದರು.
“ಕುವೆಂಪು ವಿವೇಕಾನಂದರ ಹಿಂದೂ ರಾಷ್ಟ್ರೀಯತೆ ಮತ್ತು ವೈಚಾರಿಕ ಮನೋಭಾವನೆಗಳನ್ನು ಬಹಳಷ್ಟು ಸ್ವೀಕರಿಸಿದ್ದಾರೆ. ಈ ಸಿದ್ಧಾಂತ ಪ್ರಸ್ತುತಕ್ಕೆ ಹಿಂದೂ ಧರ್ಮದ ಸಿದ್ಧಾಂತಕ್ಕೆ ವಿರುದ್ಧವಾದದ್ದು. ಇದರಿಂದ ಮುಂದುವರೆದ ಕುವೆಂಪು ವೈಜ್ಞಾನಿಕ ಮನೋಭಾವವನ್ನೇ ಹೊಸ ಯುಗದ ಆಯುಧವನ್ನಾಗಿ ಸ್ವೀಕರಿಸಿದರು. ಕುವೆಂಪು ಅವರಿಗೆ ಗಾಂಧಿಯ ಬಗ್ಗೆ ಒಲವಿದೆ. ಆದರೆ ಗಾಂಧಿ ಮಾರ್ಗದ ಬಗ್ಗೆ ಆಸಕ್ತಿಯಿಲ್ಲ. ಕುವೆಂಪು ಅವರಿಗೆ ಗಾಂಧಿಗಿಂತಲೂ ವಿನೋಭಾ ಭಾವೆ ಮುಖ್ಯರಾಗುತ್ತಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮಾಧ್ಯಮದ ಕಾರ್ಪೊರೇಟ್ ಮಾಲೀಕತ್ವ ಕೇವಲ ಭಾರತೀಯ ವಿದ್ಯಮಾನವಲ್ಲ: ಶಾಸಕ ಆಸಿಫ್ ಸೇಠ್
“ಕುವೆಂಪು ಅವರ ಕವಿತೆಗಳಲ್ಲಿ ಭೈರವ, ಕಾಳಿ, ವಿಪ್ಪವ, ಪ್ರಳಯ ಮುಂತಾದ ರೂಪಕಗಳು ಹೇರಳವಾಗಿ ಕಾಣಸಿಗುತ್ತವೆ. ಈಗಿರುವ ವ್ಯವಸ್ಥೆ ನಾಶವಾದಾರೆ ಒಂದು ಹೊಸ ಸಮಬಾಳಿನ ವ್ಯವಸ್ಥೆ ಉದಯಿಸುತ್ತದೆ ಎನ್ನುವುದು ಅವರ ನಂಬಿಕೆ. ಆದ್ದರಿಂದಲೇ ಈ ರೂಪಕಗಳನ್ನು ಬಳಸುತ್ತಾರೆ. ಕುವೆಂಪು ಕನ್ನಡ ನೆಲದ್ದೇ ಆದ ಪಂಚಶೀಲ ತತ್ವಗಳನ್ನು ನೀಡಿದ್ದಾರೆ. ಇದು ಕುವೆಂಪು ಅವರ ಅನನ್ಯತೆ” ಎಂದರು.
ಕುವೆಂಪು ಅವರ ಕವಿತೆಗಳನ್ನು ಸಂಪತ್‌ಕುಮಾರ್, ಚೈತ್ರ, ಮೋದೂರು ತೇಜ, ರಂಗಸ್ವಾಮಿ ವಾಚಿಸಿದರು. ಉಪನ್ಯಾಸದ ನಂತರ ನಡೆದ ಸಂವಾದ ಕಾರ್ಯಕ್ರಮವನ್ನು ಜಿ ವಿ ಆನಂದಮೂರ್ತಿ, ಶ್ರೀನಿವಾಸರಾಜು ದೊಡ್ಡೇರಿ, ಎನ್ ಆರ್ ತಿಪ್ಪೇಸ್ವಾಮಿ, ನರಸಿಂಹಪ್ಪ ನಡೆಸಿಕೊಟ್ಟರು.