ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿರುವ ನಗರಸಭೆ ಮಳಿಗೆಗಳು ಕೆಲವೇ ಕೆಲವು ಶ್ರೀಮಂತರ ಕೈವಶದಲ್ಲಿದ್ದು, ಅವರು ನಗರಸಭೆಯ ಆದಾಯಕ್ಕೆ ಮಾರಕವಾಗಿದ್ದಾರೆ ಎಂದು ಚಳ್ಳಕೆರೆ ನಗರದ ಕನ್ನಡ ರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಮುರಳಿ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “ನಗರಸಭೆಯ ವಾಣಿಜ್ಯ ಮಳಿಗೆಗಳಿಂದ ಸರಿಯಾದ ಬಾಡಿಗೆ ಸಿಕ್ಕರೆ, ನಗರದ ಅಭಿವೃದ್ಧಿಗೆ ವಿನಿಯೋಗಿಸಬಹುದು. ಆದರೆ ಅಲ್ಲಿರುವ ಬಾಡಿಗೆದಾರರು ಅನೇಕ ವರ್ಷಗಳಿಂದ ತಮ್ಮ ಆಸ್ತಿಗಳಂತೆ ಆದಾಯವನ್ನು ಅನುಭವಿಸುತ್ತಿದ್ದಾರೆ” ಎಂದರು.
“ಲಕ್ಷಾಂತರ ರೂಪಾಯಿ ಬಾಡಿಗೆ ಬರುವ ಜಾಗದಲ್ಲಿ, ಕೇವಲ ₹500, ₹1000ಕ್ಕೆ ಬಾಡಿಗೆಗೆ ಪಡೆದು, ಅದನ್ನೂ ಸರಿಯಾಗಿ ನಗರಸಭೆಗೆ ಪಾವತಿಸದೆ, ಲಕ್ಷಾಂತರ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಇವರುಗಳು ನಗರಸಭೆಗೆ ಮತ್ತು ನಗರದ ಅಭಿವೃದ್ಧಿಗೆ ಮಾರಕವಾಗಿದ್ದಾರೆ” ಎಂದು ಕಿಡಿಕಾರಿದರು.
“ಇದೇ ವಿಷಯ ಖಂಡಿಸಿ ಹಲವಾರು ಸಂಘ-ಸಂಸ್ಥೆಗಳು, ಸಾಮಾಜಿಕ ಕಳಕಳಿಯ ಮುಖಂಡರು, ಬಹುತೇಕ ವರ್ಷಗಳಿಂದ ಹಲವು ರೀತಿಯ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಕೂಡಾ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಇತ್ತೀಚೆಗೆ ಹೋರಾಟಗಾರರ ಫಲದಿಂದ ಮತ್ತು ಶಾಸಕರ ಹಿತಾಸಕ್ತಿಯಿಂದ, ಉತ್ತಮ ನೌಕರರ ಸಹಕಾರದಿಂದ, ಚಳ್ಳಕೆರೆ ನಗರದ ಅಭಿವೃದ್ಧಿ ದೃಷ್ಟಿಯಿಂದ ವ್ಯಾಪಾರಸ್ಥರನ್ನು ಖಾಲಿ ಮಾಡಿಸುವ ಒಂದು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. ಶಾಸಕರ ಹಾಗೂ ನಗರಸಭೆಯ ಅಧಿಕಾರಿಗಳ ದಿಟ್ಟ ಕ್ರಮ ಶ್ಲಾಘನೀಯ” ಎಂದು ಅಭಿನಂದಿಸಿದರು.
ಈ ಸುದ್ದಿ ಓದಿದ್ದೀರ? ಶಿವಮೊಗ್ಗ | ಜ.21ರಂದು ‘ಗಾಂಧಿ ಭಾರತ’ ಸಮಾವೇಶ: ಸಚಿವ ಮಧು ಬಂಗಾರಪ್ಪ
ಗೌರವಾಧ್ಯಕ್ಷ ಬೋಜರಾಜು ಮಾತನಾಡಿ, “ಬಾಡಿಗೆದಾರರ ವಿರುದ್ಧ ನಗರದ ನಾಗರಿಕರು, ಸಂಘ ಸಂಸ್ಥೆಯವರು, ಸಾಮಾಜಿಕ ಕಳಕಳಿಯುಳ್ಳ ಹೋರಾಟಗಾರರು, ನಗರ ಸಭೆ ಮತ್ತು ಶಾಸಕರ ಬೆಂಬಲಕ್ಕೆ ನಿಂತುಕೊಳ್ಳುವ ಮೂಲಕ ನೈತಿಕ ಸ್ಥೈರ್ಯ ತುಂಬಬೇಕು. ಇಲ್ಲಿರುವ ಬಾಡಿಗೆದಾರರು ಮಳಿಗೆಗಳನ್ನು ಖಾಲಿ ಮಾಡದಿದ್ದರೆ, ಇನ್ನೂ ಹೆಚ್ಚಿನ ಹೋರಾಟವನ್ನು ಮುಂದುವರೆಸುವ ಮೂಲಕ ಜಿಲ್ಲಾಧಿಕಾರಿ, ಸಂಬಂಧಪಟ್ಟ ಮಂತ್ರಿಗಳು ಮತ್ತು ಸರ್ಕಾರದ ಗಮನಸೆಳೆಯಬೇಕು” ಎಂದು ಸಂಘ-ಸಂಸ್ಥೆಗಳಿಗೆ ಮನವಿ ಮಾಡಿದರು.
“ಬಾಡಿಗೆದಾರರು ಕಾನೂನಾತ್ಮಕವಾಗಿ ಹೋರಾಟ ಮಾಡಲಿ, ಅದರಲ್ಲಿ ತಪ್ಪೇನಿಲ್ಲ. ಅದನ್ನು ಬಿಟ್ಟು ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಧಮ್ಕಿ ಹಾಕುವುದು ಸರಿಯಲ್ಲ. ಹಾಲಿ ಇರುವ ನಗರಸಭೆಯ ಆಸ್ತಿಗಳನ್ನು ಖಾಲಿ ಮಾಡಿಸಿ ಉತ್ತಮ ಗುಣಮಟ್ಟದ ವಾಣಿಜ್ಯ ಮಳಿಗೆಗಳನ್ನು ಪುನರ್ ನಿರ್ಮಾಣ ಮಾಡಿ ಅರ್ಹರಿಗೆ, ಬಡವರಿಗೆ, ನಿರುದ್ಯೋಗಿ ವಿದ್ಯಾವಂತರಿಗೆ ಬಾಡಿಗೆಗೆ ಕೊಟ್ಟರೆ ಸಾಮಾಜಿಕವಾಗಿ ಉತ್ತಮ ಬೆಳವಣಿಗೆಯಾಗಲಿದೆ” ಎಂದು ಅಭಿಪ್ರಾಯಪಟ್ಟರು.
ಕರವೇ ತಾಲೂಕಧ್ಯಕ್ಷ ಪಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮರಿಕುಂಟೆ ಚಂದ್ರು, ಯುವಘಟಕದ ಅಧ್ಯಕ್ಷ ರವಿ, ಕಾರ್ಮಿಕ ಘಟಕ ಅಧ್ಯಕ್ಷರು ಮಂಜುನಾಥ್, ಪದಾಧಿಕಾರಿಗಳಾದ ರಾಜು ಹಾಗೂ ಇತರರು ಇದ್ದರು.