ಚಳ್ಳಕೆರೆ ನಗರದ ರಸ್ತೆ ಕಾಮಗಾರಿ ಶೀಘ್ರ ಮುಗಿಯುವುದಿಲ್ಲವೋ ಅಥವಾ ಉದ್ದೇಶಪೂರ್ವಕವಾಗಿ ಕಾಮಗಾರಿಗಳು ನಿಧಾನವಾಗಿ ಆಗುತ್ತಿವೆಯೋ? ಇದರಿಂದಾಗಿ ಸಾರ್ವಜನಿಕರಿಗೆ ಆಗುವ ತೊಂದರೆ ತಾಪತ್ರಯಗಳ ಬಗ್ಗೆ ಗಮನಹರಿಸಲು ಸ್ಥಳೀಯ ಆಡಳಿತ, ಅಧಿಕಾರಿಗಳಿಗೆ ಸಾಧ್ಯವಿಲ್ಲವೇ ಅಥವಾ ನಿರ್ಲಕ್ಷ್ಯವೇ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ.
“ಕುವೆಂಪು ಶಾಲಾ ಹಿಂಬಾಗದ ಸಿಜಿಕೆ ಲೇಔಟ್ ಮತ್ತು ಜಯಮ್ಮ ವೀರಣ್ಣ ಲೇಔಟ್ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಕೈಗೊಂಡು 8ರಿಂದ 10 ತಿಂಗಳುಗಳೇ ಕಳೆದಿವೆ. ಖಾಸಗಿ ಬಸ್ ನಿಲ್ದಾಣದ ಹಿಂಭಾಗದಿಂದ ತಿರುಮಲ ಆಸ್ಪತ್ರೆ ಮತ್ತು ಸೈನಿಕ ಆಸ್ಪತ್ರೆ ಮುಂಭಾಗದಿಂದ ಹಾದು ಹೋಗುತ್ತದೆ. ಕುವೆಂಪು ಶಾಲೆ ಹಿಂಭಾಗದ ಎಲ್ಲ ಲೇಔಟ್‌ಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು,
ಈ ಮೂಲಕವೇ ಪಾದಚಾರಿಗಳು, ವಾಹನಗಳು ಸಂಚರಿಸುತ್ತವೆ. ಇದರ ದುರಸ್ತಿ, ಮರುನಿರ್ಮಾಣಕ್ಕೆಂದು 2024ರ ಜೂನ್‌ನಲ್ಲಿ ರಸ್ತೆ ಅಗೆದಿದ್ದು, ಈವರೆಗೂ ಕೆಲಸವನ್ನು ಪೂರ್ಣಗೊಳಿಸದೇ ಅರೆಬರೆ ಕೆಲಸ ಮಾಡಿದ್ದಾರೆ” ಎಂದು ಚಳ್ಳಕೆರೆ ನಗರದ ನಿವಾಸಿಗಳು ಕಿಡಿಕಾರುತ್ತಿದ್ದಾರೆ.
ರಸ್ತೆಯ ಮಧ್ಯಭಾಗದಲ್ಲಿ ಅಲ್ಲಲ್ಲಿ ಒಂದಷ್ಟು ಸ್ಲ್ಯಾಬ್‌ಗಳನ್ನು ಜೋಡಿಸಿದ್ದು, ಉಳಿದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇಲ್ಲಿನ ಜನತೆಗೆ ಓಡಾಡಲು ತುಂಬಾ ಕಷ್ಟವಾಗಿದ್ದು, ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ಈ ಅರೆಬರೆ, ಅಪೂರ್ಣ ಕಾಮಗಾರಿಗೆ ಕಾರಣವೇನೆಂದು ತಿಳಿಯದೆ, ಯಾವಾಗ ಪೂರ್ಣಗೊಳ್ಳುತ್ತದೆಯೋ ಎನ್ನುವ ನಿರೀಕ್ಷೆಯ ಕಳವಳ ವ್ಯಕ್ತಪಡಿಸಿದ್ದಾರೆ.

ಬಹುತೇಕ ಮಕ್ಕಳು ಶಾಲೆಗಳಿಗೆ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಉದ್ಯೋಗಿಗಳೂ ಕೂಡ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಇದೇ ರಸ್ತೆಯಲ್ಲಿ ಓಡಾಡುವ ಅನಿವಾರ್ಯತೆ ಎದುರಾಗಿದೆ. ಅಪೂರ್ಣ ಕಾಮಗಾರಿಯ ರಸ್ತೆಯಲ್ಲಿ ಮಕ್ಕಳು, ವೃದ್ಧರಿಗೆ ಸಂಕಷ್ಟ ಎದುರಾಗಿದೆ.
“ಇದು ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಇದರಲ್ಲಿ ವಾಹನ ಸಂಚಾರಕ್ಕೆ ಸಾಧ್ಯವಾಗದೆ, ಸಣ್ಣಪುಟ್ಟ ಗಲ್ಲಿಗಳಲ್ಲಿ ಬೇರೆ ಬೇರೆ ಬಡಾವಣೆಗಳಲ್ಲಿ ಸುತ್ತು ಹಾಕಿಕೊಂಡು ಹೋಗುತ್ತಿದ್ದಾರೆ. ಶಾಲೆ ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸುವುದು ನಿಂತುಹೋಗಿದ್ದು, ಶಾಲೆ ಮಕ್ಕಳಿಗೆ ಬಹುತೇಕ ತೊಂದರೆಯಾಗಿದೆ. ಕೆಲವೊಮ್ಮೆ ಶಾಲೆಗೆ ಹೋಗುವುದು ತಡವಾದಲ್ಲಿ ಮಕ್ಕಳ ಹಾಜರಿಯೂ ಕಡಿಮೆಯಾಗಿ ವಿದ್ಯಾಭ್ಯಾಸದ ಕೊರತೆ ಸಾಧ್ಯತೆ ಹೆಚ್ಚಾಗಿದೆ” ಎಂದು ಸ್ಥಳೀಯ ನಿವಾಸಿ ಶಿವಕುಮಾರ್ ಕಿಡಿಕಾರಿದರು.

“ಇಲ್ಲಿ ಯಾರು ಕಾಮಗಾರಿ ನಡೆಸುತ್ತಿದ್ದಾರೆಂದು ಯಾವುದೇ ಮಾಹಿತಿ ಫಲಕವನ್ನೂ ಹಾಕಿಲ್ಲ. ಕಳೆದ ಒಂಬತ್ತು ತಿಂಗಳಿಂದ ಕಾಮಗಾರಿ ನಡೆಯುತ್ತಿದೆ. ಮಳೆಗಾಲಕ್ಕೂ ಮುಂಚೆ ರಸ್ತೆಯನ್ನು ಅಗೆದು ಬಿಟ್ಟಿದ್ದು, ಮಳೆಗಾಲದಲ್ಲಿ ಕೆಸರು ತುಂಬಿಕೊಂಡಿತ್ತು. ಈಗ ಎರಡು ಮೂರು ತಿಂಗಳ ಹಿಂದೆ ಕಲ್ಲು ಜೆಲ್ಲಿಗಳನ್ನು ಹರಡಿದ್ದಾರೆ. ಕೆಲವು ಸ್ಲ್ಯಾಬ್‌ಗಳನ್ನು ಹಾಕಿ ಅರ್ಧಂಬರ್ಧ ಕಾಮಗಾರಿ ನಡೆಸಿ ಕೈಬಿಟ್ಟಿದ್ದಾರೆ. ಯಾವುದೇ ಅಧಿಕಾರಿಗಳು, ಗುತ್ತಿಗೆದಾರರು ಇಲ್ಲಿಗೆ ಭೇಟಿ ನೀಡಿ ಮಾಹಿತಿ ನೀಡಿಲ್ಲ. ಯಾರನ್ನು ಕೇಳಬೇಕು ಎಂಬುದೇ ಯಕ್ಷಪ್ರಶ್ನೆಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಎಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ರಸ್ತೆ ರಿಪೇರಿಯಾಗಿಲ್ಲ. ಜನವರಿ 22ರಿಂದ 24ರವರೆಗೆ ಜಿಲ್ಲೆಗೆ ಮತ್ತು ನಗರಕ್ಕೆ ಉಪಲೋಕಾಯುಕ್ತರು ಭೇಟಿ ನೀಡುವ ಮಾಹಿತಿ ಇತ್ತು. ಆ ಸಂದರ್ಭದಲ್ಲಿ ಲೋಕಾಯುಕ್ತರಿಗೆ ದೂರನ್ನು ಏಕೆ ನೀಡಬಾರದು. ಈ ಅರೆಬರೆ ಕಾಮಗಾರಿಯ ಹಿಂದಿರುವ ಕೈಗಳು ಯಾವುವು? ಮತ್ತು ಇದರ ಗುತ್ತಿಗೆದಾರನಿಗೆ ಸಂಬಂಧಪಟ್ಟಂತೆ ನಾವೇಕೆ ದೂರು ನೀಡಬಾರದೆಂದು ಇಲ್ಲಿ ಸಾರ್ವಜನಿಕರು ಯೋಚಿಸುತ್ತಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ರಾತ್ರೋರಾತ್ರಿ ಕೆರೆ ಮಣ್ಣು ಕಳ್ಳತನ; ಗುತ್ತಿಗೆದಾರ ವಿಶ್ವನಾಥ ಕುಂಬಾರನ ವಿರುದ್ಧ ಸೂಕ್ತ ಕ್ರಮವಾಗುವುದೇ?
ಈ ಬಗ್ಗೆ ನಗರಸಭೆ ಆಯುಕ್ತ ಜನಾರೆಡ್ಡಿ ಅವರು ಮಾತನಾಡಿ, “ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಯಾರೂ ಕೂಡ ಅಹವಾಲು ಸಲ್ಲಿಸಿಲ್ಲ. ಅಲ್ಲಿ ಸಾಮಗ್ರಿಗಳ ಸಮಸ್ಯೆ, ಕೊರತೆಯಿದೆ ಎನ್ನುವ ಮಾಹಿತಿಯಿದೆ. ಕ್ಯೂರಿಂಗ್ ಮಾಡುವ ಉದ್ದೇಶದಿಂದ ಕೂಡ ವಿಳಂಬವಾಗುತ್ತಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಗಮನಹರಿಸಿ ಯಾರು ಕಾಮಾಗಾರಿ ಮಾಡುತ್ತಿದ್ದಾರೆಂದು ತಿಳಿದು ಶೀಘ್ರವಾಗಿ ಕಾಮಗಾರಿ ಮುಗಿಸಲು ನಿರ್ದೇಶಿಸುತ್ತೇನೆ” ಎಂದು ತಿಳಿಸಿದರು.
“ಒಟ್ಟಿನಲ್ಲಿ ಹತ್ತಾರು ತಿಂಗಳಿನಿಂದ ಕಾಮಗಾರಿ ವಿಳಂಬದಿಂದಾಗಿ ತೊಂದರೆ ಅನುಭವಿಸುತ್ತಿರುವ ಮಕ್ಕಳಿಗೆ, ನಾಗರಿಕರಿಗೆ ಶೀಘ್ರ ಸಮರ್ಪಕ ರಸ್ತೆ ನಿರ್ಮಾಣ ಮಾಡಿ ತೊಂದರೆಯಿಂದ ಮುಕ್ತಿ ಕೊಡಿಸಬೇಕು” ಎನ್ನುವುದು ಚಳ್ಳಕೆರೆ ಜನತೆಯ ಆಶಯ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು