ಚಾಮರಾಜನಗರದ ಜಿಲ್ಲಾಢಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರದ ವತಿಯಿಂದ, ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದಡಿ (ಎನ್ ಟಿ ಇ ಪಿ) ಹಮ್ಮಿಕೊಳ್ಳಲಾಗಿದ್ದ ಕ್ಷಯಮುಕ್ತ ಗ್ರಾಮ ಪಂಚಾಯತ್ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ‘ ಅರೋಗ್ಯ ಇಲಾಖೆ ಕಾಳಜಿಯಿಂದ 48 ಗ್ರಾಮ ಪಂಚಾಯ್ತಿಗಳು ಕ್ಷಯ ಮುಕ್ತವಾಗಿದೆ ‘ ಎಂದರು.
” ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಸತತ ಪರಿಶ್ರಮದಿಂದ ಕ್ಷಯಮುಕ್ತ ಗ್ರಾಮ ಪಂಚಾಯಿತಿಗಳನ್ನಾಗಿಸಲು ಚಟುವಟಿಕೆಗಳನ್ನು ನಡೆಸುತ್ತಿದೆ. ಗ್ರಾಮ ಪಂಚಾಯಿತಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಅತ್ಯಂತ ಸಕ್ರಿಯವಾಗಿ ಶ್ರದ್ದೆಯಿಂದ ಕಾರ್ಯನಿರ್ವಹಿಸುತ್ತಿರುವ ಕಾರಣದಿಂದ 48 ಗ್ರಾಮ ಪಂಚಾಯಿತಿಗಳು ಕ್ಷಯ ಮುಕ್ತವೆಂದು ಘೋಷಣೆಯಾಗಿವೆ. ಉಳಿದ ಗ್ರಾಮ ಪಂಚಾಯಿತಿಗಳು ಸಹ ಶೀಘ್ರವೇ ಕ್ಷಯ ಮುಕ್ತವಾಗಲಿವೆ. ಗ್ರಾಮ ಪಂಚಾಯಿತಿಯು ಗ್ರಾಮ ಸರ್ಕಾರವಾಗಿ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತದೆ ಹಾಗೂ ಸ್ಥಳೀಯ ಜನರ ಅಭಿವೃದ್ದಿಗೆ ಮುಂದಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ದತಿ ಮುಕ್ತ ಗ್ರಾಮ ಪಂಚಾಯಿತಿಗಳಾಗಿಯೂ ಘೋಷಣೆಯಾಗುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಶಾಲೆಯಿಂದ ಯಾವ ಮಕ್ಕಳು ಹೊರಗುಳಿಯಬಾರದು. ಶೈಕ್ಷಣಿಕ ಫಲಿತಾಂಶದಲ್ಲಿ ಶೇ100 ರಷ್ಟು ಸಾಧನೆ ಮಾಡುವಂತಾಗಬೇಕು ” ಎಂದರು.
” ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಇನ್ನಿತರ ಮೂಲ ಸೌಕರ್ಯಗಳಿಗೆ ಪ್ರಥಮಾದ್ಯತೆ ನೀಡಿದ್ದೇವೆ. ವಿಶೇಷವಾಗಿ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸವಾಗುತ್ತಿದೆ, ಮಕ್ಕಳ ಲಸಿಕಾ ಅಭಿಯಾನದಲ್ಲಿ ಚಾಮರಾಜನಗರ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ, ಮಧುಮೇಹಿಗಳ ಆರೋಗ್ಯ ತಪಾಸಣೆ, ಚಿಕಿತ್ಸೆಗಾಗಿ ಪ್ರತಿ ಬುಧವಾರ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆಗಳಲ್ಲಿ ಬೆಳಿಗ್ಗೆಯೇ ವಿಶೇಷ ಸೇವೆ ಒದಗಿಸುಲ್ಲಿ ಜಿಲ್ಲೆ ಮೊದಲಾಗಿದೆ. ಹೀಗೆಯೇ ಇನ್ನಿತರ ಕ್ಷೇತ್ರಗಳಲ್ಲಿಯೂ ಚಾಮರಾಜನಗರ ಜಿಲ್ಲೆ ಇತರ ಜಿಲ್ಲೆಗಳಿಗೆ ಮಾದರಿಯಾಗಲೆಂದ ಆಶಿಸಿದರು “.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಮೋನಾ ರೋತ್ ಮಾತಾನಾಡಿ ” ಹನೂರಿನ ತಾಲ್ಲೂಕಿನಲ್ಲಿಯೂ ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಳನ್ನಾಗಿ ಘೋಷಿಸಲು ಸಕ್ರಿಯವಾಗಿ ಕಾರ್ಯಚಟುವಟಿಕೆಗಳು ನಡೆಯುವಂತಾಗಬೇಕು. ಗ್ರಾಮ ಪಂಚಾಯಿತಿಗಳು ಆರೋಗ್ಯ ಸುಧಾರಣಾ ಕಾರ್ಯಕ್ರಮಗಳಿಗೆ ಕೈ ಜೋಡಿಸುತ್ತಿದೆ. ಸ್ವಚ್ಚ ಭಾರತ ಅಭಿಯಾನ ಯಶಸ್ವಿಗೂ ಎಲ್ಲರ ಸಹಕಾರ ಅಗತ್ಯವಿದೆ. ಪಂಚಾಯತಿಗಳಲ್ಲಿ ತೆರಿಗೆ ವಸೂಲಾತಿಯಲ್ಲಿ ಹೆಚ್ಚಳವಾದರೆ ಸ್ವಂತ ಸಂಪನ್ಮೂಲ ಕ್ರೂಡಿಕರಣಗೊಂಡು ಅಭಿವೃದ್ದಿ ಕೆಲಸಗಳಿಗೆ ವಿನಿಯೋಗಿಸಬಹುದೆಂದು ” ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಚಿದಂಬರ ಮಾತನಾಡಿ ಜಿಲ್ಲೆಯಲ್ಲಿ ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಳಾಗಲು ಆರೋಗ್ಯ ಇಲಾಖೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಜಿಲ್ಲಾಧಿಕಾರಿಗಳು ಕ್ಷಯ ರೋಗ ಪತ್ತೆಗೆ ಅಗತ್ಯವಾದ ಅತ್ಯಾಧುನಿಕ ವೈದ್ಯ ಉಪಕರಣಗಳನ್ನು ಮಂಜೂರು ಮಾಡಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿಯೇ ಎಲ್ಲಾ ಚಿಕಿತ್ಸೆಗಳಿಗೆ ಅನುಕೂಲವಾಗಿದೆ. ಕ್ಷಯ ರೋಗ ನಿಯಂತ್ರಣದಲ್ಲಿ 26ನೇ ಸ್ಥಾನದಲ್ಲಿದ್ದ ಚಾಮರಾಜನಗರ ಜಿಲ್ಲೆ ಪ್ರಸ್ತುತ 3 ನೇ ಸ್ಥಾನಕ್ಕೆ ಬಂದಿದೆ ” ಎಂದರು.

ಕ್ಷಯರೋಗ ನಿರ್ಮೂಲನಾಧಿಕಾರಿ ಡಾ ರವಿಕುಮಾರ್ ಮಾತನಾಡಿ ” ಕ್ಷಯ ರೋಗ ಮುಕ್ತ ಭಾರತ ಮಾಡಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅತ್ಯಾಧುನಕ ಪ್ರಯೋಗಶಾಲೆಗಳ ಮೂಲಕ ರೋಗವನ್ನು ಪತ್ತೆಹಚ್ಚಲಾಗುತ್ತಿದೆ. ರೋಗದ ಕುರಿತು ಜನರಲ್ಲಿ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ. ಕಳಂಕ ತಾರತಮ್ಯವನ್ನು ತೊಡೆದು ಹಾಕಲು ಹೆಚ್ಚು ಅರಿವು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಹಂತ ಹಂತವಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ಕ್ಷಯಮುಕ್ತವನ್ನಾಗಿಸಲು ಯೋಜನಾ ಬದ್ದವಾಗಿ ಕಾರ್ಯೊನ್ಮುಖರಾಗಿದೇವೆ” ಎಂದು ತಿಳಿಸಿದರು
ಈ ಸುದ್ದಿ ಓದಿದ್ದೀರಾ? ಮೈಸೂರು | ಹುಣಸೂರಿನ ಹಾಡಿಗಳಿಗೆ ಭೇಟಿ ನೀಡಿದ ಸಿಇಓ ; ಸಮಸ್ಯೆಗಳ ಆಲಿಕೆ
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು, ತಾಲ್ಲೂಕು ಪಂಚಾಯತ್ ಅಧಿಕಾರಿಗಳು,ಗ್ರಾಮ ಪಂಚಾಯತ್ ಪ್ರತಿನಿಧಿಗಳು ಇದ್ದರು.