ಗಾಂಧಿಯವರ ಅಧಿಕಾರ ವಿಕೇಂದ್ರೀಕರಣದ ಕನಸನ್ನು ನನಸು ಮಾಡಿದವರು ದಿವಂಗತ ಅಬ್ದುಲ್ ನಜೀರ್ ಸಾಬ್ ಎಂದು 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಹೇಳಿದರು.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟ, ಅಬ್ದಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಸಂಪನ್ಮೂಲ ವ್ಯಕ್ತಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಅಬ್ದುಲ್ ನಜೀರ್ ಸಾಬ್ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಪಂಚಾಯತ್ ರಾಜ್ ಸಬಲೀಕರಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಗ್ರಾಮ ಸ್ವರಾಜ್ಯ ವ್ಯವಸ್ಥೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸು. ಭಾರತದ ಸಾಂವಿಧಾನಿಕ ಹಕ್ಕುಗಳ ಸೌಲಭ್ಯ ಸರ್ವರಿಗೂ ಸಮಬಾಳಿನಂತೆ ಲಭಿಸಬೇಕೆಂಬ ಧ್ಯೇಯ ಗಾಂಧೀಜಿಯವರದಾಗಿತ್ತು.
ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆ ಕೇಂದ್ರೀಕೃತವಾಗಬಾರದು. ಅದು ದಿಲ್ಲಿಯಿಂದ ಹಳ್ಳಿಗೆ ಹಂಚಿಕೆಯಾಗಬೇಕು. ಆಡಳಿತ ವಿಕೇಂದ್ರೀಕರಣದ ಮೂಲಕ ಗಾಂಧೀಜಿಯವರ ಸ್ವರಾಜ್ಯ ಕಲ್ಪನೆ, ರಾಮರಾಜ್ಯ ಕನಸು ಈಡೇರಿಸಲು ಇಚ್ಛಾಶಕ್ತಿ ಕೊರತೆ ಇತ್ತು. ಅದನ್ನು ಕಾರ್ಯಗತಗೊಳಿಸುವುದು ಸುಲಭ ಸಾಧ್ಯವೂ ಆಗಿರಲಿಲ್ಲ. ಅಧಿಕಾರ ತಮ್ಮಲ್ಲೇ ಉಳಿಯಬೇಕು ಎಂಬುದು ಅಧಿಕಾರಿಗಳ ಆಸೆ. ಆದರೆ ಗಾಂಧೀಜಿಯವರ ರಾಮರಾಜ್ಯದ ಕನಸನ್ನು ಕರ್ನಾಟಕದಲ್ಲಿ ಹಲವು ಅಡೆತಡೆ ನಡುವೆಯೂ 1993 ಪಂಚಾಯತ್ ರಾಜ್ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವಲ್ಲಿ ನಜೀರ್ ಯಶಸ್ವಿಯಾದರು” ಎಂದು ಹೇಳಿದರು.
“ತೊಂಬತ್ತರ ದಶಕದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಆಡಳಿತಕ್ಕೆ ಬಂದ ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ತಮಗೆ ಇಷ್ಟವಾದ ಯಾವುದೇ ಖಾತೆಯನ್ನು ನಜೀರ್ ಸಾಬ್ ಪಡೆಬಹುದಿತ್ತು. ಆದರೆ ಅವರು ಗ್ರಾಮೀಣಾಭಿವೃದ್ಧಿ ಖಾತೆಯನ್ನು ಪಡೆದು ಅಧಿಕಾರ ವಿಕೇಂದ್ರೀಕರಣ ತರುವಲ್ಲಿ ಬಹಳ ಪ್ರಮುಖ ಪಾತ್ರವಹಿಸಿದರು ಹಾಗೂ ಕುಡಿಯುವ ನೀರಿಗ ಬಹಳ ತೊಂದರೆಯಾಗಿದ್ದಂತಹ ಸಮಯದಲ್ಲಿ ರಾಜ್ಯಾದ್ಯಂತ ಕೊಳವೆ ಬಾವಿಗಳನ್ನು ಕೊರೆಸುವ ಮೂಲಕ ಇಂದಿಗೂ ʼನೀರ್ ಸಾಬ್ʼ ಎಂದೇ ಜನಪ್ರಿಯತೆಗಳಿಸಿದ್ದಾರೆ” ಎಂದರು.
ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಅವರು ʼಪಂಚಾಯತ್ ದಾರಿದೀಪ ನಜೀರ್ ಸಾಬ್ʼ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, “ಸ್ವರಾಜ್ಯ ಕಲ್ಪನೆಯಂತೆ ಪ್ರತಿಯೊಂದು ಗ್ರಾಮಗಳು ಸ್ವಾವಲಂಬಿಯಾಗಿ ಇರಬೇಕು. ಅವರ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಖುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಪಂಚಾಯತ್ ರಾಜ್ ಸಬಲೀಕರಣಕ್ಕೆ ನೀರ್ ಸಾಬ್ ಅವರ ಕೊಡುಗೆ ಬಹಳ ಅಪಾರ” ಎಂದು ಹೇಳಿದರು.
“ಗ್ರಾಮಸಭೆ ಬಹಳ ವಿಶೇಷ ಸಭೆಯಾಗಿದ್ದು, ಗ್ರಾಮದ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸುವ ಆಸಕ್ತಿಯನ್ನು ಬೆಳೆಸುಕೊಳ್ಳಬೇಕು. ಗ್ರಾಮಸಭೆಯಲ್ಲಿ ಆದ್ಯತೆಗೆ ಅನುಗುಣವಾಗಿ ನಮ್ಮ ಗ್ರಾಮಕ್ಕೆ ಬೇಕಾದ ಯೋಜನೆಗಳನ್ನು ತಯಾರಿಸಿ ಗ್ರಾಮ ಪಂಚಾಯಿತಿ ಮುಂದೆ ಸಲ್ಲಿಸಿದಾಗ ಆ ಗ್ರಾಮ ಪಂಚಾಯತಿ ಅಭಿವೃದ್ಧಿಯಾಗುತ್ತದೆ. ಗ್ರಾಮ ಸಭೆಗಳಲ್ಲಿ ಇಲ್ಲದವರಿಗೆ ಸರ್ಕಾರದ ಯೋಜನೆಗಳನ್ನು ನೀಡುವ ಕೆಲಸ ಮಾಡಬೇಕು. ಆದರೆ ಇಂದು ರಾಜಕೀಯ, ಜಾತಿ, ಒತ್ತಡ ಮತ್ತು ಸ್ವಜನಾಪಕ್ಷಪಾತದಿಂದ ಸರ್ಕಾರದ ಯೋಜನೆಗಳು ಉಳ್ಳವರ ಪಾಲಾಗುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಹೆಚ್ ಎಂ.ಗಣೇಶ್ ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಅಬ್ದುಲ್ ನಜೀರ್ ಸಾಬ್ ಅವರ ವ್ಯಕ್ತಿತ್ವ ಬಡಜನರ ಏಳಿಗೆಗೆ ದುಡಿಯುತ್ತಿತ್ತು. ಅವರು ಸಂಧ್ಯಾಕಾಲದ ಸಮಯದಲ್ಲೂ ಕೂಡ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್ ಆರ್ ಬೊಮ್ಮಾಯಿ ಅವರ ಬಳಿ ತಮ್ಮ ಕುಟುಂಬಕ್ಕೆ ಏನನ್ನೂ ಕೇಳದೆ ರಾಜ್ಯದ ಬಡಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಹೇಳಿದ್ದು, ಅವರ ನಿಸ್ವಾರ್ಥ ಸೇವೆಯ ಗುಣ ಎನ್ನಬಹುದು” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸ್ಮಶಾನವಿಲ್ಲದೆ ರಸ್ತೆ ಬದಿಯಲ್ಲೇ ಅಂತ್ಯಸಂಸ್ಕಾರ
ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಾ. ತಿಮ್ಮಯ್ಯ , ಕರ್ನಾಟಕ ರಾಜ್ಯ ಪಂಚಾಯತ್ ಪರಿಷತ್‌ನ ಉಪಾಧ್ಯಕ್ಷ ಡಿ ಆರ್ ಪಾಟೀಲ್, ವಿ ವೈ ಘೋರ್ಪಡೆ, ಆಡಳಿತ ಮಂಡಳಿ ಸದಸ್ಯೆ ಜಯಂತಿ, ತಾಲೂಕು ಅಧ್ಯಕ್ಷ ಮಹೇಂದ್ರ ಹುಂಡಿಪುರ ಹಾಗೂ ಕಾರ್ಯದರ್ಶಿ ಆರ್ ಡಿ ಉಲ್ಲಾಸ್ ರಾಘವಪುರ ಪಂಚಾಯಿತಿ ಸದಸ್ಯ ವೃಷಭೇಂದ್ರ ಹಂಗಳ, ಕೆರಹಳ್ಳಿ ನವೀನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಬ್ಬಹಳ್ಳಿ ಮಹೇಶ್ ಸೇರಿದಂತೆ ಇತರರು ಇದ್ದರು.