ಚಾಮರಾಜನಗರ | ಬಾಬಾಸಾಹೇಬ್ ಅಂಬೇಡ್ಕರ್ ಆಧುನಿಕ ಭಾರತದ ಪರಂಜ್ಯೋತಿ: ಡಾ.ಕುಪ್ಪನಹಳ್ಳಿ ಎಂ ಭೈರಪ್ಪ

Date:

Advertisements

ಜಾನಪದ ಲೋಕದಲ್ಲಿ ಧರೆಗೆ ದೊಡ್ಡವರಾಗಿ ಸರ್ವಜನಾಂಗದ ಪಾಲಿನ ಪರಂಜ್ಯೋತಿಯಾದ ಮಂಟೇಸ್ವಾಮಿಯವರಂತೆ ಬಹುಜನರಿಗೆ ಭಾರತ ಸಂವಿಧಾನವೆಂಬ ಮಹಾಬೆಳಕನ್ನಿತ್ತ ಬಾಬಾಸಾಹೇಬ್ ಅಂಬೇಡ್ಕರ್ ಅವರು ಆಧುನಿಕ ಭಾರತದ ಪರಂಜ್ಯೋತಿ ಎಂದು ರಾಷ್ಟ್ರಪತಿ ಪ್ರಶಸ್ತಿ-ಮಹರ್ಷಿ ವ್ಯಾಸ್ ಸಮ್ಮಾನ್ ಪುರಸ್ಕೃತ ಯುವವಿದ್ವಾಂಸ ಹಾಗೂ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಕುಪ್ಪನಹಳ್ಳಿ ಎಂ ಭೈರಪ್ಪ ಅವರು ಅಭಿಪ್ರಾಯಪಟ್ಟರು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ “ಭಾರತ ಸಂವಿಧಾನ ದಿನ ಹಾಗೂ ಸಮಾನತೆಯ ಸಾಲುದೀಪ ನಮನ” ಸಮಾರಂಭ ಉದ್ಘಾಟಿಸಿ ಮಾತನಾಡಿದರು.

“ಜನಸಂಸ್ಕೃತಿಯ ಮಹಾಸಂತ ಪರಂಜ್ಯೋತಿ ಮಂಟೇಸ್ವಾಮಿ ಅವರನ್ನು ಕುರಿತು ಜನಪದರು ಹಾಡಿರುವ ಮಹಾಕಾವ್ಯವು ಪ್ರಾತಃಸ್ಮರಣೀಯ. ಆ ಕಾವ್ಯದಲ್ಲಿ ಬರುವ ‘ತಿಪ್ಪೆ ಮೇಲೆ ಕಸಮಡಗಿದರೆ ಭಿನ್ನಭೇದವಿಲ್ಲದಂತೆ ಏಕವಾಗಿ ಉರಿವ ಪರಂಜ್ಯೋತಿʼ ಎಂಬ ಜನನುಡಿಯು ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ನಾಯಕತ್ವದಲ್ಲಿ ರಚನೆಗೊಂಡ ಭಾರತ ಸಂವಿಧಾನಕ್ಕೆ ಅರ್ಥಪೂರ್ಣವಾಗಿ ಅನ್ವಯವಾಗುವಂಥದು. ಸಮಸ್ತ ಭಾರತೀಯರಿಗೂ ಯಾವುದೇ ಭೇದವಿಲ್ಲದೆ ಒಂದೇ ಸಮನಾದ ಹಕ್ಕು, ಬಾಧ್ಯತೆ, ಅವಕಾಶಗಳನ್ನು ನೀಡಿ ಸಹಭಾಗಿತ್ವ ಹಾಗೂ ಸಾಮರಸ್ಯದ ಬದುಕನ್ನಿತ್ತಿರುವುದು ನಮ್ಮ ಹೆಮ್ಮೆಯ ಸಂವಿಧಾನ. ಇದು ಏಕನೆಲೆಗೆ ಎಂದೂ ಸೀಮಿತವಾದುದಲ್ಲ. ಭಾರತದ ಬಹುನೆಲೆಗಳಲ್ಲಿ ಏಕವಾಗಿ ಉರಿವ ಪರಂಜ್ಯೋತಿಯೇ ಆಗಿದೆ” ಎಂದು ಬಣ್ಣಿಸಿದರು.

Advertisements

“ಅಂಬೇಡ್ಕರ್ ಅವರು ತಳನೆಲೆಯಿಂದ ಅಸಂಖ್ಯ ನೋವು, ಅವಮಾನಗಳನ್ನು ಅನುಭವಿಸಿ ಬಂದವರಾದರೂ ತಮ್ಮ ದೃಷ್ಟಿಯನ್ನು ವಿಶಾಲಗೊಳಿಸಿಕೊಂಡವರು. ಅವರ ಜ್ಞಾನವಾಗಲೀ ಕಾಯಕವಾಗಲಿ ಏಕಕೋನೀಯವಾಗಿರಲಿಲ್ಲ, ಬಹುಕೋನೀಯವಾಗಿತ್ತು. 360 ಡಿಗ್ರಿಯಷ್ಟು ವಿಶಾಲವೂ ಆಳವೂ ಆಗಿದ್ದ ಅಂಬೇಡ್ಕರ್ ದೃಷ್ಟಿಕೋನದಿಂದಲೇ ಭಾರತ ಸಂವಿಧಾನವು ಸರ್ವಜನಾಂಗದ ಬದುಕುಗಳನ್ನು ನಿತ್ಯವೂ ಬೆಳಗುವಂತಾಗಿದೆ. ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವೆಂಬ ಪ್ರಸಿದ್ಧಿಗೆ ಪಾತ್ರವಾಗಿರುದೆ. ಇಂತಹ ಸಂವಿಧಾನದ ಬೆಳಕನ್ನು ಆರಿಸಿ ಸರ್ವಾಧಿಕಾರದ ಏಕಮತೀಯ ಸಂವಿಧಾನ ತರ್ತೀವಿ ಎನ್ನುವವರು ಜನದ್ರೋಹಿ ಹಾಗೂ ದೇಶದ್ರೋಹದ ಕೃತ್ಯವಲ್ಲವೆ?” ಎಂದರು.

“ಭಾರತ ಸಂವಿಧಾನಕ್ಕೆ ಕನ್ನಡ ನೆಲದ ಸೃಜನಶೀಲ ಮನಸ್ಸು ನೀಡಿದ ಹೃದಯಸಂವಾದದ ಸಾಕ್ಷಿಯಾಗಿ ಮಹಾಕವಿ ಕುವೆಂಪು ವಿರಚಿತ ‘ಶ್ರೀಸಾಮಾನ್ಯರ ದೀಕ್ಷಾಗೀತೆ’ ಕವಿತೆ ಕಾಣುತ್ತದೆ. 1950ರ ಜನವರಿ 36ರಂದು ಮೈಸೂರಿನಲ್ಲಿ ಕುವೆಂಪು ಬರೆದ ಈ ಕವಿತೆಯು, ʼಕೊನೆಗೊಂಡಿತು ಓರೋರ್ವರ ಗರ್ವದ ಕಾಲ, ಇದು ಸರ್ವರ ಕಾಲ, ಶ್ರೀಸಾಮಾನ್ಯನೇ ಭಗವಾನ್ ಮಾನ್ಯಂ, ಶ್ರೀಸಾಮಾನ್ಯದ ಪೂಜೆಗೆ ದೀಕ್ಷೆಯ ಕೊಳ್ಳಿರಿʼ ಎಂದು ಸಾರುತ್ತದೆ. ಸಂವಿಧಾನ ರಚನಾ ಸಮಯದ ಚರ್ಚೆಯಲ್ಲಿ ʼಶ್ರೀಸಾಮಾನ್ಯರೇ ನನ್ನ ದೇವರುʼ ಎಂದಿದ್ದ ಅಂಬೇಡ್ಕರ್ ಅವರ ಮಹದಾಶಯವನ್ನು ಹೃದಯಗಿವಿಯಿಂದ ಆಲಿಸಿ, ಆಲಂಗಿಸಿಕೊಂಡ ಮಹಾಕವಿಯ ಉಲಿಯಂತೆ ಕಾಣುತ್ತದೆ” ಎಂದರು.

“ಶೋಷಣೆ ಮಾಡಿದವರನ್ನು ದ್ವೇಷ ಮಾಡುತ್ತಲೋ ಅಥವಾ ಅಧಿಕಾರ ಸಿಕ್ಕಾಗ ಮರುಶೋಷಣೆ ಮಾಡುವುದರಿಂದಲೋ ಭಾರತ ಬೆಳಗುವುದಿಲ್ಲ, ಅಸಮಾನತೆ ಅಳಿಯುವುದಿಲ್ಲ. ದ್ವೇಷಿಸುವವರು ಹಾಗೂ ಶೋಷಿಸುವವರೇ ನಮ್ಮನ್ನು ಗೌರವಿಸುವಂಥ ಸಾಧನೆ ಬದುಕು ನಮ್ಮದಾಗಬೇಕು. ಅದಕ್ಕೆ ಡಾ. ಬಿ ಆರ್ ಅಂಬೇಡ್ಕರ್ ಅವರೇ ನಮಗೆ ಬಹುದೊಡ್ಡ ಮಾದರಿ ಮತ್ತು ಮಾರ್ಗದಾತರಾಗಿದ್ದಾರೆ” ಎಂದು ಹೇಳಿದರು.

“ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಸಮಾನತೆಯ ಅಸ್ಪೃಶ್ಯಭಾರತ ಭೂಗರ್ಭದಿಂದ ಪುಟಿದೆದ್ದ ಕ್ರಾಂತಿವಜ್ರ. ಅವರ ಜ್ಞಾನ, ಶೀಲ ಹಾಗೂ ಕ್ರಾಂತಿಯಾನವು ವಜ್ರದಷ್ಟೇ ಹೊಳಪುಳ್ಳದ್ದು ಹಾಗೂ ಮೌಲ್ಯಯುತವಾದದ್ದು. ಇಂತಹ ವಜ್ರದೀಪ್ತಿಯುಳ್ಳ ಡೈಮಂಡ್ ಸ್ಟಾರ್ ಆದ ಅಂಬೇಡ್ಕರ್ ಅವರನ್ನು ನಮ್ಮೆಲ್ಲರ ಎದೆಗಳಲ್ಲಿ ಬೆಳಗಿಕೊಳ್ಳಬೇಕಿದೆ” ಎಂದು ಅಭಿಪ್ರಾಯಪಟ್ಟರು.‌

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಂಬೇಡ್ಕರ್‌ ಹೇಳಿದಂತೆ ಭಾರತದಲ್ಲಿ ಪ್ರಜಾಪ್ರಭುತ್ವ, ಸಾಂವಿಧಾನಿಕ ನೈತಿಕತೆ ಸಾಮಾನ್ಯವಾಗಿಲ್ಲ: ಚಿಂತಕ ಶಿವಸುಂದರ್‌

ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಜಾನಪದ ಕಲಾವಿದರೂ ದಲಿತ ಸಾಹಿತ್ಯ ಪರಿಷತ್ತಿನ ಚಾಮರಾಜನಗರ ಜಿಲ್ಲಾಧ್ಯಕ್ಷರೂ ಆದ ಸಿ ಎಂ ನರಸಿಂಹಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಾನತೆಯ ಸಾಲುದೀಪಗಳು ಕುರಿತಾದ ಉಪನ್ಯಾಸದಲ್ಲಿ ‘ಮಾನವತೆಯ ಕ್ರಾಂತಿಜ್ಯೋತಿ ಸಾವಿತ್ರಿ ಬಾಫುಲೆ’ ಕುರಿತು ಚಾಮರಾಜನಗರ ವಿವಿಯ ಕನ್ನಡ ಅಧ್ಯಾಪಕಿ ಡಾ ಆರ್ ಶಶಿಕಲಾ ಅವರು ಮಾತನಾಡಿದರು. ‘ಬಾಬಾಸಾಹೇಬರ ಭೀಮಬಲ ರಮಾಬಾಯಿ ಅಂಬೇಡ್ಕರ್’ ಕುರಿತು ನಿವೃತ್ತ ಉಪನ್ಯಾಸಕಿ ಡಾ. ಸರಸ್ವತಿ ಹೊನ್ನಪ್ಪ ಅವರು ವಿಚಾರ ಮಂಡಿಸಿದರು. ಕೊಳ್ಳೇಗಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜು ಕೊಂಗರಹಳ್ಳಿ ಹಾಗೂ ಸಾಹಿತ್ಯ ಮಿತ್ರಕೂಟದ ಅಧ್ಯಕ್ಷ ದೊರೆಸ್ವಾಮಿ ಅವರು ಮುಖ್ಯ ಅತಿಥಿಗಳಾಗಿದ್ದರು. ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ಡಾ. ಕವಿತಾ ಡಿ ಎಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಗಮಕಿಗಳಾದ ಶಿವಣ್ಣ ಇಂದ್ವಾಡಿ, ವಿದ್ವಾಂಸ ಡಾ.ಆದೆಪ್ಪ ಕೆ ಹಂದಿಹಾಳ್, ದಸಾಪ ತಾಲೂಕು ಕಾರ್ಯದರ್ಶಿ ಡಾ.ದಿಲಿಪ್ ಎನ್ ಕೆ, ಹಿರಿಯರಾದ ಪುಟ್ಟ ಅರಸ ಶೆಟ್ಟಿ, ರಾಜಪ್ಪಾಜಿ, ರಾಮಣ್ಣ, ಭಾಗ್ಯಮ್ಮ, ಆನಂದರಾಜ್, ಶಿವಕುಮಾರ್ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X