ರಾಜ್ಯದ ವಿವಿಧೆಡೆ ‘ ಬಾಂಬ್ ಇಡಲಾಗಿದೆ ’ ಎಂದು ಸರ್ಕಾರಿ ಕಚೇರಿಗಳಿಗೆ ಬಂದ ‘ಇ–ಮೇಲ್’ ಸಂದೇಶ ಆತಂಕಕ್ಕೆ ಎಡೆ ಮಾಡಿತು.ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ, ಮೈಸೂರಿನ ಪೊಲೀಸ್ ಆಯುಕ್ತರ ಕಚೇರಿ,ರಾಯಚೂರು ಜಿಲ್ಲಾಧಿಕಾರಿ ಕಚೇರಿಗಳಿಗೆ ಬೆದರಿಕೆಯ ಇ – ಮೇಲ್ ಸಂದೇಶಗಳು ಬಂದಿವೆ.
ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಮೂಲಕ ಕಚೇರಿ, ಪ್ರಮುಖ ಸ್ಥಳಗಳ ತಪಾಸಣೆ ನಡೆಸಿದ ಪೊಲೀಸರು, ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದಾರೆ. ಇದೊಂದು ಹುಸಿ ಬೆದರಿಕೆಯಾಗಿದ್ದು ಭಯ ಪಡುವ, ಆತಂಕ ಪಡುವ ಅಗತ್ಯವಿಲ್ಲ ಎಂದು ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹೇಳಿಕೆ ನೀಡಿದ್ದಾರೆ.

ಬೆಳಿಗ್ಗೆ 7 -10 ರ ಸಮಯದಲ್ಲಿ ಅಜಿತ್ ಜಕ್ಕುಮೋಲಾ ಎಂಬ ಖಾತೆಯಿಂದ ಜಿಲ್ಲಾಧಿಕಾರಿ ಕಚೇರಿಯ ಅಧಿಕೃತ ಇ – ಮೇಲ್‌ಗೆ ಸಂದೇಶ ಬಂದಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಪೊಲೀಸ್ ಅಧೀಕ್ಷಕರಾದ ಬಿ.ಟಿ. ಕವಿತಾ ಕಚೇರಿಯ ಸಿಬ್ಬಂದಿಗಳನ್ನು ಹೊರ ಕಳುಹಿಸಿದ್ದಾರೆ. ಬಳಿಕ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಜಿಲ್ಲಾಡಳಿತ ಭವನವನ್ನು ಪೂರ್ತಿ ತಪಾಸಣೆ ನಡೆಸಿದರು. ಆದರೆ, ಬಾಂಬ್ ಪತ್ತೆಯಾಗಲಿಲ್ಲ. ‘ ಮೇಲ್ನೋಟಕ್ಕೆ ಹುಸಿ ಬಾಂಬ್ ಬೆದರಿಕೆಯಂತೆ ಕಂಡುಬಂದಿದ್ದು ಮುಂಜಾಗ್ರತಾ ಕ್ರಮವಾಗಿ ಭವನಕ್ಕೆ ಭದ್ರತೆ ಹೆಚ್ಚಿಸಲಾಗಿದೆ ’ ಎಂದು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ವಖ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶ : ಅಯೂಬ್ ಖಾನ್

ಜಿಲ್ಲಾಡಳಿತ ನೀಡಿರುವ ದೂರಿನ ಅನುಸಾರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂದೇಶ ರವಾನಿಸಿದವರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.