ನಟ ಉಪೇಂದ್ರ ಅವರು, ʼಊರು ಇದ್ದಲ್ಲಿ ಹೊಲಗೇರಿʼ ಎನ್ನುವ ಮಾತನ್ನು ಹೇಳುವುದರ ಮೂಲಕ ಜಾತಿ ನಿಂದನೆ ಮಾಡಿದ್ದು, ದಲಿತರ ಮನಸ್ಸನ್ನು ಘಾಸಿಗೊಳಿಸಿದ್ದಾರೆ. ಇಂತಹ ಖಂಡನಾರ್ಹ ಹೇಳಿಕೆ ನೀಡಿರುವ ನಟನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲೇಬೇಕು ಎಂದು ರೈತ ಮುಖಂಡ ಅನಗಳ್ಳಿ ಬಸವರಾಜು ಆಗ್ರಹಿಸಿದರು.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಮಸೀದಿ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ರೈತ ಮುಖಂಡ ಅನಗಳ್ಳಿ ಬಸವರಾಜು ನೇತೃತ್ವದಲ್ಲಿ ಹಲವು ಪ್ರಗತಿಪರ ಸಂಘಟನೆಗಳು ಒಗ್ಗೂಡಿ ನಟ ಉಪೇಂದ್ರ ಹೇಳಿಕೆ ವಿರುದ್ಧ ನಡೆಸಿದ ಬಾರುಕೋಲು ಚಳವಳಿಯಲ್ಲಿ ಮಾತನಾಡಿದರು.
“ನಟ ಉಪೇಂದ್ರ ಅವಹೇಳನಕಾರಿಯಾಗಿ ಮಾತನಾಡಿ ಘನ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿರಬಹುದು. ಆದರೆ, ಜಾತಿ ನಿಂದನೆ ಪ್ರಕಾರ ಜೈಲು ಶಿಕ್ಷೆ ಆಗಲೇಬೇಕು” ಎಂದು ಒತ್ತಾಯಿಸಿದರು.
“ಕೊಳ್ಳೇಗಾಲ ಪಟ್ಟಣದಲ್ಲಿ ಹಲವು ಸಂಘಟನೆಗಳು ಸೇರಿ ಈವರೆಗೆ ನಿರಂತರವಾಗಿ ಸುಮಾರು 35 ದಿನಗಳಿಂದ ಪ್ರತಿ ದಿನವೂ ವಿನೂತನ ಪ್ರತಿಭಟನೆ ನಡೆಸುತ್ತಾ ಬಂದಿದ್ದು, ತಾಲೂಕು ಆಡಳಿತದ ಮೂಲಕ ನಟ ಉಪೇಂದ್ರನಿಗೆ ಶಿಕ್ಷೆ ಆಗುವಂತೆ ಕೋರಿ ಮನವಿ ಸಲ್ಲಿಸಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಪಡಿತರದಲ್ಲಿ ಅಕ್ರಮ; 22 ನ್ಯಾಯಬೆಲೆ ಅಂಗಡಿಗಳ ಅಮಾನತು
“ಶನಿವಾರವೂ ಆಹಾರ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಜಾತಿ ನಿಂದನೆ ಮಾಡಿದ ಉಪೇಂದ್ರನ ಮೇಲೆ ಕೂಡಲೇ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಚಾಮರಾಜು, ಅಕ್ರಮ ಉಲ್ಲಾ ಖಾನ್ ಸೇರಿದಂತೆ ಹಲವು ಮುಖಂಡರು ಇದ್ದರು.