ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ನಷ್ಟದ ಬಗ್ಗೆ ಜಂಟಿ ಸಮೀಕ್ಷೆ ನಡೆಸುವಂತೆ ಚಾಮರಾಜನಗರ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಮುಂಗಾರು ಬಿತ್ತನೆಯ ನಂತರದ ನಿರ್ಣಾಯಕ ತಿಂಗಳುಗಳಾದ ಜೂನ್ ಮತ್ತು ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಶೇ.30ರಷ್ಟು ಮಳೆಯ ಕೊರತೆ ದಾಖಲಾಗಿರುವುದರಿಂದ, ಸಮೀಕ್ಷೆ ಮಹತ್ವವನ್ನು ಪಡೆದುಕೊಂಡಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಸೆಂಟರ್ (ಕೆಎಸ್ಎನ್‌ಡಿಎಂಸಿ) ವರದಿಗಳ ಪ್ರಕಾರ, “ಜಿಲ್ಲೆಯಲ್ಲಿ ಶೇ.30 ರಷ್ಟು ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಬೆಳೆಹಾನಿಗೆ ಕಾರಣವಾಗಿದೆ. ಬೆಳೆದ ಬೆಳೆಗಳು ಒಣಗಿರುವುದರಿಂದ ಬೆಳೆ ಇಳುವರಿ ಕಡಿಮೆಯಾಗುತ್ತದೆ. ಇದೇ ರೀತಿ ಒಣ ಹವೆ ಮುಂದುವರೆದರೆ ಬೆಳೆಯ ಉತ್ಪಾದಕತೆಯ ಮೇಲೂ ಪರಿಣಾಮ ಬೀರುತ್ತದೆ” ಎಂದು ತಿಳಿದುಬಂದಿದೆ.
“ಜೂನ್‌ನಿಂದ ಆಗಸ್ಟ್ ಮೊದಲ ವಾರದವರೆಗೆ ಸರಾಸರಿ 138 ಮಿಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ ಕೇವಲ 96 ಮಿಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 248 ಮಿಮೀ ದಾಖಲೆಯ ಮಳೆಯಾಗಿದ್ದು, ಪ್ರವಾಹಕ್ಕೆ ಕಾರಣವಾಯಿತು. ಈ ಹಿಂದೆ ಸುರಿದ ಮಳೆಯಿಂದಾಗಿ ಜಿಲ್ಲಾದ್ಯಂತ 290ಕ್ಕೂ ಹೆಚ್ಚು ದೊಡ್ಡ ಮತ್ತು ಸಣ್ಣ ಕೆರೆಗಳು ತುಂಬಿದ್ದವು. ಆದರೆ ಈ ವರ್ಷ ಹೆಚ್ಚು ಮಳೆಯಿಲ್ಲದೆ ಪರಿಸ್ಥಿತಿ ಮಂಕಾಗಿದೆ” ಎಂದು ಕೆಎಸ್‌ಎನ್‌ಡಿಎಂಸಿ ವರದಿ ಮಾಡಿದೆ.
“ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಶೇ.42ರಷ್ಟು ಮಾತ್ರ ಬಿತ್ತನೆಯಾಗಿದೆ. 1,17,897 ಎಕರೆ ಪ್ರದೇಶದ ಪೈಕಿ ಆಗಸ್ಟ್ ಮೊದಲ ವಾರದೊಳಗೆ 49,867 ಎಕರೆ ಪ್ರದೇಶದಲ್ಲಿ ಮಾತ್ರ ಬಿತ್ತನೆ ಪೂರ್ಣಗೊಂಡಿದೆ” ಎನ್ನಲಾಗಿದೆ.
ಬೆಳೆಗಳ ಡ್ರೋನ್ ಸಮೀಕ್ಷೆ
ಜಿಲ್ಲೆಯಲ್ಲಿ ಕಳೆದ ತಿಂಗಳು ಕೃಷಿ ಮತ್ತು ತೋಟಗಾರಿಕೆ ಭೂಮಿಯಲ್ಲಿ ಬೆಳೆದ ಬೆಳೆಹಾನಿ ಬಗ್ಗೆ ಡ್ರೋನ್ ಸಮೀಕ್ಷೆ ನಡೆಸಿದ್ದರೂ, ಈಗ ಆಡಳಿತವು ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಮತ್ತು ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳನ್ನು ಒಳಗೊಂಡ ತಂಡದಿಂದ ಜಂಟಿ ಸಮೀಕ್ಷೆ ಪ್ರಾರಂಭಿಸಿದೆ.
ಜಂಟಿ ಸಮೀಕ್ಷೆಯ ಮೇಲ್ವಿಚಾರಣೆ, ಒಂದು ವಾರದೊಳಗೆ ಪೂರ್ಣಗೊಳಿಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗಾ ಅವರು ತಹಶೀಲ್ದಾರ್‌ಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.
“ಕೃಷಿ ಇಲಾಖೆ ನಡೆಸಿದ ಪ್ರಾಥಮಿಕ ಸಮೀಕ್ಷೆಯಲ್ಲಿ, ಅಂದಾಜು 23,084 ಎಕರೆ ಭೂಮಿಯಲ್ಲಿ ರೈತರು ಬಿತ್ತನೆ ಮಾಡಿದ ಸೂರ್ಯಕಾಂತಿ, ಹತ್ತಿ, ಮೆಕ್ಕೆಜೋಳ, ದ್ವಿದಳ ಧಾನ್ಯಗಳಂತಹ ಬೆಳೆಗಳು ಒಣಗುತ್ತಿರುವುದು ಕಂಡುಬಂದಿದೆ” ಎಂದು ಜಂಟಿ ಕೃಷಿ ನಿರ್ದೇಶಕ ಎಂ ಮಧುಸೂದನ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಾನೂನುಬಾಹಿರ ಅಡ್ಡಾಗಳ ಮೇಲೆ ಪೊಲೀಸ್ ದಾಳಿ: ಪ್ರಕರಣ ದಾಖಲು
“ಜೂನ್ ಮತ್ತು ಜುಲೈನ ಮಳೆಯ ಕೊರತೆಯಿಂದಾಗಿ ಈ ವರ್ಷ ಬೆಳೆ ಇಳುವರಿ ಶೇ. 25ರಿಂದ 75 ರಷ್ಟು ಕಡಿಮೆಯಾಗುತ್ತದೆ” ಎಂದು ಅವರು ಹೇಳಿದರು.
“ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಮುಂಗಾರಿನ ಬೆಳೆ ಹಾನಿಯನ್ನು ಮೌಲ್ಯಮಾಪನ ಮಾಡಿದ ಬಳಿಕ ರಾಜ್ಯ ಕಂದಾಯ ಇಲಾಖೆಗೆ ವರದಿಯನ್ನು ಕಳುಹಿಸಲಾಗುವುದು” ಎಂದು ಚಾಮರಾಜನಗರ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ತಿಳಿಸಿದ್ದಾರೆ.