ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಜನತಾ ಕಾಲೋನಿಯಲ್ಲಿ ನಗರೋತ್ಥಾನ ಯೋಜನೆಯಡಿ ಚರಂಡಿ ಕಾಮಗಾರಿ ನಡೆಸುತ್ತಿದ್ದ ವೇಳೆ ವೀರಗಲ್ಲು ಮತ್ತು ಶಾಸನಗಳು ಪತ್ತೆಯಾದ ಸ್ಥಳಕ್ಕೆ ಶಾಸಕ ಎಚ್ ಎಂ ಗಣೇಶಪ್ರಸಾದ್ ಹಾಗೂ ಜಿಲ್ಲಾಧಿಕಾರಿ ಶಿಲ್ಪನಾಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚರಂಡಿ ಕಾಮಗಾರಿ ನಡೆಯುತ್ತಿದ್ದ ಸಮಯದಲ್ಲಿ ಶುಕ್ರವಾರ ಸುಮಾರು 5 ವೀರಗಲ್ಲು ಪತ್ತೆಯಾಗಿದ್ದು, ಇನ್ನಷ್ಟು ವೀರಗಲ್ಲುಗಳು ಮಣ್ಣಿನಲ್ಲಿ ಹುದುಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ದೊರಕಿರುವ ವೀರಗಲ್ಲುಗಳನ್ನು ಪುರಸಭೆಯವರು ಸ್ವಚ್ಛಗೊಳಿಸಿ ಮೈಸೂರಿನ ಪ್ರಾಚ್ಯ ವಸ್ತು ಸಂಗ್ರಹಾಲಯಕ್ಕೆ ರವಾನಿಸುವುದಾಗಿ ತಿಳಿಸಿದ್ದು, ಉಳಿದ ವೀರಗಲ್ಲುಗಳನ್ನು ಪಟ್ಟಣದ ಪರವಾಸು ದೇವಾಲಯದಲ್ಲಿ ಸಂರಕ್ಷಣೆ ಮಾಡಲು ತೀರ್ಮಾನಿಸಿದ್ದಾರೆ.
“ಪಟ್ಟಣದ ಜನತಾ ಕಾಲೋನಿಯಲ್ಲಿ ದೊರೆತಿರುವ ವೀರಗಲ್ಲು ಮತ್ತು ಶಾಸನಗಳು ಬಹಳ ಪುರಾತನ ಕಾಲದವುಗಳಾಗಿದ್ದು, ಯಾರ ಕಾಲ ಮತ್ತು ಯಾವ ರಾಜರ ಅವಧಿ ಶಾಸನಗಳು ಎಂಬುದನ್ನು ಪತ್ತೆ ಹಚ್ಚಿ ಹಾಗೂ ಮಣ್ಣಿನಲ್ಲಿ ಹುದುಗಿ ಹೋಗಿರುವ ಇಂತಹ ಬಹಳಷ್ಟು ಶಾಸನಗಳನ್ನು ತೆಗೆಯಲು ಉತ್ಖನನ ನಡೆಸಿ ಅವುಗಳನ್ನು ರಕ್ಷಣೆ ಮಾಡಬೇಕು” ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಸುರೇಶ್ ನಾಯಕ್ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ
“ಈಗಾಗಲೇ ಪ್ರಾಚ್ಯ ವಸ್ತು ಸಂಗ್ರಹಾಲಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಲ್ಲಿ ದೊರೆತ ವೀರಗಲ್ಲು ಮತ್ತು ಶಾಸನಗಳನ್ನು ಸಂಗ್ರಹಿಸಿ ಪರೀಕ್ಷಿಸಲಿದ್ದಾರೆ. ನಂತರ ಅವುಗಳ ಕುರಿತು ನಿಖರ ಮಾಹಿರಿ ತಿಳಿಯಲಿದೆ” ಎಂದು ತಹಶೀಲ್ದಾರ್ ಟಿ ರಮೇಶ್ ಬಾಬು ಪ್ರತಿಕ್ರಿಯೆ ನೀಡಿದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ, ಪುರಸಭೆ ಸದಸ್ಯ ಮಧುಸೂದನ್, ಪೊಲೀಸ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ ಇದ್ದರು.