ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಮೈಸೂರು ಆಕಾಶವಾಣಿ ಹಾಗೂ ಕರ್ನಾಟಕ ಜಾನಪದ ಅಕಾಡಮಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗೂ ಜಾನಪದ ಅಕಾಡಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಗೌರಮ್ಮ ಅವರಿಗೆ ಶಾಲು ಹೊದಿಸಿ ಫಲ, ತಾಂಬೂಲ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
‘ ಸೋ ಎನ್ನಿರೇ, ಸೋಬಾನ ಎನ್ನಿರೇ ‘ ಸೋಬಾನೆ ಪದಗಳನ್ನು ಮದುವೆ, ಜಾತ್ರೆ, ಉತ್ಸವಗಳು ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಲ್ಲಿ ಹಾಡುತ್ತಾ ಹೆಸರುವಾಸಿಯಾಗಿ ಕರ್ನಾಟಕ ಜಾನಪದ ಅಕಾಡಮಿಯ 2023ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪಡೆದಿರುವ ಹೊನ್ನೂರು ಗೌರಮ್ಮ ಅವರನ್ನು ಚಾಮರಾಜನಗರ ಜಿಲ್ಲಾಡಳಿತ ಹಾಗೂ ಜಾನಪದ ಅಕಾಡಮಿಯಿಂದ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ ” ಗಡಿ ಜಿಲ್ಲೆ ಚಾಮರಾಜನಗರ ಸಾಕಷ್ಟು ಅರಣ್ಯ ಪ್ರದೇಶಗಳಿಂದ ಕೂಡಿರುವ ಸಂಪದ್ಭರಿತ, ಸುಂದರ ಜಿಲ್ಲೆಯಾಗಿದೆ. ಜಾನಪದ ಕಲೆಗಳ ತವರೂರು ಸಹ ಚಾಮರಾಜನಗರವೇ ಆಗಿದೆ. ನಶಿಸಿ ಹೋಗುತ್ತಿರುವ ಜಾನಪದ ಕಲೆಗಳಿಗೆ ಪುನಶ್ಛೇತನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಅಕಾಡಮಿ ಜಿಲ್ಲೆಯ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ.
ಜಾನಪದ ಕಲೆಗಳು, ಹಾಡುಗಳು ಇನ್ನಷ್ಟು ಪಸರಿಸಿ ಬೆಳಕಿಗೆ ಬರಬೇಕು. ಆಕಾಶವಾಣಿ ಈ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಅದರಲ್ಲೂ, ಮದುವೆ, ಉತ್ಸವಗಳಂತಹ ಶುಭ ಸಮಾರಂಭಗಳಲ್ಲಿ ಹಾಡುವ ಸೋಬಾನೆ ಪದಗಳನ್ನು ಸಂಗ್ರಹಿಸಿ ದಾಖಲೀಕರಣ ಮಾಡಲು ಮುಂದಾಗಬೇಕು. ಹೊನ್ನೂರು ಗೌರಮ್ಮ ಇನ್ನಷ್ಟು ಕಾಲ ಜೀವಿಸಿ ಮತ್ತಷ್ಟು ಮದುವೆಗಳನ್ನು ಮಾಡಿಸಲಿ ” ಎಂದು ಹಾರೈಸಿದರು.
ಕರ್ನಾಟಕ ಜಾನಪದ ಅಕಾಡಮಿಯ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ ” ಅಕಾಡಮಿಯ ವಾರ್ಷಿಕ ಪ್ರಶಸ್ತಿಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಕಲಾವಿದರನ್ನು ಪರಿಗಣಿಸಲಾಗುತ್ತಿದೆ. 2023ರ ಸಾಲಿನ ಪ್ರಶಸ್ತಿಗೆ ಜಿಲ್ಲೆಯ ಹೊನ್ನೂರು ಗೌರಮ್ಮ ಆಯ್ಕೆಯಾಗಿದ್ದರು. ಪ್ರಶಸ್ತಿ ಪ್ರಧಾನ ಸಮಾರಂಭವು 2025ರ ಮಾರ್ಚ್ 15ರಂದು ಬೀದರ್‍ನಲ್ಲಿ ಆಯೋಜಿತವಾಗಿತ್ತು. ಸೋಬಾನೆ ಕಲಾವಿದೆ, ಹುಟ್ಟು ಅಂಧರಾಗಿದ್ದು, ಅನಿವಾರ್ಯ ಕಾರಣಗಳಿಂದ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಲ್ಲಿಯೇ ಬಂದು ಗೌರವಿಸಲಾಗಿದೆ ” ಎಂದು ಹೇಳಿದರು.
ಅಕಾಡಮಿಯ ಸದಸ್ಯರು ಹಾಗೂ ಮೈಸೂರು ಆಕಾಶವಾಣಿಯ ಡಾ. ಉಮೇಶ್ ಮಾತನಾಡಿ ‘ ಇಂದಿನ ವಿಜ್ಞಾನ, ತಂತ್ರಜ್ಞಾನ ಯುಗದಲ್ಲೂ ಜಾನಪದ ಕಲೆಗಳು, ಹಾಡುಗಳು ತಮ್ಮ ಜೀವಂತಿಕೆ ಕಂಡುಕೊಂಡಿವೆ. ಸೋಬಾನೆ ಪದಗಳು ಕೇವಲ ರಂಜನೀಯವಲ್ಲ. ಅವು ಮದುವೆಯಾಗುವ ಹೊಸ ಜೋಡಿಗಳಿಗೆ ಮುಂದಿನ ಬದುಕಿನ ಮೌಲ್ಯಗಳನ್ನು ಕಟ್ಟಿಕೊಡುವ ಮಾರ್ಗದರ್ಶಿಗಳಾಗಿವೆ ‘ ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಬಿಹಾರ ಬುದ್ಧಗಯಾ ವಿಹಾರವನ್ನು ಬೌದ್ಧರ ಸುಪರ್ಧಿಗೆ ಒಪ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ, ಕರ್ನಾಟಕ ಜಾನಪದ ಅಕಾಡಮಿ ರಿಜಿಸ್ಟ್ರಾರ್ ನಮ್ರತಾ, ಜನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ, ಇತರರು ಕಾರ್ಯಕ್ರಮದಲ್ಲಿ ಇದ್ದರು.