ಮೂರು ಕಾಡು ಬೆಕ್ಕುಗಳನ್ನು ಕೊಂದು ಹಾಗೂ ನಾಲ್ಕು ಜೀವಂತ ಮೊಲಗಳನ್ನು ಬೇಟೆಯಾಡಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಬಫರ್ ಜೋನ್ ವಲಯ ವ್ಯಾಪ್ತಿಯ ಹಕ್ಕಲಾಪುರ ಗ್ರಾಮದ ಕೆರೆಯಂಗಳದಲ್ಲಿ ನಡೆದಿದೆ.
ಬನ್ನಿತಾಳಪುರ ಗ್ರಾಮದ ಮಹದೇವಶೆಟ್ಟಿ(50), ಮಾದಶೆಟ್ಟಿ(50) ಬಂಧಿತ ಆರೋಪಿಗಳು. ಉಳಿದ ಮೂವರು ಆರೋಪಿಗಳಾದ ಗೋಪಾಲಯ್ಯ(35), ಕರಿಶೆಟ್ಟಿ(43), ಮಹೇಶ(45) ಎಂಬುವವರು ನಾಪತ್ತೆಯಾಗಿದ್ದಾರೆ.
ಬನ್ನಿತಾಳಪುರ ಗ್ರಾಮದಿಂದ ಹಕ್ಕಲಾಪುರ ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆಯಲ್ಲಿ ಮೂರು ಕಾಡು ಬೆಕ್ಕುಗಳನ್ನು ಕೊಂದು ಹಾಗೂ ನಾಲ್ಕು ಜೀವಂತ ಮೊಲಗಳನ್ನು ಬೇಟೆಯಾಡಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮಾಹಿತಿ ಆಧರಿಸಿ ಅರಣ್ಯ ಸಂರಕ್ಷಣಾಧಿಕಾರಿ ಡಾ ಪಿ ರಮೇಶ್ ಕುಮಾರ್ ಹಾಗೂ ಎಸಿಎಫ್ ನವೀನ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಹಿತ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಇವರ ಬಂಧನಕ್ಕೆ ತಂಡ ರಚಿಸಿದ್ದು, ಕಾರ್ಯಾಚರಣೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಹುಲಿ ಉಗುರು ಧರಿಸಿದ ಪ್ರಕರಣ; ಧನಂಜಯ ಗುರೂಜಿಗೆ ಸಂಕಷ್ಟ
ಕಾರ್ಯಾಚರಣೆಯಲ್ಲಿ ಪ್ರಭಾರ ವಲಯ ಅರಣ್ಯಾಧಿಕಾರಿ ನರೇಶ್, ನವೀನ್ ಕುಮಾರ್, ಸಿಬ್ಬಂದಿ ವರ್ಗದವರಾದ ಕಿರಣ್ ಕುಮಾರ್, ರಮೇಶ್ ಮಠಪತಿ, ಕುಮಾರ್, ಕರಿಗೌಡ, ಬಸವೇಗೌಡ, ಗಸ್ತು ವನಪಾಲಕ ಶಂಕರಪ್ಪ, ಶ್ರೀಕಾಂತ್, ರಮೇಶ, ಸುರೇಶ ಸೇರಿದಂತೆ ಇತರರು ಹಾಜರಿದ್ದರು.