ಜಿಂಕೆ ಕೊಂಬುಗಳನ್ನು ಅಕ್ರಮವಾಗಿ ಬೈಕ್‌ನಲ್ಲಿ ಸಾಗಾಟ ಮಾಡುತ್ತಿದ್ದ ಇಬ್ಬರು ಹಾಗೂ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಅಕ್ರಮವಾಗಿ ಮದ್ದು ಗುಂಡುಗಳನ್ನು ಸಾಗಣೆ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಕೊಳ್ಳೇಗಾಲ ನಗರದ ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಚೆನ್ನಲಿಂಗನಹಳ್ಳಿ ಬಸ್ ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳು ಬೈಕಿನಲ್ಲಿ ಜಿಂಕೆಯ ಒಣಗಿದ ಕೊಂಬುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.
ಹನೂರು ತಾಲೂಕಿನ ಹುಣಸೆಪಾಳ್ಯ ಗ್ರಾಮದ ಈರಣ್ಣ ಮತ್ತು ಆರ್ಯ ಎಂ. ಬಂಧಿತ ಆರೋಪಿಗಳು. ಇವರಿಂದ 12 ಜಿಂಕೆ ಕೊಂಬು ಹಾಗೂ ಹೋಂಡಾ ಶೈನ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಜಿಂಕೆ ಕೊಂಬುಗಳನ್ನು ಮಾರಾಟ ಮಾಡುವ ಸಲುವಾಗಿ ಸಾಗಾಣಿಕೆ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡ ಅರಣ್ಯ ಸಂಚಾರ ದಳದ ಪಿಎಸ್ಐ ವಿಜಯರಾಜು ಹಾಗೂ ಸಿಬ್ಬಂದಿ ಚೆನ್ನಾಲಿಂಗನಹಳ್ಳಿ ಗ್ರಾಮದ ಬಳಿಯ ಅಡ್ಡರಸ್ತೆಯಲ್ಲಿರುವ ಬಸ್ ನಿಲ್ದಾಣದಲ್ಲಿ ದಾಳಿ ನಡೆಸಿ, ಆರೋಪಿಗಳನ್ನು ಜಿಂಕೆ ಕೊಂಬುಗಳ ಸಮೇತ ಬಂಧಿಸಿದ್ದಾರೆ. ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಗರದ ಅರಣ್ಯ ಸಂಚಾರ ದಳದ ಪೊಲೀಸರು, ಗ್ರಾಮಾಂತರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಕಾಡು ಪ್ರಾಣಿಗಳನ್ನು ಬೇಟೆಯಾಡಲು ಅಕ್ರಮವಾಗಿ ಮದ್ದು ಗುಂಡುಗಳನ್ನು ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ತಾಲೂಕಿನ ಕೊತ್ತನೂರು ಗ್ರಾಮದಲ್ಲಿ ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಕ.ಕ.ಭಾಗದ ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ದಿನೇಶ್ ಗುಂಡೂರಾವ್
ತಾಲೂಕಿನ ಜಾಗೈರಿಯ ಸಿ ಆರ್ ನಗರದ ನಿವಾಸಿ ಸಗಯ್ ರಾಜ್(47) ಬಂಧಿತ ಆರೋಪಿ. ಈತನಿಂದ 9 ಸಿಡಿಮದ್ದು ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಕಾಡು ಪ್ರಾಣಿಗಳನ್ನು ಬೇಟೆಯಾಡುವ ಸಲುವಾಗಿ ತಾಲೂಕಿನ ಕೊತ್ತನೂರು ಕೆರೆ ಏರಿ ಮೇಲೆ ಸೈಕಲ್‌ನಲ್ಲಿ ಅಕ್ರಮವಾಗಿ ಸಿಡಿಮದ್ದು ಗುಂಡು ಇಟ್ಟುಕೊಂಡು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿ ಕೊಳ್ಳೆಗಾಲ ಗ್ರಾಮಾಂತರ ಠಾಣೆಗೆ ಒಪ್ಪಿಸಿದ್ದಾರೆ.
ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಂಗಕ್ಕೆ ಒಪ್ಪಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.