ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕತೆಗೆ ಅನುಗುಣವಾಗಿ ಶಿಕ್ಷಣ ನೀಡಿ ಮಕ್ಕಳ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಹೇಳಿದರು.
ಚಾಮರಾಜನಗರದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಇಂದು ಪುಸ್ತಕಗಳಿಗಿಂತ ಕಂಪ್ಯೂಟರ್, ಮೊಬೈಲ್‍ಗಳಲ್ಲಿ ಶಿಕ್ಷಣದ ಹೆಚ್ಚಿನ ಜ್ಞಾನ ದೊರೆಯುತ್ತಿದೆ. ತಂತ್ರಜ್ಞಾನದ ಜತೆಗೆ ವೇಗವಾಗಿ ಬೆಳೆಯುತ್ತಿರುವ ಈಗಿನ ಶಿಕ್ಷಣ ಕ್ಷೇತ್ರದ ವ್ಯವಸ್ಥೆಗೆ ಹೊಂದಿಕೊಳ್ಳುವುದು ಶಿಕ್ಷಕರಿಗೆ ಅನಿವಾರ್ಯವಾಗಿದೆ” ಎಂದು ಸಚಿವರು ಅಭಿಪ್ರಾಯಪಟ್ಟರು.
“ಶಿಕ್ಷಕರು ವೇಗವಾಗಿ ಕಲಿಯದಿದ್ದರೆ ಮಕ್ಕಳಿಗೆ ಕಲಿಸಲು ಸಾಧ್ಯವಿಲ್ಲ. ಹಿಂದೆ ಜ್ಞಾನಕ್ಕಾಗಿ ಶಿಕ್ಷಣವಿತ್ತು. ಈಗ ಶಿಕ್ಷಣ ಕ್ಷೇತ್ರ ಸ್ಪರ್ಧಾತ್ಮಕವಾಗಿದ್ದು, ಕಲಿಕಾ ಪ್ರಕ್ರಿಯೆಯಲ್ಲಿ ಶಿಕ್ಷಕರಿಗೆ ಸಾಕಷ್ಟು ಸವಾಲುಗಳು ಎದುರಾಗಿವೆ. ಹಾಗಾಗಿ ಶಿಕ್ಷಕರಿಗೆ ಚಾಣಾಕ್ಷತೆಯಿಂದ ನಿಭಾಯಿಸುವ ಜವಾಬ್ದಾರಿ ಬೇಕು” ಎಂದರು.
“ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿದೆ. ಖಾಸಗಿ ಶಾಲೆಗಳ ಪೈಪೋಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಈ ಬಗ್ಗೆ ಚಿಂತನೆ ಅವಶ್ಯವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ಅಗತ್ಯ ಮಾರ್ಗದರ್ಶನ ನೀಡಿ ಲಭ್ಯವಿರುವ ಸೌಲಭ್ಯ, ಸಂಪನ್ಮೂಲಗಳನ್ನು ಬಳಸಿಕೊಂಡು ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸಬೇಕು. ಅಲ್ಲದೆ ಮುಂದಿನ ಪೀಳಿಗೆಗೆ ಸರ್ಕಾರಿ ಶಾಲೆಗಳನ್ನು ಉಳಿಸಿ, ಮುಂದುವರೆಸುವ ಮಹತ್ತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ” ಎಂದರು.
ನಿವೃತ್ತ ಪ್ರಾಂಶುಪಾಲ ಎಂ ಕೃಷ್ಣೇಗೌಡ ಮಾತನಾಡಿ, “ಇಡೀ ಸಮಾಜದಲ್ಲಿ ಹೆಚ್ಚು ಮಾತನಾಡುವ ಅವಕಾಶ ಶಿಕ್ಷಕರಿಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಹಳ ಕಾಲ ಉಳಿಯುವ ವ್ಯಕ್ತಿ ಎಂದರೆ ಅವರು ಶಿಕ್ಷಕರು ಮಾತ್ರ. ನಮ್ಮ ನಂತರದ ಪೀಳಿಗೆಗೆ ಮಾರ್ಗದರ್ಶನ ಮಾಡುವ ಹಂತದಲ್ಲಿ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಶಿಕ್ಷಕರು ಶಿಕ್ಷಕ ವೃತ್ತಿಯನ್ನು ಪ್ರೀತಿಸಿ ಗೌರವಿಸಬೇಕು. ಈ ದೇಶದ ಭವಿಷ್ಯ ಅಡಗಿರುವುದು ಶಾಲೆಗಳಲ್ಲಿ, ತರಗತಿಗಳಲ್ಲಿ ಆಗಿರುವುದರಿಂದ ಶಿಕ್ಷಕರ ಜವಾಬ್ದಾರಿ ಅಧಿಕವಾಗಿದೆ. ಸಾತ್ವಿಕತೆಯಲ್ಲಿ ಶಕ್ತಿಯಿದೆ ಎಂಬುದನ್ನು ತೋರಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಶಿರೂರು ದುರಂತ | ಎರಡು ತಿಂಗಳ ಬಳಿಕ ಲಾರಿ ಸಹಿತ ಚಾಲಕ ಅರ್ಜುನ್ ಶವ ಪತ್ತೆ
ಅಧ್ಯಕ್ಷತೆ ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ ಪುಟ್ಟರಂಗಶೆಟ್ಟಿ ಶಿಕ್ಷಕ ವೃತ್ತಿಯಲ್ಲಿ ಸಾಧನೆಗೈದ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಸ್ಮರಣಿಕೆ, ಸೇವೆಯಿಂದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಿ ಮರಿಸ್ವಾಮಿ, ನಗರಸಭೆ ಅಧ್ಯಕ್ಷ ಎಸ್ ಸುರೇಶ್ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್, ನಗರಸಭೆ ಉಪಾಧ್ಯಕ್ಷೆ ಮಮತ ಬಾಲಸುಬ್ರಹ್ಮಣ್ಯಂ, ಸದಸ್ಯ ಎಂ ಮಹೇಶ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್ ವಿ ಚಂದ್ರು, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ ಟಿ ಕವಿತ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಡಯಟ್ ಪ್ರಾಂಶುಪಾಲ ಕಾಶಿನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.
