ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ತಾಲೂಕು ಆಡಳಿತ, ಶಾಸಕ ಎಚ್.ಎಂ ಗಣೇಶ್ ಪ್ರಸಾದ್ ಹಾಗೂ ಜಿಲ್ಲಾಧಿಕಾರಿ ಶಿಲ್ಪ ನಾಗ್ ಅವರು ಗುಂಡ್ಲುಪೇಟೆಯಲ್ಲಿ ಜನತಾದರ್ಶನ ಕಾರ್ಯಕ್ರಮ ನಡೆಸಿದ್ದಾರೆ.
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಪತಿಯನ್ನು ಕಳೆದು ಕಳೆದುಕೊಂಡು ಮಹಿಳೆ ಲಕ್ಕೂರು ಗ್ರಾಮದ ಸವಿತಾ ಅವರು ಸರ್ಕಾರಿ ಕಚೇರಿಯಲ್ಲಿ ಉದ್ಯೋಗ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಮನವಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಶಿಲ್ಪನಾಗ್ ರವರು ಸರ್ಕಾರಕ್ಕೆ ಈಗಾಗಲೇ ಆಕ್ಸಿಜನ್ ದುರಂತದಲ್ಲಿ ಮರಣ ಹೊಂದಿದವರ ಪಟ್ಟಿಯನ್ನು ನೀಡಲಾಗಿದೆ. ಕೆಲಸ ಕೊಡಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
“ಹಿರಿಕಾಟಿ ಗ್ರಾಮದಲ್ಲಿ ಹೋಗಲು ದಾರಿ ಬಿಡಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೂ, ಸಂಬಂಧಪಟ್ಟ ಇಲಾಖೆಯವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಪೊಲೀಸ್ ಇಲಾಖೆಯ ಸಹಾಯದೊಂದಿಗೆ ದಾರಿ ಬಿಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾಡು ಪ್ರಾಣಿಗಳ ಹಾವಳಿ ತಡೆಗೆ ಕ್ರಮ ತೆಗೆದುಕೊಳ್ಳಬೇಕು. ಕಾಡು ಪ್ರಾಣಿಗಳ ದಾಳಿಯಿಂದ ಆದ ಸಮಸ್ಯೆ ಮತ್ತು ನಷ್ಟಕ್ಕೆ ಪರಿಹಾರ ನೀಡುವಂತೆ ಮನವಿಗಳು ಬಂದಿವೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.
ಮಡ್ರಳ್ಳಿ ಗ್ರಾಮದ ನವೀನ್ ಎಂಬುವವರು ತಮ್ಮ ತಾಯಿಯನ್ನು ನಿಂದಿಸಿ ಕೊಲೆ ಮಾಡಲು ಯತ್ನಿಸಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಸರ್ಕಲ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಅವರನ್ನು ಸ್ಥಳಕ್ಕೆ ಕರೆದ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಜನತಾದರ್ಶನ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗ ಅಧಿಕಾರಿ ಮಹೇಶ್, ತಾಲೂಕು ದಂಡಾಧಿಕಾರಿ ಟಿ ರಮೇಶ್ ಬಾಬು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ಪುರಸಭೆ ಮುಖ್ಯ ಅಧಿಕಾರಿ ವಸಂತ್ ಕುಮಾರಿ, ಸರ್ಕಲ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಇದ್ದರು.