ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಚಾಮರಾಜ ನಗರ ಜಿಲ್ಲೆಯಲ್ಲಿಯೂ ಸಹ ಚುರುಕುಗೊಂಡಿದೆ.
ಜಿಲ್ಲೆಯಲ್ಲಿ ಕಳೆದೆರೆಡು ದಿನಗಳ ಹಿಂದೆ ಹಲವೆಡೆ ನೆರೆ ಬಂದು ಗ್ರಾಮಗಳು ಜಲಾವೃತ ಆಗಿವೆ. ಸೇತುವೆ ಮೇಲೆ ನೀರು ಹರಿದಿದ್ದು, ಮನೆಗಳಿಗೆ ನೀರು ನುಗ್ಗಿ ಸಂಕಷ್ಟ ಉಂಟಾಗಿದೆ.
ಆದರೆ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದಾಸನಪುರದಲ್ಲಿ ಕಾವೇರಿ ನೀರಿನ ಹರಿವಿನ ಮಟ್ಟ ಏರಿದ ಕಾರಣ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ನಾಲ್ಕು ದಿನಗಳ ಕಾಲ ಶಾಲೆಯಲ್ಲಿ ಪುನರ್ವಸತಿ ಕಲ್ಪಿಸಿದ್ದರು. ಜಾನುವಾರುಗಳಿಗೆ ಸ್ಥಳೀಯ ಅಧಿಕಾರಿಗಳು ಬೇರೆಯದೆ ವ್ಯವಸ್ಥೆ ಕಲ್ಪಿಸಿದ್ದರು.
ಇಷ್ಟಕ್ಕೆ ಸಮಸ್ಯೆ ಮುಗಿಯಲಿಲ್ಲ. ಸಂತ್ರಸ್ತರು ಮರಳಿ ತಮ್ಮ ತಮ್ಮ ಮನೆಗೆ ಮರಳಲೇ ಬೇಕು. ಅದರಲ್ಲಿ ಕಡು ಬಡವರಾದ ಬಸವಯ್ಯ ಹಾಗೂ ಲಕ್ಷ್ಮಮ್ಮ ದಂಪತಿಗಳೂ ಸೇರಿದ್ದಾರೆ. ಇವರು ಜೀವನಕ್ಕಾಗಿ ಈ ಇಳಿವಯಸ್ಸಿನಲ್ಲೂ ಸಹ ಆಡು ಕುರಿ ಸಾಕುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ನೆರೆ ಬಂದು ಗುಡಿಸಲಿಗೆ ನೀರು ನುಗ್ಗಿದಾಗ, ದಿಕ್ಕೇ ತೋಚದೆ ಅಸಹಾಯಕತೆಯಿಂದ ಪುನರ್ವಸತಿ ಕೇಂದ್ರಕ್ಕೆ ತೆರಳಿದ್ದರು. ಮಕ್ಕಳಿದ್ದರೂ ಕೂಡ ಯಾರ ಒತ್ತಾಸೆಯೂ ಇರದೆ ತಮಗೆ ತಾವೇ ದುಡಿದು ಕಷ್ಟದ ಜೀವನ ಸಾಗಿಸುತ್ತಿದ್ದಾರೆ.
ವೃದ್ಧ ಬಸವಯ್ಯ ಈ ದಿನ.ಕಾಮ್ ಜೊತೆ ಮಾತನಾಡಿ, “ಸ್ವಾಮಿ ಯಾರ್ಯಾರೋ ಬರ್ತಾರೆ. ಅಧಿಕಾರಿಗಳು ಬಂದು ನಿಮಗೆ ಮನೆ ಮಾಡಿಕೊಡ್ತೀವಿ ಅಂತಾರೆ. ಇನ್ನ ಇತ್ತಕಡೆ ಯಾರು ಬರೋದೂ ಇಲ್ಲ. ಇದು ಇವಾಗಿಂದ ಅಲ್ಲ, ಸುಮಾರು 25 ವರ್ಷಕ್ಕೂ ಹೆಚ್ಚು ಕಾಲದಿಂದ ಗುಡಿಸಲಿನಲ್ಲಿ ಇದ್ದೀವಿ. ನಮ್ಮ ಕಷ್ಟ ಕೇಳೂರು ಯಾರೂ ಇಲ್ಲ” ಎಂದು ತಮ್ಮ ನೋವು ತೋಡಿಕೊಂಡರು.
“ಮಳೆ ಬಂದಾಗ ಸ್ವಲ್ಪ ದಿನ ಎಲ್ಲಾದ್ರೂ ಕಳಿಸುತ್ತಾರೆ. ಅಲ್ಲಿಗೆ ಹೊಯ್ತೀವಿ. ಮತ್ತೆ ಹೊಳೆ ಇಳಿದ ಮೇಲೆ ನಮ್ಮ ಗುಡಿಸಲೇ ಗತಿ. ಅಧಿಕಾರಿಗಳು ಈವರೆಗೆ ಬಂದದ್ದಕ್ಕೆ ನಮಗೂ ಲೆಕ್ಕ ಇಲ್ಲ. ಪ್ರತಿ ವರ್ಷ ಭರವಸೆ ಕೇಳೋದೇ ಆಯ್ತು. ವಯಸ್ಸಾದವರಿಗೆ ಒಂದು ಮನೆ ಕೊಡಲಿಲ್ಲ ಈವರೆಗೆ” ಎಂದು ತಮ್ಮ ಅಳಲು ತೋಡಿಕೊಂಡರು.

ವೃದ್ದೆ ಲಕ್ಷ್ಮಮ್ಮ ಮಾತನಾಡಿ, “ಅಕ್ಕ ಪಕ್ಕ ನಮ್ಮ ಹಾಗೆ ವರ್ಷ ವರ್ಷ ಮಳೆ ಬಂದಾಗ ಹೊಳೆ ಬಂದು ಮನೆಗೆ ನೀರು ನುಗ್ತಾ ಇತ್ತು. ಪಂಚಾಯ್ತಿ ಅವ್ರು ಐದು ಲಕ್ಷ ಕೊಟ್ಟು ಎಲ್ಲರಿಗೂ ಮನೆ ಮಾಡಿಕೊಟ್ರು. ಅವರೆಲ್ಲ ತಿಳಿದೋರು, ಬುದ್ದಿ ಇರೋರು, ವಿದ್ಯೆ ಇರೋರು ಮಾಡ್ಕೊಂಡ್ರು. ನಮಗೆ ವಿದ್ಯೆ ಇಲ್ಲ, ಬುದ್ಧಿ ಇಲ್ಲ,ವ ನಮಗೆ ಕೇಳಾಕೆ ಬರಲ್ಲ, ಅದಕ್ಕೆ ಮನೇನು ಇಲ್ಲ, ಇರಾಕೆ ಸೂರೂ ಇಲ್ಲ. ಗುಡಿಸಲಿನಲ್ಲಿ ಕಾಲ ಕಳೀತಾ ಇದ್ದೀವಿ” ಅಂತ ತಮ್ಮ ನೋವನ್ನು ಹೇಳಿಕೊಂಡರು.
ನೆರೆ ಸಂತ್ರಸ್ತರ ನೆರವಿಗೆ ಎಂದು ಮೈಸೂರಿನ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (ಹೆಚ್ ಆರ್ ಎಸ್) ತಂಡ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ, ತಮ್ಮ ಕಡೆಯಿಂದ ಆಗುವಂತಹ ನೆರವನ್ನು ನೀಡುವ ಭರವಸೆಯನ್ನು ನೀಡಿದರು.

ಝೋನಲ್ ಲೀಡರ್ ಅಸಾದುಲ್ಲಾ ಮೈಸೂರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವುಗಳು ಜನರ ನೆರವಿಗೆ ಎಂದಿಗೂ ಸಿದ್ಧವಿದ್ದು, ಕಷ್ಟದ ಸಮಯದಲ್ಲಿ ಸ್ಪಂದಿಸಲು ನಮ್ಮಿಂದಾಗುವ ನೆರವನ್ನು ನೀಡಲು ಸಮೀಕ್ಷೆ ನಡೆಸುತ್ತಿದ್ದೇವೆ. ಖುದ್ದಾಗಿ ಭೇಟಿ ನೀಡಿ, ಅವರಿಗಾಗಿರುವ ಕಷ್ಟ ಅರಿತು, ಸಮಸ್ಯೆ ಏನೆಂದು ಕೇಳಿ ಅವರಿಗೆ ತುರ್ತಾಗಿ ಅಗತ್ಯ ಇರುವ ನೆರವನ್ನು ಹೆಚ್ ಆರ್ ಎಸ್ ಕಡೆಯಿಂದ ಮಾಡುತ್ತೇವೆ” ಎಂದು ತಿಳಿಸಿದರು.
ಹೆಚ್‌ಆರ್‌ಎಸ್ ಟೀಮ್ ಲೀಡರ್ ಆಗಿರುವ ಅಬ್ದುಲ್ ರೆಹಮಾನ್ ಷರೀಫ್ ಮಾತನಾಡಿ, “ಸಂಕಷ್ಟದಲ್ಲಿ ಇರುವಾಗ ಯಾರೆ ಆಗಲಿ ದೊಡ್ಡವರು, ಚಿಕ್ಕವರು, ಬಡವ, ಬಲ್ಲಿದ ಅನ್ನುವುದನ್ನು ನೋಡಲಾಗದು. ಯಾರೇ ಆಗಲಿ ನೊಂದವರಿಗೆ ಅಗತ್ಯ ನೆರವು ಕೊಡುವುದು ಸರ್ಕಾರ, ತಾಲೂಕು ಆಡಳಿತ, ಸ್ಥಳೀಯ ಆಡಳಿತದ ಜವಾಬ್ದಾರಿ. ಗ್ರಾಮ ಪಂಚಾಯ್ತಿ ಎಲ್ಲರಿಗೂ ನೆರವು ನೀಡಿ ಈ ವೃದ್ಧ ದಂಪತಿಗಳನ್ನು ಕೈಬಿಟ್ಟಿರುವುದು ಸರಿಯಾದ ಕ್ರಮವಲ್ಲ. ವಯಸ್ಸಾಗಿದೆ, ಮನೆ ಬಿರುಕು ಬಿಟ್ಟಿದೆ. ಹೊಳೆಯ ನೀರು ಗುಡಿಸಲು ನುಗ್ಗಿ ಹೆಚ್ಚು ಕಮ್ಮಿಯಾದರೆ ಯಾರು ಹೊಣೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಬ್ದುಲ್ ವಾಹಿದ್ ಮಾತನಾಡಿ, “ಕಷ್ಟ ಅನ್ನುವುದು ಎಲ್ಲರಿಗೂ ಬರುತ್ತದೆ. ಮಾನವೀಯತೆ ಇರಬೇಕು. ಕಷ್ಟದಲ್ಲಿ ಇರುವಾಗ ರಾಜಕೀಯ ಮಾಡಬಾರದು. ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಅನ್ನುವ ಇಬ್ಬಂದಿತನದ ನಿಲುವು ಸರಿಯಲ್ಲ. ಎಲ್ಲರಿಗೂ ಸಿಕ್ಕಿದ ಸವಲತ್ತು ಈ ವೃದ್ಧರ ಕುಟುಂಬಕ್ಕೂ ಸಿಗಬೇಕಿತ್ತು. ಗುಡಿಸಲಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ವಯಸ್ಸಾದ ಜೀವಗಳು ಚಳಿ, ಮಳೆ ಹೇಗೆ ತಡೆಯಲು ಸಾಧ್ಯ. ಇಳಿ ವಯಸ್ಸಲಿ ನೆಮ್ಮದಿಯ ಜೀವನ ಬೇಡವೇ” ಎಂದು ಪ್ರಶ್ನಿಸಿದರು.
ಕಯಾಮ್ ಪಾಷಾ ಮಾತನಾಡಿ, “ಮನೆ ಅಂದ್ರೆ ಅದು ಭದ್ರವಾಗಿ ಇದ್ದರೆ ಸೂರು. ಇಲ್ಲವಾದರೆ ಅದೇ ಉರುಳು. ವೃದ್ಧರು ಇರುವುದು ಮನೆಯಲ್ಲ ಗುಡಿಸಲು. ಅದರಲ್ಲಿ ಒಳಗೆ ಹೊಕ್ಕಿ ನೋಡಿದರೆ ಏನೂ ಇಲ್ಲ ಎಲ್ಲ ಕಿಂಡಿ. ನೀರಿನ ರಭಸಕ್ಕೆ ನೆಲ ಬಿರುಕಾಗಿದೆ. ಗುಡಿಸಲು ಇದನ್ನು ತಡೆದುಕೊಳ್ಳಲು ಸಾಧ್ಯವೇ? ಗ್ರಾಮದ ಮುಖಂಡರಿಗಾದರೂ ಅರಿವು ಇರಬೇಕಿತ್ತು. ಇಂತಹ ವೃದ್ಧರಿಗೆ ಒಂದು ಮನೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿತ್ತು. ಅದು ಆಗಿಲ್ಲ” ಎಂದು ಮರುಗಿದರು.

ಸ್ಥಳೀಯ ನಜೀಬ್ ಮಾತನಾಡಿ, “ಗ್ರಾಮದಲ್ಲಿ ನೆರೆ ಬಂದ ಸಮಯದಲ್ಲಿ ಅದರ ಬಗ್ಗೆ ಮಾಹಿತಿ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಸಂಪೂರ್ಣವಾಗಿ ಗೊತ್ತಿರುತ್ತದೆ. ಅಲ್ಲದೇ, ಸರ್ಕಾರದಿಂದ ಪುನರ್ವಸತಿ ಹೆಸರಿನಲ್ಲಿ ಮನೆ ಕಟ್ಟಿಕೊಡುವ ವ್ಯವಸ್ಥೆ ಇದ್ದರೂ ಕೂಡ ಅಧಿಕಾರಿಗಳು ಗಮನ ಹರಿಸದೆ ಇರುವುದು ನಿಜಕ್ಕೂ ಬೇಸರದ ಸಂಗತಿ. ಈಗಲಾದರೂ ಸ್ಥಳೀಯ ಜನಪ್ರತಿನಿಧಿಗಳು, ತಾಲೂಕು ಆಡಳಿತ ವೃದ್ಧ ದಂಪತಿಗಳ ನೆರವಿಗೆ ಧಾವಿಸಬೇಕು. ಸರಿಯಾದ ಮನೆಯನ್ನು ನಿರ್ಮಿಸಿಕೊಡಬೇಕು” ಎಂದು ಆಗ್ರಹಿಸಿದ್ದಾರೆ.
ಕಷ್ಟದಿಂದ ಜೀವನ ಸಾಗಿಸುತ್ತಿರುವ ಈ ವೃದ್ಧ ದಂಪತಿಗೆ ಅಧಿಕಾರಿಗಳು ಇನ್ನಾದರೂ ಸ್ಪಂದಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
