ಚಾಮರಾಜನಗರ ತಾಲೂಕಿನ ಆಲೂರು ಹೊಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಅಡುಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕಕ್ಕೆ ಅಸಮಾಧಾನ ವ್ಯಕ್ತವಾಗಿದ್ದು, ಶಾಲೆಗೆ ದಾಖಲಾಗಿದ್ದ ಮಕ್ಕಳು ಬೇರೆಡೆ ವ್ಯಾಸಂಗ ಮಾಡಲು ವರ್ಗಾವಣೆ ಪತ್ರ ಪಡೆದು ತೆರಳುತ್ತಿದ್ದರೆಂದು ವರದಿಯಾದ ಹಿನ್ನೆಲೆಯಲ್ಲಿ ತಾಲೂಕಿನ ಡಿಡಿಪಿಐ, ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯ ಬಳಿಕ ಮಕ್ಕಳನ್ನು ಶಾಲೆಗೆ ಕಳುಹಿಸುವುದಾಗಿ ಕೆಲವು ಪೋಷಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
2024-25ನೇ ಸಾಲಿನಲ್ಲಿ ಶಾಲೆಯಲ್ಲಿ 22 ಮಂದಿ ವಿದ್ಯಾರ್ಥಿಗಳಿದ್ದರು. ಈಗಾಗಲೇ 12 ಮಕ್ಕಳು ಟಿಸಿ ಪಡೆದಿದಿದ್ದು, ಉಳಿದವರಿಂದಲೂ ವರ್ಗಾವಣೆ ಪತ್ರ ಪಡೆಯಲು ಅರ್ಜಿಗಳು ಸಲ್ಲಿಕೆಯಾಗಿದ್ದವು. ಪೋಷಕರು ತಮ್ಮ ಮಕ್ಕಳ ವರ್ಗಾವಣೆ ಪತ್ರ ಪಡೆದು ಬೇರೆ ಬೇರೆ ಶಾಲೆಗಳಿಗೆ ಸೇರಿಸುತ್ತಿರುವ ಪರಿಣಾಮ ಆಲೂರು ಹೊಮ್ಮ ಗ್ರಾಮದ ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತು. ಅಲ್ಲದೆ ಮುಖ್ಯ ಅಡುಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕವಾದ ಹಿನ್ನೆಲೆಯಲ್ಲಿ ಮಕ್ಕಳು ಶಾಲೆ ತೊರೆಯುತ್ತಿದ್ದಾರೆ ಎನ್ನುವ ವರದಿಗಳು ಬಂದಿದ್ದವು.
ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಚಾಮರಾಜನಗರ ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ್ದು, “ಹೊಮ್ಮ ಸರ್ಕಾರಿ ಶಾಲೆಯಲ್ಲಿ ಕಳೆದ ವರ್ಷ 22 ಮಕ್ಕಳಿದ್ದರು. ಈಗ ಎಸ್ಎಟಿಎಸ್(SATS)ನಲ್ಲಿ ಮಕ್ಕಳ ಸಂಖ್ಯೆ ಐದಕ್ಕೆ ಇಳಿದಿತ್ತು. ಕೊನೆಗೆ 2 ಮಕ್ಕಳು ಮತ್ರ ಉಳಿದಿದ್ದರು. ಗ್ರಾಮಸ್ಥರನ್ನು ಕೇಳಿದರೆ ನಿಮ್ಮ ಶಿಕ್ಷಕರು ನಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ. ಹೀಗಾಗಿ ಟಿಸಿ ತೆಗೆದುಕೊಂಡು ಹೋಗುತ್ತಿದ್ದೇವೆಂದು ಹೇಳುತ್ತಿದ್ದರು. ಇದಲ್ಲದೇ ಆಂತರಿಕವಾಗಿ ಬೇರೆ ಬೇರೆ ಕಾರಣಗಳಿವೆ ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಗೆ ಪೊಲೀಸರು, ಬಿಇಒ, ಬಿಆರ್‌ಸಿ ಎಲ್ಲರೂ ಭೇಟಿ ನೀಡಿದ್ದರು. ಇದೀಗ ಅಧಿಕಾರಿಗಳ ನೇತೃತ್ವದಲ್ಲಿ ಪಾಲಕರ ಸಭೆ ನಡೆಸಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿಕೊಂಡಿದ್ದಾರೆ” ಎಂದು ಹೇಳಿದರು.

“ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಮೂವರು ಶಿಕ್ಷಕರಿದ್ದಾರೆ. ಅಡುಗೆ ಸಿಬ್ಬಂದಿ ನಂಜಮ್ಮ ಅವರು ಈ ಶಾಲೆಯಲ್ಲಿ 22 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಟಿಸಿ ತೆಗೆದುಕೊಂಡು ಹೋಗಿರುವುದಕ್ಕೆ ದಲಿತ ಮಹಿಳೆಯೆಂಬ ಕಾರಣವಲ್ಲ. ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲವೆಂಬ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಹಳೆ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದು, ಬದಲೀ ಶಿಕ್ಷಕರನ್ನು ನೇಮಿಸಲಾಗಿದೆ. ಇದೀಗ ಶಾಲೆಗೆ 8 ಮಂದಿ ವಿದ್ಯಾರ್ಥಿಗಳನ್ನು ಮರುದಾಖಲಾತಿ ಮಾಡಿಕೊಳ್ಳಲಾಗಿದೆ. ಇಂದಿನಿಂದಲೇ ಪಾಠ ಆರಂಭಿಸಿ ಬಂದಿದ್ದೇವೆ. ಯಾವುದೇ ರೀತಿಯ ಸಮಸ್ಯೆಗಳು ಇಲ್ಲ” ಎಂದರು.
“ಶಾಲೆಗೆ ಅಗತ್ಯವಾದ ಎಲ್ಲ ಸವಲತ್ತು ನೀಡಲು ಇಲಾಖೆ ಸಿದ್ಧವಿದೆ. ಹೆಚ್ಚಿನ ಶಿಕ್ಷಕರು ಬೇಕು ಅಂದರೆ ನೇಮಿಸುತ್ತೇವೆ. ಸೌಲಭ್ಯಗಳ ಕೊರತೆ ಇದ್ದರೆ ಸರಿಪಡಿಸುತ್ತೇವೆಂದು ಹೇಳಿ ಪೋಷಕರ ಮನವೊಲಿಸಲಾಗಿದೆ. ಇದೀಗ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಮತ್ತೆ ದಾಖಲಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಇಲ್ಲ” ಎಂದು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕಿಸಿದರೂ ಕೂಡ ಮಾಹಿತಿ ನೀಡಲು ನಿರಾಕರಿಸಿದ್ದು, ಯಾವುದೇ ಮಾಧ್ಯಮಗಳಿಗೆ ಮಾಹಿತಿಯನ್ನು ಬಹಿರಂಗಗೊಳಿಸಲು ಆಗುವುದಿಲ್ಲವೆಂದು ಹೇಳಿದರು.
ಘಟನೆ ಹಿನ್ನೆಲೆ
ಶಾಲೆಯಲ್ಲಿನ ಅಕ್ಷರ ದಾಸೋಹದ ಅಡುಗೆ ಸಿಬ್ಬಂದಿ ದಲಿತ ಮಹಿಳೆ ಎಂಬ ಕಾರಣಕ್ಕೆ ಮಕ್ಕಳ ವರ್ಗಾವಣೆ ಪತ್ರ ಪಡೆದು ಪೋಷಕರು ಬೇರೆಡೆ ಸೇರಿಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದರು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ಮಕ್ಕಳ ಪೋಷಕರು ನಿರಾಕರಿಸಿದ್ದರು. ಈ ಶಾಲೆಯಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಉಳಿದಿದ್ದರು. ಉಳಿದ ವಿದ್ಯಾರ್ಥಿಗಳನ್ನೂ ಬೇರೆಡೆ ಸೇರಿಸಲು ಪೋಷಕರು ವರ್ಗಾವಣೆ ಪತ್ರ ಕೇಳಿದ್ದಾರೆಂದು ತಿಳಿದುಬಂದಿತ್ತು.
ಈ ಹಿಂದೆ ಸದರಿ ಶಾಲೆಯಲ್ಲಿನ ಶಿಕ್ಷಕರು ಸರಿಯಾಗಿ ಪಾಠ ಪ್ರವಚನ ಮಾಡುತ್ತಿಲ್ಲವೆಂದು ಪೋಷಕರು ಪ್ರತಿಭಟಿಸಿದ್ದರು. ಆ ವೇಳೆ ಶಿಕ್ಷಣ ಇಲಾಖೆಯು ಶಿಕ್ಷಕರನ್ನು ಬೇರೆಡೆಗೆ ಸ್ಥಳಾಂತರಿಸಿತ್ತು. ಇದೀಗ ಶಾಲೆಯ ಎಲ್ಲ ಮಕ್ಕಳೂ ಟಿಸಿ ಪಡೆದ ಹಿನ್ನೆಲೆಯಲ್ಲಿ ಮತ್ತೊಂದು ರೀತಿಯ ಸಮಸ್ಯೆ ಉದ್ಭವವಾಗಿದ್ದು, ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿತ್ತು.
ಶಾಲೆಯಲ್ಲಿ 27 ವರ್ಷಗಳಿಂದ ಅಡುಗೆಯವರಾಗಿ ಕೆಲಸ ಮಾಡುತ್ತಿರುವ ನಂಜಮ್ಮ ಈಗ ಏಕೈಕ ಅಡುಗೆಯವರಾಗಿದ್ದಾರೆ. ಶಾಲೆಯಲ್ಲಿ ಕೇವಲ ಇಬ್ಬರು ಶಿಕ್ಷಕರಿದ್ದಾರೆ, ಮತ್ತು ಬೋಧನಾ ಗುಣಮಟ್ಟ ಮತ್ತು ಸಿಬ್ಬಂದಿ ಸದಸ್ಯರ ನಡುವಿನ ಆಂತರಿಕ ವಿವಾದಗಳ ಬಗ್ಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದರು.
“ಶಾಲೆಯಿಂದ ಟಿಸಿ ತೆಗೆದುಕೊಂಡಿರುವವರಲ್ಲಿ ದಲಿತ ಸಮುದಾಯದವರೂ ಇದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಶಾಲೆಯಲ್ಲಿ ಏರ್ಪಟ್ಟಿದ್ದ ಗೊಂದಲದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅದರಂತೆ ಮಕ್ಕಳು ಬೇರೆ ಶಾಲೆಗಳಿಗೆ ಹೋಗಲು ಅಡುಗೆಯವರ ಜಾತಿ ಕಾರಣವಲ್ಲ ಎಂಬುದು ತಿಳಿದುಬಂದಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ ಟಿ ಕವಿತಾ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿದ್ದೀರಾ? ಕೊಪ್ಪಳ | ವಿದೇಶದಲ್ಲಿ ಬೇಡಿಕೆ ಪಡೆದ ನುಗ್ಗೆಸೊಪ್ಪಿನ ಪುಡಿ; ಕೃಷಿಯಲ್ಲಿ ಐಟಿ ಉದ್ಯೋಗಿಯ ಸಾಧನೆ
ಈ ಘಟನೆಯು ಗ್ರಾಮೀಣ ಕರ್ನಾಟಕದ ಸಾರ್ವಜನಿಕ ಶಾಲೆಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮತ್ತೆ ಗಮನ ಸೆಳೆದಿದ್ದು, ಇದರಲ್ಲಿ ಜಾತಿ ಸಂವೇದನೆ, ಶಿಕ್ಷಕರ ಕೊರತೆ ಮತ್ತು ಮೂಲಸೌಕರ್ಯಗಳು ಇಲ್ಲದಿರುವುದರಿಂದ ಮಕ್ಕಳು ಶಾಲೆ ತೊರೆಯಲು ಕಾರಣವಾಗಿದೆ ಎಂಬುದು ಗಮನಾರ್ಹ.