ವಿವಿಧ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ನಗರದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬರಗಾಲ ಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಬ್ಯಾಂಕ್ ಮತ್ತು ಫೈನಾನ್ಸ್ ನವರು ರೈತರ ಸಾಲ ವಸೂಲಿಗೆ ಮುಂದಾಗಬಾರದು. ಅಲ್ಲದೆ, ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಮತ್ತು ಪಡಿತರ ಚೀಟಿ ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಒತ್ತಾಯಿಸಿದರು.
“2022-2023 ಮತ್ತು 2023-2024ನೇ ಸಾಲಿನ ಪ್ರಕೃತಿ ವಿಕೋಪ ದಡಿ, ಬೆಳೆ ನಷ್ಟ ಅನುಭವಿಸಿದ ರೈತರಲ್ಲಿ ಇನ್ನೂ ಕೆಲವು ರೈತರಿಗೆ ಪರಿಹಾರ ದೊರೆತಿಲ್ಲ. ಶೀಘ್ರದಲ್ಲಿ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘಟನೆಯ ಉಪಾಧ್ಯಕ್ಷ ಶಿವಪುರ ಮಹದೇವಪ್ಪ, “ಆಹಾರ ಇಲಾಖೆ ತಿದ್ದುಪಡಿ ಮತ್ತು ಕೆವೈಸಿ ಸೇರಿದಂತೆ, ಇನ್ನಿತರ ಸಮಸ್ಯೆಗಳಿಗೆ ಅರ್ಜಿ ಸಲ್ಲಿಸಲು ರೈತರು ಪ್ರತಿದಿನ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಯಾರು ಹೊಣೆ? ಈ ಸಮಸ್ಯೆಯನ್ನು ಯಾರು ಬಗೆಹರಿಸುತ್ತಾರೆ” ಎಂದು ಕಿಡಿಕಾರಿದರು.
“ಪಡಿತರ ಚೀಟಿ ಸಮಸ್ಯೆಗಳಿಗೆ ಹಾಗೂ ಗೃಹಲಕ್ಷ್ಮಿಯ ಯೋಜನೆಗೆ ಅರ್ಜಿ ಸಲ್ಲಿಸಿರುವ ಕೆಲವು ಮಹಿಳೆಯರಿಗೆ ಹಣ ಪಾವತಿಯಾಗಿಲ್ಲ. ಈ ಸಮಸ್ಯೆ ಬಗ್ಗೆ ಯಾವ ಅಧಿಕಾರಿಗಳು ಉತ್ತರಿಸುತ್ತಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುವವರು ಯಾರು” ಎಂದು ಪ್ರಶ್ನಿಸಿದರು.
ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಆಹಾರ ಇಲಾಖೆಯ ಉಪ ನಿರ್ದೇಶಕರಾದ ಯೋಗಾನಂದ, ”ರಾಜ್ಯ ಸರ್ಕಾರ ಡಿಬಿಟಿ ಮುಖಾಂತರ ನೇರವಾಗಿ ಹಣ ವರ್ಗಾವಣೆ ಮಾಡಿದೆ. ಆದರೆ, ಕೆಲವು ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿವೆ. ಆಧಾರ್ ಕಾರ್ಡ್ ಸೇರಿದಂತೆ, ಸರಿಪಡಿಸುವ ಪಡಿತರ ಚೀಟಿ ಕಾರ್ಡ್ ದಾರರಿಗೆ ತಾಂತ್ರಿಕ ತೊಂದರೆಯಿಂದ ಹಣ ವರ್ಗಾವಣೆಯಾಗಿರುವುದಿಲ್ಲ,” ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘಟನೆಯ ತಾಲೂಕು ಅಧ್ಯಕ್ಷ ದಿಲೀಪ್, ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಎಸ್. ಶಾಂತಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಶಿವಣ್ಣ ಹಾಗೂ ಮಾದು ನಾಗರಾಜು, ರಾಜಶೇಖರ ಪಾಪಣ್ಣ, ಸ್ವಾಮಿ ಸೇರಿದಂತೆ ಇತರ ರೈತ ಮುಖಂಡರು ಉಪಸ್ಥಿತರಿದ್ದರು.