ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಎರಡನೇ ಅಲೆಯ ವೇಳೆ, 2021ರ ಮೇ ತಿಂಗಳಿನಲ್ಲಿ ನಡೆದ ಆಮ್ಲಜನಕ ದುರಂತದ ಬಗ್ಗೆ ಮರು ತನಿಖೆ ನಡೆಸಲಾಗುತ್ತದೆ. ಆರೋಗ್ಯ ಇಲಾಖೆ ತನಿಖೆಗೆ ಸಿದ್ಧತೆ ನಡೆಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
2021ರ ಮೇ 2ರ ರಾತ್ರಿ ವೈದ್ಯಕೀಯ ಆಮ್ಲಜನಕದ ಕೊರತೆಯಿಂದ 23 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರು. ಆ ಸುದ್ದಿ ರಾಷ್ಟ್ರಾದ್ಯಂತ ಚರ್ಚೆಯುಂಟು ಮಾಡಿತ್ತು. ಆಗಿನ ಬಿಜೆಪಿ ಸರ್ಕಾರ ಬೇಜವಾಬ್ದಾರಿತನದ ಬಗ್ಗೆ ಸಾರ್ವಜನಿಕರು ಕಿಡಿಕಾರಿದ್ದರು. ಅಂದಿನ ಮೈಸೂರು ಜಿಲ್ಲಾಧಿಕಾರಿಯನ್ನು ಹೊಣೆ ಮಾಡಲಾಗಿತ್ತು. ಇದೀಗ, ಪ್ರಕರಣವನ್ನು ಮರು ತನಿಖೆ ನಡೆಸಲು ಸರ್ಕಾರ ಮುಂದಾಗಿದೆ.
“ಪ್ರಕರಣದ ಮರುತನಿಖೆಗೆ ಅನುಮತಿ ಕೋರಿ ಆರೋಗ್ಯ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿದೆ. ಯಾವ ವಿಷಯಗಳ ಮರುತನಿಖೆ ಅಗತ್ಯವಿದೆ ಎಂಬುದರ ಕುರಿತು ಸರ್ಕಾರವು ವಿವರಗಳನ್ನು ಕೇಳಿದೆ. ನಾವು ವಿವರಗಳನ್ನು ಸಲ್ಲಿಸುತ್ತೇವೆ. ನಮ್ಮ ವರದಿ ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ” ಎಂದು ಗುಂಡೂರಾವ್ ಹೇಳಿದ್ದಾರೆ.
“ಈ ಹಿಂದೆ ನಡೆದ ತನಿಖೆಯಲ್ಲಿ, ಕೆಳಮಟ್ಟದ ಸಿಬ್ಬಂದಿಯನ್ನು ಮಾತ್ರ ತನಿಖೆ ಮಾಡಲಾಗಿದೆ. ದುರಂತದಲ್ಲಿ ಉನ್ನತ ಅಧಿಕಾರಿಗಳ ಲೋಪವೂ ಇದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಸಂಪೂರ್ಣ ತನಿಖೆ ಅಗತ್ಯವಿದೆ. ಹೊಸ ತನಿಖೆಯನ್ನು ಕಾಲಮಿತಿಯಲ್ಲಿ ನಡೆಸಲಾಗುವುದು” ಎಂದಿದ್ದಾರೆ.