ಚಾಮರಾಜನಗರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಸಂಬಂಧ ಉಪ ವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶ ಸಂಗ್ರಹಕ್ಕಾಗಿ ನಡೆಸಲಾಗುತ್ತಿರುವ ಸಮೀಕ್ಷೆಯ ಕುರಿತ ಪ್ರಗತಿ ಪರಿಶೀಲನೆಯನ್ನು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮೇಜರ್ ಪಿ. ಮಣಿವಣ್ಣನ್ ಅವರ ನೇತೃತ್ವದಲ್ಲಿ ನಡೆಯಿತು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಮೀಕ್ಷೆ ಸಂಬಂಧ ಪ್ರಗತಿಯ ವಿವರವನ್ನು ಪರಾಮರ್ಶಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸಮೀಕ್ಷಾ ಕಾರ್ಯ ಸಂಬಂಧ ಕೈಗೊಳ್ಳಲಾಗಿರುವ ಕ್ರಮಗಳು ಹಾಗೂ ಈವರೆಗಿನ ಪ್ರಗತಿ ಕುರಿತು ಮಾಹಿತಿ ಪಡೆದರು.
ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮೇಜರ್ ಪಿ. ಮಣಿವಣ್ಣನ್ ಮಾತನಾಡಿ ” ಚಾಮರಾಜನಗರ ಜಿಲ್ಲೆಯ ಹಲವೆಡೆ ಸಮೀಕ್ಷೆ ಕಾರ್ಯ ನಡೆಸುತ್ತಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದೇನೆ. ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಸಮೀಕ್ಷೆ ಸುಗಮವಾಗಿ ನಡೆಯುತ್ತಿದೆ.
ಸಮೀಕ್ಷೆ ವೇಳೆ ಜನರು ನೈಜ ಮಾಹಿತಿ ನೀಡಬೇಕು. ಸಮೀಕ್ಷಾ ಸಂದರ್ಭದಲ್ಲಿ ಹೇಳಲಾಗುವ ಮಾಹಿತಿಯನ್ನು ಮಾತ್ರ ನಮೂದು ಮಾಡಿಕೊಳ್ಳಲಾಗುತ್ತದೆ. ಮಾಹಿತಿ ನೀಡುವುದರಿಂದ ಯಾವುದೇ ತೊಂದರೆಯಿಲ್ಲ. ಸರ್ಕಾರದ ಸೌಲಭ್ಯಗಳು ಜಾತಿ ಪ್ರಮಾಣ ಪತ್ರ ರದ್ದಾಗುತ್ತದೆ ಎಂಬ ತಪ್ಪು ಕಲ್ಪನೆ ಬೇಡ.

ಸಮೀಕ್ಷೆ ಮುಗಿದ ನಂತರ ಮಾಹಿತಿ ನೀಡಿದವರಿಗೆ ಎಸ್.ಎಂ.ಎಸ್ ಮೂಲಕ ಲಿಂಕ್ ಕಳುಹಿಸಲಾಗುತ್ತದೆ. ಈ ಲಿಂಕನ್ನು ಒತ್ತಿದ್ದಲ್ಲಿ ಸಮೀಕ್ಷೆ ವೇಳೆ ನೀಡಲಾಗಿರುವ ಮಾಹಿತಿಯನ್ನು ವೀಕ್ಷಿಸಬಹುದು. ಗಣತಿದಾರರು ಏನಾದರೂ ತಪ್ಪಾಗಿ ದಾಖಲು ಮಾಡಿಕೊಂಡಿರುವುದು ಕಂಡು ಬಂದರೆ ದೂರವಾಣಿ ಮೂಲಕ ತಿಳಿಸಿ ಸರಿಪಡಿಸಿಕೊಳ್ಳಲು ಅವಕಾಶವಿರುತ್ತದೆ ” ಎಂದು ಹೇಳಿದರು.
” ರಾಜ್ಯದಲ್ಲಿ ಈಗಾಗಲೇ 17 ಲಕ್ಷ ಪರಿಶಿಷ್ಟ ಜಾತಿಯ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗಿದೆ. ಒಟ್ಟಾರೆ 22 ಲಕ್ಷ ಪರಿಶಿಷ್ಟ ಜಾತಿಯವರ ಮನೆಗಳು ಇರಬಹುದೆಂದು ಅಂದಾಜಿಸಲಾಗಿದೆ. ಇನ್ನು ಒಂದು ವಾರದಲ್ಲಿ ಸಮೀಕ್ಷೆ ಪೂರ್ಣವಾಗಲಿದೆ. ಸಮೀಕ್ಷೆ ಸಂಬಂಧ ಯಾವುದೇ ಮಾಹಿತಿ ಸಂದೇಹಗಳಿದ್ದಲ್ಲಿ ಸಹಾಯವಾಣಿ ಸಂಪರ್ಕಿಸಬಹುದು. ಜಿಲ್ಲೆಯಲ್ಲಿಯೂ ಸಹಾಯವಾಣಿ ಲಭ್ಯವಿದೆ. ರಾಜ್ಯಮಟ್ಟದ ಸಹಾಯವಾಣಿ ಸಂಖ್ಯೆ 9481359000 ಇದ್ದು 24*7 ಅವಧಿಯಲ್ಲಿಯೂ ಕಾರ್ಯನಿರ್ವಹಿಸಲಿದೆ.
ಯಾವುದೇ ಸಮಯದಲ್ಲಿ ಸಹಾಯವಾಣಿಗೆ ಕರೆ ಮಾಡಿದರೆ ಸ್ವೀಕರಿಸಿ ಸ್ಪಂದಿಸಲಿದ್ದಾರೆ ” ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ ‘ ಸಮೀಕ್ಷೆ ನಡೆಯುತ್ತಿರುವ ಸ್ಥಳಗಳಿಗೆ ತಾವು ಸಹ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶಿಕ್ಷಕರು ಗಣತಿದಾರರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದು ಸಮೀಕ್ಷೆ ಕಾರ್ಯದಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ ‘ ಎಂದರು.

ಸಭೆಗೆ ವಿವರ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮುನಿರಾಜು ‘ ಜಿಲ್ಲೆಯಲ್ಲಿ 1,135 ಗಣತಿದಾರರು ಸಮೀಕ್ಷೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ 58,485 ಪರಿಶಿಷ್ಟ ಜಾತಿಯವರ ಕುಟುಂಬಗಳಿವೆ. 1,86,389 ಪರಿಶಿಷ್ಟಜಾತಿಯಲ್ಲದವರ ಕುಂಟುಂಬಗಳಿವೆ. ಈಗಾಗಲೇ 39,791 ಪರಿಶಿಷ್ಟ ಜಾತಿಯವರ ಮನೆಗಳ ಸರ್ವೆ ಕಾರ್ಯ ಪೂರ್ಣವಾಗಿದೆ. 1,56,528 ಪರಿಶಿಷ್ಟ ಜಾತಿಯಲ್ಲದವರ ಮನೆಗಳ ಭೇಟಿ ಕಾರ್ಯ ಪೂರ್ಣವಾಗಿದೆ. ಒಟ್ಟಾರೆ ಶೇ. 68ರಷ್ಟು ಸಮೀಕ್ಷಾ ಕಾರ್ಯ ಮುಗಿದಿದೆ. ನಿಗದಿತ ವೇಳೆಗೆ ಶೇ. 100ರಷ್ಟು ಸರ್ವೆ ಕಾರ್ಯ ಪೂರ್ಣವಾಗಲಿದೆ ‘ ಎಂದರು.
ಈ ಸುದ್ದಿ ಓದಿದ್ದೀರಾ?ಮಂಡ್ಯ | ಉದ್ಘಾಟನೆಗೆ ಸಿದ್ದವಾದ ‘ ರೈತ ಶಾಲೆ ‘
ಶಾಸಕ ಹೆಚ್.ಎಂ. ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಹೆಚ್.ವಿ. ಚಂದ್ರು, ನಗರಸಭೆ ಅಧ್ಯಕ್ಷ ಸುರೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು.