ಕಾಂತರಾಜ ಆಯೋಗದ ವರದಿಯನ್ನು ಸ್ವೀಕರಿಸಿ ಸಾರ್ವಜನಿಕ ಗೊಳಿಸಬೇಕು. ಮುಸ್ಲಿಮರಿಗೆ ನೀಡಲಾಅಗಿರುವ 2ಬಿ ಮೀಸಲಾತಿಯ ಪ್ರಮಾಣವನ್ನು ಏರಿಸಬೇಕು ಎಂದು ಎಸ್‌ಡಿಪಿಐ ಒತ್ತಾಯಿಸಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. “2014ರಲ್ಲಿ ಜಾತಿಗಣತಿ ನಡೆಸಲು ಅಂದಿನ ಕಾಂಗ್ರೆಸ್ ಸರ್ಕಾರ ಆದೇಶ ನೀಡಿತ್ತು. ಕರ್ನಾಟಕದ 1.3 ಕೋಟಿ ಕುಟುಂಬಗಳನ್ನು ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರವು ಒಟ್ಟು 187 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಆದರೆ, ಕನಿಷ್ಠ ವರದಿಯನ್ನು ಸ್ವೀಕರಿಸಲು ಸರ್ಕಾರವೇ ನಿರಾಕರಿಸುವುದು ಮಾತ್ರ ಬಹುದೊಡ್ಡ ದುರಹಂಕಾರವಾಗಿದೆ” ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
“ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಾಗಲೀ, ಬಿಜೆಪಿ ಸರ್ಕಾರವಾಗಲೀ ಸಮೀಕ್ಷಾ ವರದಿ ಸ್ವೀಕರಿಸಲು ಸಕಾರಾತ್ಮಕವಾಗಿ ಸ್ಮಂದಿಸಲೇ ಇಲ್ಲ. ಈಗ ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚಿಸಿದೆ. ಈಗಲಾದರೂ ವರದಿಯನ್ನು ಸ್ವೀಕರಿಸಬೇಕು. ವರದಿಯ ಅಂಕಿಅಂಶಗಳು ಮತ್ತು ಶಿಫಾರಸ್ಸುಗಳನ್ನು ಏನೆಂದು ನಾಡಿನ ಜನತೆಗೆ ಬಹಿರಂಗಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ತಾಲೂಕು ಅಧ್ಯಕ್ಷ ಸರ್ಫರಾಜ್, ಉಪಾಧ್ಯಕ್ಷ ಸರ್ದಾರ್, ಕಾರ್ಯದರ್ಶಿ ರಾಜಗೋಪಾಲ್ ಹಾಗೂ ಎಲ್ಲಾ ಪದಾಧಿಕಾರಿಗಳು ಇದ್ದರು.