ಚಾಮರಾಜನಗರದ ಹಳೇ ಕೆ.ಡಿ.ಪಿ. ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ನಗರಸಭೆ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮೈಸೂರಿನ ಮಡಿಲು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ‘ಜಾಗತಿಕವಾಗಿ ಪ್ಲಾಸ್ಟಿಕ್ ಮಾನ್ಯವನ್ನು ಕೊನೆಗಾಣಿಸುವ’ ಘೋಷವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಮೂರ್ತಿ ಈಶ್ವರ್ ‘ ಪರಿಸರ ಸಂರಕ್ಷಣೆಗೆ ಪೂರಕ ಚಟುವಟಿಕೆಗಳನ್ನು ಕೈಗೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ ‘ ಎಂದರು.
ಭೂಮಿ, ಗಾಳಿ, ಬೆಳಕು, ನೀರು, ಮರ, ಗಿಡಗಳೇ ಪರಿಸರ. ಪ್ರತಿಯೊಬ್ಬರ ಆರೋಗ್ಯಯುತ ಬದುಕಿಗೆ ಪರಿಸರವೇ ಕಾರಣವಾಗಿದೆ. ನಮ್ಮನ್ನು ರಕ್ಷಿಸುವ ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಪರಿಸರದ ಬಗ್ಗೆ ನಾವು ಅರಿತು ಇತರರಿಗೂ ಜಾಗೃತಿ ಮೂಡಿಸಬೇಕು. ಪ್ರತಿವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದ್ದು, ಪರಿಸರ ರಕ್ಷಣೆಯ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಮೂಲಭೂತ ಕರ್ತವ್ಯವೂ ಆಗಿದೆ.
ಮನೆಯ ಸುತ್ತಮುತ್ತ ಹೆಚ್ಚು ಮರ-ಗಿಡಗಳನ್ನು ಬೆಳಸಬೇಕು. ಅದರಲ್ಲೂ, ಶುದ್ಧ ಗಾಳಿಗಾಗಿ ಅರಳಿ ಮರಗಳನ್ನು ಬೆಳೆಸಬೇಕು. ನೀರನ್ನು ಮಿತವಾಗಿ ಬಳಸುವುದರೊಂದಿಗೆ ಮರು ಬಳಕೆಯ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು. ನದಿ, ಕೆರೆ, ಜಲ ಮೂಲಗಳು ಕಲುಷಿತವಾಗದಂತೆ ನೋಡಿಕೊಳ್ಳಬೇಕು. ಅರಣ್ಯ ಸಂಪತ್ತನ್ನು ಸಂರಕ್ಷಿಸಬೇಕು. ಪ್ಲಾಸ್ಟಿಕ್ ಬಳಕೆ ತ್ಯಜಿಸಿ ಬಟ್ಟೆ ಉತ್ಪನ್ನಗಳನ್ನು ಬಳಸಬೇಕು. ಮುಂದಿನ ಪೀಳಿಗೆಗೆ ಸ್ವಾಭಾವಿಕ ಸಂಪತ್ತನ್ನು ಉಳಿಸಲು ಪರಿಸರ ರಕ್ಷಣೆಗೆ ಎಲ್ಲರೂ ಹೆಚ್ಚಿನ ಕೊಡುಗೆ ನೀಡಲು ಮುಂದಾಗುವಂತೆ ” ಕರೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ ” ಪರಿಸರದ ಮೌಲ್ಯಯುತ ಚಿಂತನೆಗಳನ್ನು ಮಕ್ಕಳಿಗೆ ಬಾಲ್ಯದಿಂದಲೇ ತುಂಬಬೇಕು. ಪ್ರಸ್ತುತ ಚಂಡೀಗಡ ದೇಶದ ಸ್ವಚ್ಚನಗರಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ. ಚಂಡೀಗಡ ಸ್ವಚ್ಚ ನಗರವಾಗಲು ಅಲ್ಲಿನ ಮಕ್ಕಳೇ ಸ್ವಚ್ಚತಾ ರಾಯಭಾರಿಗಳಾಗಿದ್ದಾರೆ. ನಮ್ಮ ಮಕ್ಕಳಲ್ಲೂ ಪರಿಸರ ಸ್ವಚ್ಚತೆಯ ಕಾಳಜಿಯನ್ನು ಮೂಡಿಸಬೇಕಾಗಿದೆ.
ಸಕಲ ಜೀವರಾಶಿಗಳಿಗೂ ಆಶ್ರಯ ನೀಡಿರುವ ಭೂಮಿ ವಿಷಮಯವಾದರೇ ನಮ್ಮ ಬದುಕು ದುಸ್ತರವಾಗಲಿದೆ. ಇದನ್ನು ಮನಗಂಡು ಪರಿಸರ ಸಂರಕ್ಷಣೆ ಚಿಂತನೆಗಳ ಅರಿವನ್ನು ಎಲ್ಲರೂ ಹೊಂದಬೇಕು. ಪ್ರಕೃತಿಗೆ ನಮ್ಮ ಕೊಡುಗೆ ಏನು ಎಂಬುದನ್ನು ಓರೆಗೆ ಹಚ್ಚಬೇಕು ” ಎಂದು ತಿಳಿಸಿದರು.
ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಪಿ.ಸಿ. ಶ್ರೀನಿವಾಸ ವಿಶೇಷ ಉಪನ್ಯಾಸ ನೀಡಿ ” ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ನಿಯಂತ್ರಣೆ ಸಂಪೂರ್ಣವಾಗಿ ಸಾಧ್ಯವಾಗದಿದ್ದರೂ ಅದರ ಬಳಕೆ ಕಡಿಮೆ ಮಾಡಬೇಕು. ಸಿಂಥೆಟಿಕ್ ಹಾಗೂ ಪೆಟ್ರೋಲಿಯಂ ರಿಸೋಫಿನಿಯಮ್‍ನಿಂದ ಕೂಡಿರುವ ಪ್ಲಾಸ್ಟಿಕ್‍ನಲ್ಲಿ ಮೈಕ್ರೋ ಆಗ್ರ್ಯಾನಿಕ್ ಕಣಗಳು ಪ್ಲಾಸ್ಟಿಕ್ ಅನ್ನು ಮಣ್ಣಿನಲ್ಲಿ ಕರಗಲು ಬಿಡುವುದಿಲ್ಲ. ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದಿದ್ದರೆ ಪರಿಸರಕ್ಕೆ ಮಾರಕವಾಗಲಿದೆ. ಮಣ್ಣಿನಲ್ಲಿ ಕರಗುವ, ಕರಗದಿರುವ ತ್ಯಾಜ್ಯಗಳನ್ನು ವಿಂಗಡಿಸಿ ಸೂಕ್ತವಾಗಿ ವಿಲೇವಾರಿ ಮಾಡಬೇಕು ” ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಆಲೂರು ಮಹೇಶ್ ಪ್ರಭು ಅವರು ವಿವಿಧ ಶಾಲೆಗಳಿಗೆ ತೆಂಗಿನ ಸಸಿಗಳನ್ನು ಉಚಿತವಾಗಿ ವಿತರಿಸಿದರು.
ಈ ವಿಶೇಷ ವರದಿ ಓದಿದ್ದೀರಾ?ಮೈಸೂರು | ಶವಾಗಾರದಲ್ಲಿ ಕೆಲಸ ಮಾಡುವ ಏಕಮೇವ ಮಹಿಳೆ ರಾಜಮ್ಮ
ನಗರದ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕಣಾಧಿಕಾರಿ ಪ್ರಕಾಶ್ಕರ್ ಅಕ್ಷಯ್ ಅಶೋಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಕಾಶ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಕೆ.ಎಲ್. ಸವಿತ, ಉಪ ಪರಿಸರ ಅಧಿಕಾರಿ ಡಾ.ಎಂ. ಶೃತಿ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಕಾರ್ಯಕ್ರಮದಲ್ಲಿ ಇದ್ದರು.