ಚಾಮರಾಜನಗರದ ಹಳೇ ಕೆಡಿಪಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ (ಉಪ ವರ್ಗೀಕರಣ) ಸಂಬಂಧ ದತ್ತಾಂಶ ಸಂಗ್ರಹಣೆಗಾಗಿ ಸಮೀಕ್ಷೆ ನಡೆಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ಹಾಗೂ ಮಾಸ್ಟರ್ ಟ್ರೈನರ್ ತರಬೇತಿ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ ‘ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಸಂಬಂಧ ಉಪ ವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶಗಳನ್ನು ಸಂಗ್ರಹಿಸಲು ಮೇ 5 ರಿಂದ 17 ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ ‘ ಎಂದರು.
” ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಜಾರಿ ಮಾಡಲು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕವ್ಯಕ್ತಿ ವಿಚಾರಣಾ ಆಯೋಗವನ್ನು ನೇಮಿಸಿ ಒಳ ಮೀಸಲಾತಿಯನ್ನು ವರ್ಗಿಕರಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಉಪ ವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶಗಳನ್ನು ಸಂಗ್ರಹಿಸಲು ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಈ ಸಮೀಕ್ಷಾ ಕಾರ್ಯವು ಅತ್ಯಂತ ಮಹತ್ವದ್ದಾಗಿದ್ದು ನಿಯೋಜಿತ ಸಮೀಕ್ಷಾದಾರರು ಮುತುವರ್ಜಿಯಿಂದ ಅತ್ಯಂತ ಹೊಣೆಗಾರಿಕೆ ಹಾಗೂ ಗಂಭೀರತೆಯಿಂದ ನಿರ್ವಹಿಸುವಂತೆ ಸೂಚನೆ ನೀಡಿದರು “.
” ಪರಿಶಿಷ್ಟ ಜಾತಿ ಕುಟುಂಬದ ಸಮಗ್ರ ಸಮೀಕ್ಷೆ ಕೈಗೊಂಡು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಿಸಿ ಒಳಮೀಸಲಾತಿ ವರ್ಗೀಕರಣ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡುವ ಜವಾಬ್ದಾರಿಯನ್ನು ಆಯೋಗವು ಹೊಂದಿದೆ. ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ ಅಂಶಗಳನ್ನು ಸಂಗ್ರಹಿಸುವುದು ಸಮೀಕ್ಷೆಯ ಉದ್ದೇಶವಾಗಿದೆ ” ಎಂದು ಮಾಹಿತಿ ನೀಡಿದರು.

ಸಮೀಕ್ಷೆಯನ್ನು ಮೊಬೈಲ್ ಆಪ್ ಮೂಲಕ ಕೈಗೊಳ್ಳಲಾಗುತ್ತದೆ. ಮೇ 5 ರಿಂದ 17ರವರೆಗೆ ಮೊದಲ ಹಂತದಲ್ಲಿ ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಮೇ 19 ರಿಂದ 21ರವರೆಗೆ ಸಮೀಕ್ಷೆ ಬ್ಲಾಕ್ ಗಳಲ್ಲಿ ವಿಶೇಷ ಶಿಬಿರಗಳನ್ನು ಕೈಗೊಂಡು ಮನೆ ಮನೆ ಭೇಟಿಯ ಅವಧಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.
ಸಮೀಕ್ಷೆದಾರರು ಎಲ್ಲ ಮನೆಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳನ್ನ ಗುರುತಿಸಬೇಕು. ಕುಟುಂಬಗಳ ಎಲ್ಲ ಸದಸ್ಯರ ಮಾಹಿತಿಯನ್ನು ಸೂಚಿಸಲಾಗಿರುವ ಮಾರ್ಗಸೂಚಿಗಳನ್ವಯ ನಿಗದಿತ ನಮೂನೆಯಲ್ಲಿರುವ ಅಂಶಗಳಿಗೆ ಮೊಬೈಲ್ ಆಪ್ ಮೂಲಕ ಮಾಹಿತಿ ದಾಖಲಿಸಬೇಕು. ಯಾವುದೇ ಕುಟುಂಬಗಳನ್ನು ಕೈಬಿಡದಂತೆ ಜಾಗರೂಕತೆ ವಹಿಸಬೇಕು. ಯಾವ ದಿನದಂದು ಯಾವ ಯಾವ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತದೆ ಎಂಬ ಮಾಹಿತಿಯನ್ನ ಆದಷ್ಟು ಮುಂಚಿತವಾಗಿಯೇ ತಿಳಿಸಬೇಕು ಎಂದರು.

ಸಮೀಕ್ಷೆ ವೇಳೆ ಕುಟುಂಬವನ್ನು ಭೇಟಿ ಮಾಡಿದಾಗ ಸ್ನೇಹಮಯ ಹಾಗೂ ಸೌಜನ್ಯ ಪೂರ್ವಕ ನಡತೆ, ತಾಳ್ಮೆಯಿಂದ ಸಮೀಕ್ಷೆಗೆ ಬೇಕಾಗುವ ಮಾಹಿತಿಯನ್ನು ಪಡೆಯಬೇಕು. ಸಮೀಕ್ಷೆ ಬ್ಲಾಕಿನ ಅಧಿಕೃತ ಭಾಗವಾಗಿರುವ ಯಾವುದೇ ಮನೆಯನ್ನು ಬಿಡಬಾರದು. ಗ್ರಾಮ ಲೆಕ್ಕಿಗರು, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಬಿಲ್ ಕಲೆಕ್ಟರ್, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರರ ನೆರವನ್ನು ಪಡೆಯಬಹುದು. ಯಾವುದೇ ಗೊಂದಲವಿದ್ದರೂ ತರಬೇತಿ ಅವಧಿಯಲ್ಲಿ ಪರಿಹರಿಸಿಕೊಂಡು ಸೂಚಿಸಿರುವ ನಿಗದಿತ ಅವಧಿಯೊಳಗೆ ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ನಿಖರ ಕೃಷಿ ಬೇಸಾಯ ಪ್ರಾತ್ಯಕ್ಷಿಕ ಘಟಕ ಉದ್ಘಾಟಿಸಿದ ಎಸ್. ಪಿ. ಉದಯಶಂಕರ್
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪ ವಿಭಾಗಾಧಿಕಾರಿ ಬಿ.ಆರ್. ಮಹೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಎಂ.ವಿ. ಸುಧಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್, ತಹಶೀಲ್ದಾರರಾದ ಬಸವರಾಜು, ರಮೇಶ್ ಬಾಬು, ಗುರುಪ್ರಸಾದ್, ಇನ್ನಿತರ ಅಧಿಕಾರಿಗಳು ಇದ್ದರು.