ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯೆ ಡಾ. ಸಿಂಧುಜಾ (28) ಅನುಮಾನಾಸ್ಪವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಕೊಳ್ಳೇಗಾಲದಲ್ಲಿ ನಡೆದಿದೆ. ಅವರ ಸಾವಿಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಂಧುಜಾ ವರು ತಮಿಳುನಾಡಿ ಚೈನ್ನೈ ಮೂಲದವರಾಗಿದ್ದು, ಕೊಳ್ಳೇಗಾಲದ ಉಪ ವಿಭಾಗ ಆಸ್ಪತ್ರೆಯಲ್ಲಿ ಅರಿವಳಿಕೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಅವರು ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆಸ್ಪತ್ರೆಯಲ್ಲಿ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ಜೊತೆ ಉತ್ತಮ ಬಾಂಧವ್ಯವನ್ನೂ ಹೊಂದಿದ್ದರು ಎಂದು ತಿಳಿದುಬಂದಿದೆ.
ಗುರುವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ್ದ ಅವರು ಶುಕ್ರವಾರ ಕೆಲಸಕ್ಕೆ ಆಸ್ಪತ್ರೆಗೆ ಬಂದಿರಲಿಲ್ಲ. ಇದನ್ನು ಗಮನಿಸಿದ ವೈದ್ಯೆ ಲೋಕೇಶ್ವರಿ ಎಂಬವರು ಸಿಂಧುಜಾ ಅವರಿಗೆ ಕರೆ ಮಾಡಿದ್ದಾರೆ. ಆದರೆ, ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಲೋಕೇಶ್ವರಿ ಮತ್ತು ಕೆಲವು ಸಿಬ್ಬಂದಿಗಳು ಸಿಂಧುಜಾ ಅವರ ನಿವಾಸಕ್ಕೆ ತೆರಳಿದ್ದಾರೆ.
ಡೋರ್ ಬೆಲ್ ಮಾಡಿ ಕರೆದರೂ ಪ್ರತಿಕ್ರಿಯೆ ಬಂದಿಲ್ಲ. ಬಳಿಕ, ಕಿಟಕಿ ಗಾಜನ್ನು ಒಡೆದು ನೀಡಿದಾಗ, ಸಿಂಧುಜಾ ಅವರು ನೆಲದ ಮೇಲೆ ಬಿದ್ದಿದ್ದರು. ಅವರ ಮೃತದೇಹದ ಬಳಿ ಸಿರಿಂಜ್, ಔಷಧಿ, ಚಾಕು ಸೇರಿದಂತೆ ಕೆಲವು ವಸ್ತುಗಳು ಬಿದ್ದಿದ್ದವು ಎಂದು ಹೇಳಲಾಗಿದೆ.
ಕೂಡಲೇ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.