ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಸುಧಾರಣಾ ಕ್ರಮ ಕೈಗೊಳ್ಳಿ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಶಿಕ್ಷಕರಿಗೆ ಸಲಹೆ ನೀಡಿದರು.
ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣಾ ಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಮಾರ್ಗದರ್ಶನ ಕುರಿತು ಹಮ್ಮಿಕೊಂಡಿದ್ದ ‘ಜಿಲ್ಲಾಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ’ಯಲ್ಲಿ ಮಾತನಾಡಿದರು.
“ಪ್ರತಿ ವಿದ್ಯಾರ್ಥಿಗೆ ಎಸ್ಎಸ್ಎಲ್‌ಸಿ ಪರೀಕ್ಷೆ ಪ್ರಮುಖ ಘಟ್ಟವಾಗಿದ್ದು, ಕಲಿಕೆಯಲ್ಲಿ ಹಿನ್ನೆಡೆ ಕಂಡಿರುವ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲ ಕ್ಷೇತ್ರದಲ್ಲಿಯೂ ಒತ್ತಡ ಇರುವಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಒತ್ತಡದ ಪರಿಸ್ಥಿತಿಯಿದೆ” ಎಂದರು.
“ತಂದೆ ಅಥವಾ ತಾಯಿಯಿಲ್ಲದ ಮಕ್ಕಳು, ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಸಾಮಾಜಿಕ ಸಮಸ್ಯೆ, ಕಲಿಕೆಗೆ ಅವಶ್ಯವಾದ ಮೂಲ ಸೌಲಭ್ಯಗಳಿಲ್ಲದಿರುವುದು ಸೇರಿದಂತೆ ಇತರೆ ಕಾರಣಗಳಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಲಿದೆ. ಈ ಎಲ್ಲ ಸಮಸ್ಯೆಗಳನ್ನು ಮೀರಿ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಬೇಕಾದ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪ್ರತಿಯೊಬ್ಬ ಶಿಕ್ಷಕರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪೋಷಕರನ್ನೂ ಕೂಡಾ ಪ್ರೇರೇಪಿಸುವ ಕೆಲಸವಾಗಬೇಕು” ಎಂದು ಸೂಚಿಸಿದರು.

“ಎಸ್ಎಸ್ಎಲ್‌ಸಿ ಪರೀಕ್ಷೆ 1, 2 ಮತ್ತು 3ರ ಪರೀಕ್ಷೆಗಳಲ್ಲಿ ಚಾಮರಾಜನಗರ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿನ ಫಲಿತಾಂಶ ತೃಪ್ತಿಕರವಾಗಿದೆ. ಜಿಲ್ಲಾ ಕೇಂದ್ರವಾಗಿರುವ ಚಾಮರಾಜನಗರ ಫಲಿತಾಂಶದಲ್ಲಿ ಸಾಕಷ್ಟು ಹಿನ್ನೆಡೆ ಅನುಭವಿಸಿದೆ. ಇದು ಬದಲಾಗಬೇಕು. ಪೋಷಕರ ಸಹಕಾರ ಹಾಗೂ ಮಕ್ಕಳ ಬುದ್ಧಿಶಕ್ತಿಯ ರಚನೆ ವಿಶ್ಲೇಷಣೆಯಾಗಬೇಕು” ಎಂದು ತಿಳಿಸಿದರು.
“ಜಿಲ್ಲೆಯಲ್ಲಿ ಮಕ್ಕಳ ಕಲಿಕಾ ಸುಧಾರಣೆಗೆ ಅಗತ್ಯವಿರುವ ಮೂಲಸೌಲಭ್ಯಗಳು, ವಸತಿ ವ್ಯವಸ್ಥೆ, ಕಲಿಕಾ ವಾತಾವರಣ, ಪ್ರಶ್ನೆಪತ್ರಿಕೆಗಳ ಮಾದರಿ ಪತಿಕೆಗಳನ್ನು ಒದಗಿಸಲು ಆಧ್ಯತೆ ನೀಡಲಾಗುವುದು. ಅಲ್ಲದೆ ವಿವಿಧ ಇಲಾಖೆಗಳ ವಸತಿ ಶಾಲೆಗಳಿಗೆ ಆಯಾ ಇಲಾಖೆ ಅಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಕಲಿಕಾ ಹಿನ್ನಡೆ ಕಂಡುಬಂದಿರುವ ಮಕ್ಕಳು, ಶಿಕ್ಷಕರು, ಪೋಷಕರೊಂದಿಗೆ ಸಂವಾದ ನಡೆಸಿ ಫಲಿತಾಂಶ ಹೆಚ್ಚಳಕ್ಕೆ ಪ್ರೇರೇಪಿಸಲಾಗುವುದು. ಒಟ್ಟಾರೆ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಶಿಕ್ಷಣ ಇಲಾಖೆ ಕೈಗೊಳ್ಳುವ ಸುಧಾರಣಾ ಕ್ರಮಗಳಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ” ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಮಾತನಾಡಿ, “ಫಲಿತಾಂಶದಲ್ಲಿ ಹಿನ್ನಡೆಯಾಗಿರುವ ಶಾಲೆಗಳಲ್ಲಿ ಮುಖ್ಯವಾಗಿ ಯಾವ ವಿಷಯಗಳ ಕಲಿಕೆಯಲ್ಲಿ ಮಕ್ಕಳು ಹಿಂದೆ ಉಳಿದಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು. ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಇಲಾಖೆ ಅಳವಡಿಸಿಕೊಂಡಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಉತ್ತಮ ಫಲಿತಾಂಶ ನೀಡುವಂತೆ ಪ್ರೇರೇಪಿಸಬೇಕು. ಶಾಲೆಗೆ ಗೈರುಹಾಜರಿ, ಸರಾಸರಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಪೋಷಕರಿಗೆ ಅರಿವು ಮೂಡಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅ.20ರಂದು ಸೀರತ್ ಅಭಿಯಾನದ ಸರ್ವಧರ್ಮ ಸಮಾವೇಶ
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ, “ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಶೈಕ್ಷಣಿಕ ವರ್ಷ ಆರಂಭದಿಂದಲೂ ಬಹಳ ಆಸಕ್ತಿ ವಹಿಸಿ ಮಕ್ಕಳ ಕಲಿಕಾ ವೃದ್ಧಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜಿಲ್ಲೆಯು ಅಳವಡಿಸಿಕೊಂಡಿರುವ 14 ಹಾಗೂ 20 ಅಂಶಗಳ ಕಾರ್ಯಕ್ರಮಗಳ ಅಂಶಗಳನ್ನು ಜಿಲ್ಲಾಧಿಕಾರಿಯವರು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಜಿಲ್ಲೆಯ ಕುಂದು ಕೊರತೆಗಳನ್ನು ಪರಿಹರಿಸಲು ಮುಂದಾಗಿದ್ದಾರೆ. ಕಳೆದ ಬಾರಿಯ ನ್ಯೂನತೆಗಳನ್ನು ಸರಿಪಡಿಸಿಕೊಂಡು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಫಲಿತಾಂಶ ನೀಡಲು ಎಲ್ಲರ ಪರಿಶ್ರಮ ಅವಶ್ಯವಾಗಿದೆ” ಎಂದರು.
ಡಯಟ್ ಪ್ರಾಂಶುಪಾಲ ಕಾಶೀನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಟಿ ಆರ್ ಸ್ವಾಮಿ, ಮಂಜುಳ, ಗುರುಲಿಂಗಯ್ಯ, ನಂಜುಂಡಯ್ಯ, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್ ಸೇರಿದಂತೆ ಇತರರು ಇದ್ದರು.