ಕೊಳ್ಳೇಗಾಲ-ಹನೂರು ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದಾಗಿ ಮಂಗಲ ಗ್ರಾಮದ ಕೆಲವಡೆ ಮಳೆ ನೀರು ಮನೆಗಳಿಗೆ ನುಗ್ಗಿರುವ ಘಟನೆ ನಡೆದಿದೆ. ಮಳೆಗಾಲದಲ್ಲಿ ತೀವ್ರ ಮಳೆಯಾದರೆ ಮನೆಗಳು ಜಲಾವೃತವಾಗುವ ಭೀತಿ ಎದುರಾಗಿದೆ.
“ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಂಗಲ ಗ್ರಾಮದ ದೊಡ್ಡಕೆರೆಯ ಸಮೀಪ ಹಾದು ಹೋಗಿರುವ ಮುಖ್ಯ ರಸ್ತೆಯ ನೀರು ಪಂಕ್ಚರ್ ಅಂಗಡಿ, ರೇಷ್ಮೆ ತಯಾರು ಮಾಡುವ ಕಾರ್ಖಾನೆ ಸೇರಿದಂತೆ ಆಸು ಪಾಸಿನ ಮನೆಗಳಿಗೆ ಮಳೆಯ ನೀರು ನುಗ್ಗಿದೆ. ದೊಡ್ಡಕೆರೆಗೆ ಮಳೆಯ ನೀರಿನ ಸಂಪರ್ಕ ಕಲ್ಪಿಸುವ ಬೃಹತ್ ರಾಜಕಾಲುವೆ ಹಾದು ಹೋಗುವ ಸ್ಥಳದಲ್ಲಿ ಈ ಅವಾಂತರ ಸೃಷ್ಟಿಯಾಗಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ” ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದರು.
“ಬಿ ಗುಂಡಾಪುರ, ಮಂಗಲ ಗ್ರಾಮದ ಜಮೀನುಗಳಿಂದ ಬರುವ ನೀರು ಹರಿದು ಹೋಗುವ ರಾಜಕಾಲುವೆಯ ಮೇಲೆ ನಿರ್ಮಿಸಲಾಗಿರುವ ರಸ್ತೆಯ ಒಂದು ಬದಿ ತುಂಬಾ ತಗ್ಗಾಗಿದೆ. ಹೀಗಾಗಿ ರಸ್ತೆಯ ಮತ್ತೊಂದು ಬದಿಯಿಂದ ಹರಿದು ಬರುವ ನೀರು ತಗ್ಗು ರಸ್ತೆಗೆ ನುಗ್ಗಿ ಸಮೀಪದ ಜನವಸತಿ ಪ್ರದೇಶಗಳಿಗೆ ಹರಿಯುತ್ತಿದೆ” ಎಂದರು.
“ಹನೂರಿನಿಂದ ಕೊಳ್ಳೇಗಾಲ ಮಾರ್ಗವಾಗಿ ತೆರಳುವ ಎಡಬದಿಯಲ್ಲಿ ನಿರ್ಮಾಣ ಮಾಡಿರುವ ತಗ್ಗು ರಸ್ತೆಯಲ್ಲಿ ನೀರು ಹೋಗಲು ತೆರೆಯಲಾಗಿರುವ ಡೆಕ್‌ಗಳು ಕಿರಿದಾಗಿದ್ದು, ಇಲ್ಲಿ ಸಣ್ಣಪುಟ್ಟ ಕಸ-ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯವೂ ಕೂಡ ಹೋಗುವುದಿಲ್ಲ. ಇದರಿಂದಾಗಿ ಮಳೆ ಬಂದಾಗ ನೀರು ಕಟ್ಟಿಕೊಂಡು ಮುಖ್ಯ ರಸ್ತೆಯಲ್ಲಿ ಮೊಣಕಾಲು ಎತ್ತರಕ್ಕೆ ನೀರು ನಿಲ್ಲುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಸಮುದ್ರಕ್ಕೆ ಬಿದ್ದು 43 ಗಂಟೆಗಳ ಕಾಲ ಈಜಿ ಬದುಕುಳಿದ ಮೀನುಗಾರ
“ನಿಗದಿತ ಅವಧಿ ಮುಗಿಯುತ್ತಿದ್ದರೂ ಕಾಮಗಾರಿ ಪೂರ್ಣಗೊಳಿಸಿಲ್ಲ, ಅಲ್ಲದೇ ಅಲ್ಲಲ್ಲಿ ಅವೈಜ್ಞಾನಿಕ ಕಾರ್ಯವೈಖರಿಯಿಂದ ಸಾಕಷ್ಟು ಮನೆಗಳು, ಜಮೀನುಗಳ ಮಾಲೀಕರು ಸಂಕಷ್ಟಕ್ಕೆ ತುತ್ತಾಗುವಂತಾಗಿದೆ” ಎಂದು ಸ್ಥಳೀಯರು ಆರೋಪಿಸಿದರು.