ಚಾಮರಾಜನಗರ ಜಿಲ್ಲೆಯಲ್ಲಿ ಹನೂರು ತಾಲೂಕಿನ ವ್ಯಾಪ್ತಿಯಲ್ಲಿ ಚುಕ್ಕಿಚರ್ಮ ಕಾಯಿಲೆ ಕಾಣಿಸಿಕೊಂಡಿದ್ದು, ಮಕ್ಕಳು ಹೈರಾಣಾಗುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಭೇಟಿ ನೀಡಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದರು. ಜೊತೆಗೆ ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದರು.
ಚುಕ್ಕಿಚರ್ಮ ರೋಗಕ್ಕೆ ಔಷಧಿಯೇ ಇಲ್ಲದ ಕಾರಣ ಹಲವು ಮಕ್ಕಳು ಮೃತಪಟ್ಟಿದ್ದಾರೆ. ಕೆಲವು ಔಷಧಿಗಳ ಮೂಲಕ ಚುಕ್ಕಿಚರ್ಮ ರೋಗದ ಕೆಲವು ಲಕ್ಷಣಗಳನ್ನು ಗುಣಪಡಿಸಬಹುದಾಗಿದೆ. ಆದರೆ, ಈ ಕಾಯಿಲೆ ವಾಸಿಯಾಗುವುದಿಲ್ಲವೆಂದು ಹೇಳಲಾಗಿದೆ.
ಈ ರೋಗದಲ್ಲಿ ಮೊದಲು ಚರ್ಮದಲ್ಲಿ ಹುಣ್ಣು, ಬಿಳಿ ಮಚ್ಚೆ ಕಾಣಿಸಿಕೊಳ್ಳುತ್ತವೆ. ಚರ್ಮ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕಣ್ಣು ಊದಿಕೊಳ್ಳುತ್ತದೆ. ಅನುವಂಶಿಕವಾಗಿ ಈ ಕಾಯಿಲೆ ಕೆಲವು ಕುಟುಂಬಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಹನೂರು ಸುತ್ತಲಿನ ಎಂಟು ಮಕ್ಕಳಲ್ಲಿ ಚುಕ್ಕಿ ಚರ್ಮರೋಗ ಲಕ್ಷಣ ಪತ್ತೆಯಾಗಿದ್ದು, ಬಡ ಕುಟುಂಬಗಳಿಗೆ ಶಾಪವಾಗಿ ಪರಿಣಮಿಸಿದೆ. ಸ್ಥಳಕ್ಕೆ ಜಿಲ್ಲಾ ವೈದ್ಯಾಧಿಕಾರಿಗಳು ಈಗಾಗಲೇ ಭೇಟಿ ನೀಡಿ ಪರಿಶೀಲಿಸಿದ್ದು, ಮೇಲಧಿಕಾರಿಗಳಿಗೆ ಈ ಬಗ್ಗೆ ವರದಿ ಸಲ್ಲಿಸಿದ್ದಾರೆ.