ಆನೆ ದಂತವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
2026ರ ಅಕ್ಟೋಬರ್ 23ರಂದು ಮೈಸೂರು ತಾಲ್ಲೂಕಿನ ಚಿಕ್ಕಹಳ್ಳಿ ಗ್ರಾಮ ವ್ಯಾಪ್ತಿಯ ಶ್ರೀರಾಮ ಬಡಾವಣೆಯ ಮೊಸಂಬಾಯನಹಳ್ಳಿ ರಸ್ತೆಯಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿದ್ದುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಕಾರ್ಯಾಚರಣೆ ವೇಳೆ ಆರೋಪಿಗಳಿಂದ ಒಂದು ಆನೆ ದಂತ, ದಂತ ಸಾಗಾಣಿಕೆಗೆ ಬಳಸಿದ್ದ ಬಜಾಜ್ ಪಲ್ಸರ್ 220 SF ಬೈಕ್, ಬ್ಯಾಗ್‌ಗಳು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ಬಂಧಿತ ಆರೋಪಿಗಳು ರವಿಚಂದ್ರ ಜೆ ಬಿನ್ ಜವರಯ್ಯ ಬಲ್ಲೇನಹಳ್ಳಿ ಗ್ರಾಮ, ಹುಣಸೂರು ತಾಲ್ಲೂಕು, ಮೈಸೂರು ಜಿಲ್ಲೆ. ರಾಜೇಶ್ ಜೆ ಬಿನ್ ಜವರಪ್ಪ (33) ವರ್ಷ, ಕ್ಯಾತಮಾರನಹಳ್ಳಿ, ಮೈಸೂರು.
ಈ ವಿಶೇಷ ವರದಿ ಓದಿದ್ದೀರಾ? ‘ಟಿಪ್ಪು ನಿಜ ಕನಸು’ಗಳಿಂದ ‘ಗಾಂಧೀ ಹತ್ಯೆಯ ಸತ್ಯ’ದವರೆಗೆ: ಇತಿಹಾಸ ತಿರುಚುವಿಕೆಯ ಸುತ್ತ ಮತ್ತೆ ವಿವಾದ
ಚಾಮರಾಜನಗರ ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿಪ್ರಿಯ ಎಂ. ಹಾಗೂ ಮೈಸೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ವೈ. ರಾಜು ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಆನೆ ಕಾರ್ಯಪಡೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರುದ್ರೇಶ್ ಜಿ., ವಲಯ ಅರಣ್ಯಾಧಿಕಾರಿ ಸುರೇಂದ್ರ ಕೆ., ಉಪ ವಲಯ ಅರಣ್ಯಾಧಿಕಾರಿಗಳಾದ ಕನ್ನಿಕಾ ಟಿ.ಸಿ., ಸುಮಲತಾ ಎ.ಎಂ., ಹೇಮಂತ್ ಕುಮಾರ್ ಎಚ್.ಬಿ. ಮತ್ತು ಸುರೇಶ್ ಕೆ. ಹಾಗೂ ಗಸ್ತು ಅರಣ್ಯ ಪಾಲಕರಾದ ತಿರುಪತಿ ಪೂಜಾರ, ಸಿದ್ದರಾಜಶೆಟ್ಟಿ ಆರ್. ಮತ್ತು ಇಮಾಮ್ ಸಾಬ್ ಸಗರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





