‘ಟಿಪ್ಪು ನಿಜ ಕನಸು’ಗಳಿಂದ ‘ಗಾಂಧೀ ಹತ್ಯೆಯ ಸತ್ಯ’ದವರೆಗೆ: ಇತಿಹಾಸ ತಿರುಚುವಿಕೆಯ ಸುತ್ತ ಮತ್ತೆ ವಿವಾದ

Date:

ನಾಟಕಕಾರ, ಬರಹಗಾರ ಅಡ್ಡಂಡ ಕಾರ್ಯಪ್ಪ ಹಿಂದಿನಿಂದಲೂ ಒಂದಲ್ಲೊಂದು ಕಾರಣಕ್ಕೆ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿರುವ ಹೆಸರು. ಇತಿಹಾಸದ ನಿರೂಪಣೆ, ರಂಗಭೂಮಿಯ ಬಳಕೆ, ಧಾರ್ಮಿಕ ಮತ್ತು ರಾಜಕೀಯ ವಿಚಾರಗಳ ಅಭಿವ್ಯಕ್ತಿ ಹಾಗೂ ಕೋಮು ಸೌಹಾರ್ದದ ಪ್ರಶ್ನೆಗಳು ಅವರ ಕೃತಿಗಳ ಸುತ್ತ ಹಲವು ಬಾರಿ ವಿವಾದಕ್ಕೆ ಕಾರಣವಾಗಿವೆ. ಇದೀಗ ‘ಗಾಂಧೀ ಹತ್ಯೆಯ ಸತ್ಯ’ ನಾಟಕದ ಮೂಲಕ ಮಹಾತ್ಮ ಗಾಂಧೀಜಿ ಅವರ ಹತ್ಯೆಯ ಸನ್ನಿವೇಶಗಳನ್ನು ಮರುವ್ಯಾಖ್ಯಾನಿಸಿರುವುದಕ್ಕೆ ಮೈಸೂರಿನ ಪ್ರಗತಿಪರ ಚಿಂತಕರು, ಗಾಂಧೀವಾದಿಗಳು ಮತ್ತು ವಿಚಾರವಂತರಿಂದ ವಿರೋಧ ವ್ಯಕ್ತವಾಗಿದೆ.

- Advertisement -

ಇತಿಹಾಸವನ್ನು ಹೇಗೆ ಅರ್ಥೈಸಬೇಕು? ಚಾರಿತ್ರಿಕ ವ್ಯಕ್ತಿಗಳ ಬದುಕು ಮತ್ತು ಸಾಧನೆಗಳನ್ನು ಯಾವ ನೆಲೆಯಲ್ಲಿ ವಿಶ್ಲೇಷಿಸಬೇಕು? ನಾಟಕಕಾರನ ಸೃಜನಶೀಲ ಸ್ವಾತಂತ್ರ್ಯಕ್ಕೂ ಇತಿಹಾಸದ ಸತ್ಯಾಸತ್ಯತೆಗೂ ಇರುವ ಸಂಬಂಧವೇನು? ಒಂದು ನಿರ್ದಿಷ್ಟ ರಾಜಕೀಯ ಅಥವಾ ಸೈದ್ಧಾಂತಿಕ ದೃಷ್ಟಿಕೋನವನ್ನು ಸಮರ್ಥಿಸಲು ರಂಗಭೂಮಿಯನ್ನು ಬಳಸಿಕೊಳ್ಳಬಹುದೇ? ಎಂಬ ಪ್ರಶ್ನೆಗಳು ಈ ವಿವಾದದ ಹಿನ್ನೆಲೆಯಲ್ಲಿ ಮತ್ತೆ ಮುನ್ನೆಲೆಗೆ ಬಂದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾವೈಕ್ಯತೆಯ ಹೆಜ್ಜೆನಾದ: ಕದ್ರಿ ದೇಗುಲದ ಯಕ್ಷಗಾನದಲ್ಲಿ ‘ಮಹಿಷಾಸುರ ಮರ್ದಿನಿ’ಯಾಗಿ...

ಕಲೆಗೆ ಯಾವುದೇ ಧರ್ಮ, ಜಾತಿಗಳ ಭೇದವಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಕಲೆ ಮತ್ತೊಮ್ಮೆ ಅತ್ಯಂತ ಸುಂದರವಾಗಿ ಸಾಬೀತುಪಡಿಸಿದೆ. ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವೇದಿಕೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು 'ಮಹಿಷಾಸುರ...

ಪದವೀಧರರು, ಶಿಕ್ಷಕರೇ ಗಮನಿಸಿ.. ಅ.23ರಂದು ಪ್ರಾಶಸ್ತ್ಯ ಮತ ಚಲಾಯಿಸುವಾಗ...

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2026ರ ಮತದಾನ ಅಕ್ಟೋಬರ್ 23ರಂದು ನಡೆಯಲಿದೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಆರಿಸಲು ಪ್ರಾಶಸ್ತ್ಯ ಮತದಾನ ಪದ್ಧತಿಯನ್ನು ಅನುಸರಿಸಬೇಕು. ಈ ಸಂದರ್ಭದಲ್ಲಿ...

ಬೆಂಗಳೂರು ಶಿಕ್ಷಕರ ಕ್ಷೇತ್ರ: ಪುಟ್ಟಣ್ಣ ಕಟ್ಟಿಕೊಂಡಿರುವ ‘ಶಿಕ್ಷಕರ ಕೋಟೆ’...

ವಿಧಾನ ಪರಿಷತ್‌ನ 4 ಸ್ಥಾನಗಳಲ್ಲಿಅಕ್ಟೋಬರ್ 23ರ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವುದು- ‘ಬೆಂಗಳೂರು ಶಿಕ್ಷಕರ ಕ್ಷೇತ್ರ'. ಇಲ್ಲಿ ಕಾಂಗ್ರೆಸ್‌ನಿಂದ ಸ್ಫರ್ಧಿಸಿರುವ ಪುಟ್ಟಣ್ಣ ಮತ್ತು ಎನ್‌ಡಿಎ ಅಭ್ಯರ್ಥಿಯಾಗಿರುವ...

ಅಡ್ಡಂಡ ಕಾರ್ಯಪ್ಪ ಅವರ ಹಿಂದಿನ ‘ಟಿಪ್ಪು ನಿಜ ಕನಸುಗಳು’ ನಾಟಕದ ವಿವಾದದಿಂದ ಆರಂಭಿಸಿ, ಈಗಿನ ‘ಗಾಂಧೀ ಹತ್ಯೆಯ ಸತ್ಯ’ ನಾಟಕದ ಸುತ್ತ ವ್ಯಕ್ತವಾಗಿರುವ ಪ್ರತಿಕ್ರಿಯೆಗಳವರೆಗೆ ಗಮನಿಸಿದಾಗ, ಇದು ಕೇವಲ ಎರಡು ನಾಟಕಗಳಿಗೆ ಸಂಬಂಧಿಸಿದ ವಿವಾದವಲ್ಲ; ಇತಿಹಾಸದ ನಿರೂಪಣೆ, ರಾಜಕೀಯ ಸಿದ್ಧಾಂತ, ಸಮಾಜದ ಸಾಮರಸ್ಯ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯ ಹೊಣೆಗಾರಿಕೆ ಕುರಿತು ನಡೆಯುತ್ತಿರುವ ವಿಶಾಲ ಚರ್ಚೆಯಾಗಿದೆ ಎಂಬುದು ಪ್ರಗತಿಪರರ ಅಭಿಪ್ರಾಯ.

ಇತಿಹಾಸ ತಿರುಚುವಿಕೆ ಆರ್‌ಎಸ್‌ಎಸ್‌ನ ಅಜೆಂಡಾ: ಭೂಮಿಗೌಡ

ಈದಿನ.ಕಾಮ್ ಜೊತೆ ಮಾತನಾಡಿದ ಪ್ರಗತಿಪರ ಚಿಂತಕ ಭೂಮಿಗೌಡ, ಅಡ್ಡಂಡ ಕಾರ್ಯಪ್ಪ ಅವರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಅಡ್ಡಂಡ ಕಾರ್ಯಪ್ಪ ಈ ಹಿಂದೆ ಇತಿಹಾಸ ತಿರುಚಲು ಹೋಗಿ, ಅದಕ್ಕೆ ಪ್ರತಿರೋಧ ಎದುರಿಸಲು ಸಾಧ್ಯವಾಗದೆ ಪಲಾಯನ ಮಾಡಿದ ವ್ಯಕ್ತಿ. ಸುಳ್ಳನ್ನೇ ತಮ್ಮ ಜೀವನದ ಬಂಡವಾಳ ಮಾಡಿಕೊಂಡಿರುವ ಸ್ವಾರ್ಥಿ. ಇಂತಹವರ ಮೂಲಕ ಇತಿಹಾಸವನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿವೆ. ಇದು ಆರ್‌ಎಸ್‌ಎಸ್‌ನ ಅಜೆಂಡಾದ ಭಾಗವಾಗಿದೆ. ದೇಶದ ಜನರಲ್ಲಿ ಸುಳ್ಳು ಇತಿಹಾಸವನ್ನು ಬಿತ್ತುವುದೇ ಇಂತಹ ಸಂಘಟನೆಗಳ ಕಾಯಕವಾಗಿದೆ” ಎಂದು ಟೀಕಿಸಿದರು.

ಐತಿಹಾಸಿಕ ಸಂಗತಿಗಳನ್ನು ಉಲ್ಲೇಖಿಸಿದ ಅವರು, “ಕೆಆರ್‌ಎಸ್ ಜಲಾಶಯದ ನಿರ್ಮಾಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ ಮಹತ್ವದ್ದಾಗಿದೆ. ಆದರೆ, ಅದಕ್ಕೂ ಹಿಂದಿನ ಕಾಲಘಟ್ಟದ ಇತಿಹಾಸವನ್ನು ಗಮನಿಸಬೇಕು. ಟಿಪ್ಪು ಸುಲ್ತಾನ್ ಕಾಲದಲ್ಲಿಯೇ ಈ ಯೋಜನೆಯ ಅಡಿಪಾಯಕ್ಕೆ ಸಂಬಂಧಿಸಿದ ಪ್ರಯತ್ನಗಳು ನಡೆದಿದ್ದವು ಎಂಬ ಐತಿಹಾಸಿಕ ಸಂಗತಿಗಳಿವೆ. ಹಾಗೆಯೇ, ಅಂದಿನ ಭೂವ್ಯವಸ್ಥೆಯಲ್ಲಿ ಮಹಾರಾಜರ ಒಡೆತನದ ಕಾವಲು ಭೂಮಿಯಲ್ಲಿ ಶಾನುಭೋಗರ ಮೂಲಕ ಬೆಳೆ ವಸೂಲಿ ಮಾಡುವ ಪದ್ಧತಿ ಇತ್ತು. ಉಳುವವನಿಗೆ ಭೂಮಿಯ ಹಕ್ಕು ದೊರೆಯುವ ನಿಟ್ಟಿನಲ್ಲಿ ಟಿಪ್ಪು ಸುಲ್ತಾನ್ ಆಡಳಿತದ ಸಂದರ್ಭದಲ್ಲಿ ನಡೆದ ಬದಲಾವಣೆಗಳನ್ನೂ ಇತಿಹಾಸದ ಸಮಗ್ರ ಹಿನ್ನೆಲೆಯಲ್ಲಿ ನೋಡಬೇಕು. ಇಂತಹ ಸಂಗತಿಗಳನ್ನು ಕಡೆಗಣಿಸಿ ಇತಿಹಾಸವನ್ನು ತಮಗೆ ಬೇಕಾದಂತೆ ನಿರೂಪಿಸುವುದು ಸರಿಯಲ್ಲ” ಎಂದರು.

ಇತಿಹಾಸ ತಿರುಚುವ ಪ್ರಯತ್ನಗಳ ವಿರುದ್ಧ ಬಿಜೆಪಿ ನಾಯಕರು ಮೌನ ವಹಿಸುತ್ತಿರುವುದನ್ನೂ ಪ್ರಶ್ನಿಸಿದ ಭೂಮಿಗೌಡ, “ಆರ್‌ಎಸ್‌ಎಸ್‌ನ ಆಣತಿಯಂತೆ ನಡೆಯಬೇಕಾದ ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಸಂಗತಿಗಳ ವಿರುದ್ಧ ಬಿಜೆಪಿ ನಾಯಕರು ಧ್ವನಿ ಎತ್ತುತ್ತಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿಯವರ ವಿಚಾರಧಾರೆಯನ್ನು ದುರ್ಬಲಗೊಳಿಸಿ, ಅವರ ಹತ್ಯೆಗೆ ಕಾರಣರಾದವರನ್ನು ವೈಭವೀಕರಿಸುವ ಪ್ರಯತ್ನಗಳು ನಡೆಯುವುದು ದೇಶದ ಇತಿಹಾಸಕ್ಕೆ ಮಾಡುವ ಅಪಚಾರ. ಗಾಂಧೀಜಿ ದೇಶ ವಿಭಜನೆಯೊಂದಿಗಿನ ಸಂಕೀರ್ಣ ರಾಜಕೀಯ ಪರಿಸ್ಥಿತಿಯಲ್ಲಿ ಶಾಂತಿ ಮತ್ತು ಅಹಿಂಸೆಯ ಮಾರ್ಗವನ್ನು ಪ್ರತಿಪಾದಿಸಿದವರು. ಅವರನ್ನು ದ್ವೇಷದ ರಾಜಕಾರಣದ ಮೂಲಕ ಇತಿಹಾಸದಿಂದ ದೂರ ಮಾಡಲು ಸಾಧ್ಯವಿಲ್ಲ. ಅಡ್ಡಂಡ ಕಾರ್ಯಪ್ಪ ಅವರಂತಹವರು ಎಷ್ಟೇ ಪ್ರಯತ್ನಿಸಿದರೂ ಗಾಂಧೀಜಿಯವರ ಕೊಡುಗೆಗಳನ್ನು ಭಾರತೀಯ ಇತಿಹಾಸದಿಂದ ಅಳಿಸಲು ಸಾಧ್ಯವಿಲ್ಲ. ಅವರ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ನಿರಂತರ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ” ಎಂದು ಹೇಳಿದರು.

ರಂಗಭೂಮಿಯ ದುರುಪಯೋಗ ಆಕ್ಷೇಪಾರ್ಹ: ಡಾ. ಮ.ಪು. ಪೂರ್ಣಾನಂದ

ಜನಪರ ಚಳವಳಿಯ ಮುಖಂಡ ಡಾ. ಮ.ಪು. ಪೂರ್ಣಾನಂದ ಅವರು ಮಾತನಾಡಿ, ಗಾಂಧೀಜಿಯವರ ಇತಿಹಾಸವನ್ನು ತಿರುಚುವ ಪ್ರಯತ್ನಗಳ ಹಿಂದೆ ರಾಜಕೀಯ ಮತ್ತು ಸೈದ್ಧಾಂತಿಕ ಉದ್ದೇಶಗಳಿವೆ. “ಸಂಘ ಪರಿವಾರದ ಪ್ರೇರಣೆಯಿಂದ ನಡೆಯುವ ಸರ್ಕಾರಗಳು ಅಧಿಕಾರಕ್ಕೆ ಬಂದ ನಂತರ, ಇಂತಹ ಇತಿಹಾಸ ತಿರುಚುವ ಪ್ರಯತ್ನಗಳಿಗೆ ಪ್ರಭುತ್ವದ ಬೆಂಬಲ ದೊರೆಯುತ್ತಿರುವುದು ಆತಂಕಕಾರಿ. ಇವು ಜೀವಪರ ಮೌಲ್ಯಗಳು, ಪ್ರಜಾಸತ್ತಾತ್ಮಕ ಆಶಯಗಳು ಮತ್ತು ಐತಿಹಾಸಿಕ ಸತ್ಯಗಳಿಗೆ ವಿರುದ್ಧವಾದ ಬೆಳವಣಿಗೆಗಳು. ಇಂತಹ ವಿದ್ಯಮಾನಗಳಿಂದ ಜನರು ರೋಸಿಹೋಗಿದ್ದಾರೆ. ಇತಿಹಾಸದ ಕುರಿತು ಜನರಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವಿಮರ್ಶಾತ್ಮಕ ಪ್ರಜ್ಞೆ ಬೆಳೆಸಬೇಕಾದ ಸಂದರ್ಭದಲ್ಲಿ, ರಂಗಭೂಮಿಯನ್ನು ನಿರ್ದಿಷ್ಟ ರಾಜಕೀಯ ಸಿದ್ಧಾಂತದ ಪ್ರಚಾರಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ರಂಗಭೂಮಿಯಂತಹ ಸೃಜನಶೀಲ ಮಾಧ್ಯಮವನ್ನು ದುರುಪಯೋಗಪಡಿಸಿಕೊಳ್ಳುವುದು ಅಡ್ಡಂಡ ಕಾರ್ಯಪ್ಪನವರಿಗೆ ಶೋಭೆ ತರುವುದಿಲ್ಲ. ಇದು ಆರ್‌ಎಸ್‌ಎಸ್‌ನ ರಾಜಕೀಯ ಮತ್ತು ಸೈದ್ಧಾಂತಿಕ ಕಾರ್ಯತಂತ್ರದ ಭಾಗವಾಗಿದೆ” ಎಂದು ಅವರು ಟೀಕಿಸಿದರು.

ಗಾಂಧೀಜಿಯವರ ವಿಚಾರಧಾರೆಯನ್ನು ಅಳಿಸಲು ಸಾಧ್ಯವಿಲ್ಲ: ವಿಜಯ್ ಕುಮಾರ್

ಗಾಂಧೀವಾದಿ ವಿಜಯ್ ಕುಮಾರ್ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರ ಹತ್ಯೆಯನ್ನು ಕೇವಲ ಒಬ್ಬ ವ್ಯಕ್ತಿಯ ಹತ್ಯೆಯಾಗಿ ನೋಡದೆ, ಅವರ ವಿಚಾರಧಾರೆಯ ವಿರುದ್ಧ ನಡೆಯುತ್ತಿರುವ ನಿರಂತರ ದಾಳಿಗಳ ಹಿನ್ನೆಲೆಯಲ್ಲಿ ಅರ್ಥೈಸಬೇಕಾಗಿದೆ. “ಗಾಂಧೀಜಿಯವರ ಹತ್ಯೆ 1948ರಲ್ಲಿ ನಡೆದ ಒಂದು ಘಟನೆಯಷ್ಟೇ ಅಲ್ಲ. ಅವರ ವಿಚಾರಧಾರೆ, ಅಹಿಂಸೆಯ ಮಾರ್ಗ ಮತ್ತು ಸ್ವಾತಂತ್ರ್ಯ ಹೋರಾಟದ ಆಶಯಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಆರ್‌ಎಸ್‌ಎಸ್‌ ಮತ್ತು ಸನಾತನವಾದಿ ಶಕ್ತಿಗಳಿಂದ ಗಾಂಧೀಜಿಯವರ ತತ್ವಗಳನ್ನು ವಿರೂಪಗೊಳಿಸುವ ಮೂಲಕ ಅವರ ಸೈದ್ಧಾಂತಿಕ ಪರಂಪರೆಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ.

”ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ, ಸತ್ಯ ಮತ್ತು ಸಾಮರಸ್ಯದ ಮೌಲ್ಯಗಳನ್ನು ತಿರುಚಿ, ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಆದರೆ, ಗೋಡ್ಸೆ ಮತ್ತು ಗಾಂಧೀಜಿಯವರ ವಿಚಾರಧಾರೆಗೆ ವಿರೋಧಿಯಾಗಿರುವ ಶಕ್ತಿಗಳು ಎಷ್ಟೇ ಪ್ರಯತ್ನಿಸಿದರೂ ಅವರ ತತ್ವಗಳನ್ನು ಅಳಿಸಲು ಸಾಧ್ಯವಿಲ್ಲ. ಗಾಂಧೀಜಿಯವರ ವಿಚಾರಧಾರೆ ಪ್ರತಿಯೊಂದು ಕಾಲಘಟ್ಟದಲ್ಲಿಯೂ ಹೊಸ ರೂಪದಲ್ಲಿ ಪುನರುಜ್ಜೀವನಗೊಳ್ಳುತ್ತಲೇ ಇರುತ್ತದೆ” ಎಂದು ಹೇಳಿದರು.

ಟಿಪ್ಪು ನಿಜ ಕನಸುಗಳು: 2023ರಲ್ಲಿ ಮುನ್ನೆಲೆಗೆ ಬಂದಿದ್ದ ವಿವಾದ

ಅಡ್ಡಂಡ ಕಾರ್ಯಪ್ಪ ರಂಗಾಯಣದ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ‘ಟಿಪ್ಪು ನಿಜ ಕನಸುಗಳು’ ನಾಟಕ ಮತ್ತು ಅದಕ್ಕೆ ಸಂಬಂಧಿಸಿದ ಪುಸ್ತಕ ಭಾರೀ ಚರ್ಚೆಗೆ ಕಾರಣವಾಗಿತ್ತು. ನಾಟಕದ ವಿಷಯವಸ್ತು, ಟಿಪ್ಪು ಸುಲ್ತಾನನ ಚಾರಿತ್ರಿಕ ಪಾತ್ರದ ನಿರೂಪಣೆ ಹಾಗೂ ಕೆಲವು ಘಟನೆಗಳ ಸತ್ಯಾಸತ್ಯತೆ ಕುರಿತು ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಸಂಬಂಧ ಪ್ರತಿಭಟನೆಗಳು ನಡೆದಿದ್ದವು. ಪೊಲೀಸ್ ದೂರುಗಳೂ ದಾಖಲಾಗಿದ್ದವು.

ನಾಟಕದಲ್ಲಿ ಟಿಪ್ಪು ಸುಲ್ತಾನನನ್ನು ಬ್ರಿಟಿಷರು ಕೊಂದದ್ದಲ್ಲ; ಒಕ್ಕಲಿಗ ಸಮುದಾಯದ ನಾಯಕರಾದ ಉರಿಗೌಡ ಮತ್ತು ನಂಜೇಗೌಡ ಎಂಬವರು ಕೊಂದರು ಎಂಬ ನಿರೂಪಣೆ ವಿವಾದದ ಪ್ರಮುಖ ಕೇಂದ್ರವಾಗಿತ್ತು. ಆದರೆ, ಈ ಇಬ್ಬರು ವ್ಯಕ್ತಿಗಳ ಅಸ್ತಿತ್ವ ಮತ್ತು ಟಿಪ್ಪು ಸುಲ್ತಾನನ ಸಾವಿನೊಂದಿಗೆ ಅವರಿಗೆ ಸಂಬಂಧ ಕಲ್ಪಿಸುವುದಕ್ಕೆ ವಿಶ್ವಾಸಾರ್ಹ ಐತಿಹಾಸಿಕ ಆಧಾರಗಳಿಲ್ಲ ಎಂದು ಇತಿಹಾಸಕಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಉರಿಗೌಡ ಮತ್ತು ನಂಜೇಗೌಡರ ಕಥನವನ್ನು ಕಾಲ್ಪನಿಕವೆಂದು ಪರಿಗಣಿಸುವ ಇತಿಹಾಸಕಾರರು, ಅದನ್ನು ಐತಿಹಾಸಿಕ ಸತ್ಯವೆಂಬಂತೆ ಬಿಂಬಿಸುವ ಪ್ರಯತ್ನದ ವಿರುದ್ಧ ಧ್ವನಿ ಎತ್ತಿದ್ದರು.

ಇದೇ ಸಂದರ್ಭದಲ್ಲಿ ಟಿಪ್ಪು ಸುಲ್ತಾನನು ಕೊಡವರ ಮೇಲೆ ನಡೆಸಿದನೆಂದು ಹೇಳಲಾಗುವ ದೌರ್ಜನ್ಯಗಳು ಮತ್ತು ಹತ್ಯಾಕಾಂಡದ ಉಲ್ಲೇಖಗಳ ಬಗ್ಗೆಯೂ ಪರ-ವಿರೋಧದ ಚರ್ಚೆ ನಡೆದಿತ್ತು. ಟಿಪ್ಪು ಸುಲ್ತಾನನ ಆಡಳಿತವನ್ನು ಕೇವಲ ಒಂದು ಆಯಾಮದಲ್ಲಿ ಚಿತ್ರಿಸುವುದರಿಂದ ಇತಿಹಾಸದ ಸಂಕೀರ್ಣತೆ ಮರೆಯಾಗುತ್ತದೆ ಎಂಬುದು ವಿಮರ್ಶಕರ ನಿಲುವಾಗಿತ್ತು.

ಅಂದಿನ ಬಿಜೆಪಿ ಸರ್ಕಾರವು ಚುನಾವಣಾ ಲಾಭಕ್ಕಾಗಿ ಇತಿಹಾಸವನ್ನು ತಿರುಚಿ ನಿರ್ದಿಷ್ಟ ರಾಜಕೀಯ ನಿರೂಪಣೆಯನ್ನು ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಮತ್ತು ಪ್ರಗತಿಪರ ಸಂಘಟನೆಗಳು ಆರೋಪಿಸಿದ್ದವು. ಮತ್ತೊಂದೆಡೆ, ಅಡ್ಡಂಡ ಕಾರ್ಯಪ್ಪ ಅವರು ತಾವು ಬ್ರಿಟಿಷ್ ಲೈಬ್ರರಿಯಲ್ಲಿರುವ ಅಧಿಕೃತ ಪತ್ರಗಳನ್ನು ಆಧರಿಸಿಯೇ ನಾಟಕವನ್ನು ರಚಿಸಿರುವುದಾಗಿ ಸಮರ್ಥಿಸಿಕೊಂಡಿದ್ದರು.

ಈ ವಿವಾದದ ನಡುವೆಯೇ ನಾಟಕವನ್ನು ಆಧರಿಸಿದ ಪುಸ್ತಕದ ಮಾರಾಟ ಮತ್ತು ವಿತರಣೆಗೆ ಸಂಬಂಧಿಸಿದಂತೆ ಕಾನೂನು ಹೋರಾಟವೂ ನಡೆದಿತ್ತು. ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡಿ ಕೋಮು ಸೌಹಾರ್ದವನ್ನು ಕದಡುತ್ತದೆ ಎಂದು ಆರೋಪಿಸಿ ಬೆಂಗಳೂರಿನ ಮಾಜಿ ವಕ್ಫ್ ಮಂಡಳಿ ಅಧ್ಯಕ್ಷರಾದ ಬಿ.ಎಸ್. ರಫೀವುಲ್ಲಾ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿವಿಲ್ ನ್ಯಾಯಾಲಯವು ಪುಸ್ತಕದ ಮಾರಾಟ ಮತ್ತು ವಿತರಣೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು ಎಂದು ವರದಿಯಾಗಿತ್ತು. ಆದರೆ ನಾಟಕದ ಪ್ರದರ್ಶನಕ್ಕೆ ನ್ಯಾಯಾಲಯ ನಿಷೇಧ ಹೇರಿರಲಿಲ್ಲ. ನಂತರದ ದಿನಗಳಲ್ಲಿ ಪುಸ್ತಕದ ಮೇಲಿದ್ದ ತಡೆಯಾಜ್ಞೆಯೂ ತೆರವುಗೊಂಡಿತ್ತು. ಈ ಪ್ರಕರಣವು ಇತಿಹಾಸದ ವ್ಯಾಖ್ಯಾನ, ಧಾರ್ಮಿಕ ಭಾವನೆಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನ್ಯಾಯಾಂಗದ ಮಧ್ಯಪ್ರವೇಶದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಎಚ್. ವಿಶ್ವನಾಥ್ ವಾಗ್ದಾಳಿ: ‘ರಂಗಾಯಣದ ನಿರ್ದೇಶಕ ಅಲ್ಲ, ಅಡ್ನಾಡಿ ಕಾರ್ಯಪ್ಪ’

ಟಿಪ್ಪು ನಿಜ ಕನಸುಗಳು ನಾಟಕದ ವಿವಾದದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಅಡ್ಡಂಡ ಕಾರ್ಯಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ”ಇವರು ರಂಗಾಯಣದ ನಿರ್ದೇಶಕ ಅಲ್ಲ, ಅಡ್ನಾಡಿ ಕಾರ್ಯಪ್ಪ” ಎಂದು ಟೀಕಿಸಿದ್ದ ಅವರು, ಟಿಪ್ಪು ಸುಲ್ತಾನನ ಕಾಲದಲ್ಲಿ ಅಡ್ಡಂಡ ಕಾರ್ಯಪ್ಪ ಹುಟ್ಟಿದ್ದರೇ ಎಂಬ ಪ್ರಶ್ನೆಯನ್ನೂ ಎತ್ತಿದ್ದರು. ‘ಟಿಪ್ಪು ನಿಜ ಕನಸುಗಳು’ ನಾಟಕದ ಪ್ರದರ್ಶನವನ್ನು ಖಂಡಿಸುತ್ತೇನೆ ಎಂದು ಹೇಳಿದ್ದರು. ‘ನಾನು ಯಾವ ಪಕ್ಷದಲ್ಲಿ ಇದ್ದರೂ ಟಿಪ್ಪು ಬಗ್ಗೆ ಮಾತನಾಡುತ್ತೇನೆ. ಟಿಪ್ಪು ಸ್ವಾಭಿಮಾನಿ ಕನ್ನಡಿಗ, ಮೈಸೂರು ಹುಲಿ’ ಎಂದು ವಿಶ್ವನಾಥ್ ಹೇಳಿದ್ದರು.

2023ರ ಮಾರ್ಚ್ 4ರಂದು ಕೋಲಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಡ್ಡಂಡ ಕಾರ್ಯಪ್ಪ ‘ಟಿಪ್ಪು ವೀರನಲ್ಲ’ ಎಂಬ ನಿಲುವಿನ ಮೂಲಕ ‘ಟಿಪ್ಪು ನಿಜ ಕನಸುಗಳು’ ನಾಟಕನ್ನು ನಿರೂಪಿಸಲಾಗಿದೆ ಎಂದು ಹೇಳಿದ್ದರು.

ರಂಗಾಯಣದಿಂದ ‘ಗಾಂಧೀ ಹತ್ಯೆಯ ಸತ್ಯ’ದವರೆಗೆ

ರಾಜಕೀಯ ಪರಿಸ್ಥಿತಿ ಬದಲಾದ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅಡ್ಡಂಡ ಕಾರ್ಯಪ್ಪ ಅವರು ರಂಗಾಯಣದ ನಿರ್ದೇಶಕ ಸ್ಥಾನದಿಂದ ನಿರ್ಗಮಿಸಿದ್ದರು ಎಂಬ ವರದಿಗಳೂ ಬಂದಿದ್ದವು. ಆ ಬಳಿಕ ಅವರು ಸಾರ್ವಜನಿಕ ಚರ್ಚೆಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ, ಇದೀಗ ‘ಗಾಂಧೀ ಹತ್ಯೆಯ ಸತ್ಯ’ ನಾಟಕದ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

ಟಿಪ್ಪು ಸುಲ್ತಾನನ ಕುರಿತು ವಿವಾದಕ್ಕೆ ಕಾರಣವಾಗಿದ್ದ ನಾಟಕದ ಬಳಿಕ ಈಗ ಮಹಾತ್ಮ ಗಾಂಧೀಜಿ ಅವರ ಹತ್ಯೆಯನ್ನೇ ಕೇಂದ್ರವಾಗಿಟ್ಟುಕೊಂಡು ಮತ್ತೊಂದು ನಿರೂಪಣೆಯನ್ನು ಪ್ರಸ್ತುತಪಡಿಸಿರುವುದು ಗಾಂಧೀವಾದಿಗಳು ಮತ್ತು ಪ್ರಗತಿಪರ ಚಿಂತಕರಲ್ಲಿ ಬೇಸರ ಮೂಡಿಸಿದೆ. ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಹೋರಾಟ, ಅಹಿಂಸೆಯ ತತ್ವ, ಧಾರ್ಮಿಕ ಸಾಮರಸ್ಯದ ಪ್ರಯತ್ನಗಳು ಮತ್ತು ಅವರ ಹತ್ಯೆಯ ಚಾರಿತ್ರಿಕ ಹಿನ್ನೆಲೆಯನ್ನು ಪ್ರಸ್ತುತಪಡಿಸುವಾಗ ಯಾವ ಅಂಶಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂಬುದೇ ಈಗಿನ ಚರ್ಚೆಯ ಮುಖ್ಯ ವಿಷಯವಾಗಿದೆ.

ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳ ವ್ಯಾಪಕ ಬಳಕೆಯ ನಂತರ ಗಾಂಧೀಜಿಯವರ ಕುರಿತು ತಪ್ಪು ಮಾಹಿತಿ, ಆಧಾರರಹಿತ ಆರೋಪಗಳು ಮತ್ತು ಆಯ್ದ ಐತಿಹಾಸಿಕ ಘಟನೆಗಳ ಆಧಾರದಲ್ಲಿ ರೂಪಿಸಲಾದ ನಿರೂಪಣೆಗಳು ಹರಿದಾಡುತ್ತಿವೆ ಎಂಬುದು ಗಾಂಧೀವಾದಿಗಳ ಆಕ್ಷೇಪವಾಗಿದೆ. ಇಂತಹ ಪ್ರಚಾರದ ಮೂಲಕ ಗಾಂಧೀಜಿಯವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಮತ್ತು ಹೊಸ ತಲೆಮಾರಿನಲ್ಲಿ ಅವರ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವೂ ಇದೆ.

ಸ್ವಾತಂತ್ರ್ಯ ಹೋರಾಟ ಕೇವಲ ಬ್ರಿಟಿಷರ ವಿರುದ್ಧದ ಹೋರಾಟವಾಗಿರಲಿಲ್ಲ

ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವು ಭಾರತವನ್ನು ಬ್ರಿಟಿಷರ ಆಳ್ವಿಕೆಯಿಂದ ವಿಮೋಚನೆಗೊಳಿಸುವ ಉದ್ದೇಶವನ್ನಷ್ಟೇ ಹೊಂದಿರಲಿಲ್ಲ. ಭಾರತೀಯ ಸಮಾಜದೊಳಗೆ ಬೇರೂರಿದ್ದ ಅಸ್ಪೃಶ್ಯತೆ, ಜಾತೀಯತೆ, ಮತೀಯತೆ, ಸ್ತ್ರೀ ಶೋಷಣೆ ಮತ್ತು ಇತರ ಸಾಮಾಜಿಕ ಅನಿಷ್ಟಗಳ ವಿರುದ್ಧವೂ ಅವರು ತಮ್ಮದೇ ರೀತಿಯಲ್ಲಿ ಹೋರಾಟ ನಡೆಸಿದ್ದರು. ಸಾಮಾಜಿಕ ಸುಧಾರಣೆ, ಧಾರ್ಮಿಕ ಸಾಮರಸ್ಯ ಮತ್ತು ಅಹಿಂಸೆಯ ಮೂಲಕ ಜನರನ್ನು ಸಂಘಟಿಸುವುದು ಅವರ ರಾಜಕೀಯದ ಪ್ರಮುಖ ಲಕ್ಷಣಗಳಾಗಿದ್ದವು. ಸ್ವಾತಂತ್ರ್ಯವೆಂದರೆ ಕೇವಲ ವಿದೇಶಿ ಆಡಳಿತದಿಂದ ಮುಕ್ತಿ ಪಡೆಯುವುದಲ್ಲ; ಸಮಾಜದೊಳಗಿನ ಅನ್ಯಾಯಗಳನ್ನೂ ಎದುರಿಸುವುದು ಎಂಬ ಚಿಂತನೆ ಅವರ ಸಾರ್ವಜನಿಕ ಬದುಕಿನಲ್ಲಿ ಮಹತ್ವ ಪಡೆದಿತ್ತು.

ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರೊಂದಿಗೆ ಗಾಂಧೀಜಿಯವರಿಗೆ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳಲ್ಲಿ ತೀವ್ರವಾದ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದವು. ಇಬ್ಬರ ನಡುವಿನ ಚರ್ಚೆಗಳು ಮತ್ತು ಸಂಘರ್ಷಗಳು ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದ ಪ್ರಮುಖ ಅಧ್ಯಾಯಗಳಾಗಿವೆ. ಅವರ ನಿಲುವುಗಳನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುವುದು ಅಗತ್ಯವೇ ಹೊರತು, ಒಬ್ಬರನ್ನೊಬ್ಬರು ಸರಳವಾಗಿ ವಿರೋಧಿ ವ್ಯಕ್ತಿಗಳೆಂದು ಬಿಂಬಿಸುವುದು ಇತಿಹಾಸದ ಸಂಕೀರ್ಣತೆಯನ್ನು ಮರೆಮಾಚುತ್ತದೆ.

ಆದರೆ, ಗಾಂಧೀಜಿಯವರ ಧಾರ್ಮಿಕ ಸಾಮರಸ್ಯದ ನಿಲುವುಗಳು ಮತ್ತು ಜಾತಿ ವ್ಯವಸ್ಥೆಯ ವಿರುದ್ಧದ ಅವರ ಕೆಲವು ಅಭಿಪ್ರಾಯಗಳನ್ನು ಆಧರಿಸಿ ಅವರನ್ನು ಹಿಂದೂ ಧರ್ಮವಿರೋಧಿಯೆಂದು ಚಿತ್ರಿಸುವ ಪ್ರಯತ್ನಗಳು ನಡೆದಿವೆ ಎಂಬುದು ಅವರ ಬೆಂಬಲಿಗರ ಆಕ್ಷೇಪ. ಗಾಂಧೀಜಿಯವರ ಹತ್ಯೆಗೆ ಕಾರಣವಾದ ರಾಜಕೀಯ ಮತ್ತು ಸೈದ್ಧಾಂತಿಕ ಹಿನ್ನೆಲೆಯನ್ನು ಮರೆಮಾಚಿ, ಅವರ ಹತ್ಯೆಯನ್ನು ಸಮರ್ಥಿಸುವ ಅಥವಾ ಅದಕ್ಕೆ ನ್ಯಾಯ ಒದಗಿಸುವ ರೀತಿಯ ನಿರೂಪಣೆಗಳನ್ನು ರೂಪಿಸುವುದರಿಂದ ಇತಿಹಾಸದ ಸತ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ಗಾಂಧೀವಾದಿಗಳ ಅಭಿಪ್ರಾಯ.

‘ಗಾಂಧೀ ಹತ್ಯೆಯ ಸತ್ಯ’: ನಾಟಕದ ನಿರೂಪಣೆ ಏನು?

‘ಗಾಂಧೀ ಹತ್ಯೆಯ ಸತ್ಯ’ ನಾಟಕದ ಕುರಿತು ಅಡ್ಡಂಡ ಕಾರ್ಯಪ್ಪ ನೀಡಿರುವ ವಿವರಣೆಯ ಪ್ರಕಾರ, ಭಾರತವನ್ನು ಬ್ರಿಟಿಷರಿಂದ ಸ್ವತಂತ್ರಗೊಳಿಸುವ ಹೋರಾಟ ನಡೆಸಿದ ನಾಯಕರು ದೇಶ ವಿಭಜನೆಯ ದುರಂತವನ್ನು ತಡೆಯಲು ವಿಫಲರಾದರು. ದೇವರಿಂದ ರಚಿತವಾದ ಭಾರತವನ್ನು ಮನುಷ್ಯ ಮಾತ್ರನು ತುಂಡರಿಸಲಾರ ಎಂದು ಹೇಳುತ್ತಿದ್ದ ಮಹಾತ್ಮ ಗಾಂಧೀಜಿಯವರೇ ವಿಭಜನೆಗೆ ಒಪ್ಪಿಗೆ ನೀಡಿದರು ಎಂಬ ಅಂಶವನ್ನು ಪ್ರಸ್ತಾಪಿಸಿದ್ದಾರೆ.

ಅವರ ನಿರೂಪಣೆಯಲ್ಲಿ, ಸ್ವಾತಂತ್ರ್ಯ ಹೋರಾಟಗಾರರ ಮತ್ತು ಜನಸಾಮಾನ್ಯರ ಆಶೋತ್ತರಗಳು ಕಮರಿಹೋಗಿ ದೇಶ ವಿಭಜನೆಯ ದುರಂತ ಸಂಭವಿಸಿತು. ವೇದಗಳ ತವರೂರು ಎಂದು ಬಣ್ಣಿಸಲಾದ ಸಿಂಧ್ ಹಾಗೂ ಸ್ವಾತಂತ್ರ್ಯಕ್ಕಾಗಿ ನೇಣುಗಂಬವೇರಿದ ಭಗತ್ ಸಿಂಗ್ ಅವರ ಜನ್ಮಸ್ಥಳ ಲಾಹೋರ್ ಭಾರತದಿಂದ ಬೇರ್ಪಟ್ಟು ಪಾಕಿಸ್ತಾನದ ಭಾಗವಾದವು ಎಂಬ ನೋವನ್ನು ಮುಂದಿಡಲಾಗಿದೆ.

ವಿಭಜನೆಯ ಸಂದರ್ಭದಲ್ಲಿ ನಡೆದ ಭೀಕರ ಹಿಂಸಾಚಾರವನ್ನು ವಿವರಿಸುವಾಗ, ‘ನೆಹರು ಮತ್ತು ಪಟೇಲ್‌ಗೆ ನಮ್ಮ ಕಡೆಯಿಂದ ಈ ಟ್ರೈನು ಸ್ವಾತಂತ್ರ್ಯದ ಉಡುಗೊರೆ’ ಎಂಬ ಫಲಕವನ್ನು ರೈಲಿಗೆ ತೂಗುಹಾಕಿ, ಹಿಂದೂ-ಸಿಖ್ಖರ ಮೃತದೇಹಗಳನ್ನು ತುಂಬಿದ ರೈಲನ್ನು ಪಾಕಿಸ್ತಾನದಿಂದ ಭಾರತಕ್ಕೆ ಕಳುಹಿಸಲಾಗಿತ್ತು ಎಂಬ ಘಟನೆಯನ್ನು ನಾಟಕದ ನಿರೂಪಣೆಯಲ್ಲಿ ಬಳಸಲಾಗಿದೆ. ವಿಭಜನೆಯ ಹಿಂಸಾಚಾರದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಅಮಾಯಕರು ಮೃತಪಟ್ಟಿದ್ದಾರೆ ಎಂಬ ಅಂದಾಜನ್ನೂ ಉಲ್ಲೇಖಿಸಲಾಗಿದೆ.

ಈ ಎಲ್ಲ ಘಟನೆಗಳ ನಂತರ ನಡೆದ ಗಾಂಧೀಜಿಯವರ ಹತ್ಯೆಯನ್ನು ಪ್ರಸ್ತಾಪಿಸುತ್ತಾ, ಗಾಂಧೀ ಹತ್ಯೆಗೆ ಗೋಡ್ಸೆ ಒಂದು ನೆಪಮಾತ್ರ; ಆದರೆ, ಹತ್ಯೆಯ ಹಿಂದಿನ ಕಾರಣ ವಿಭಜನೆಯ ಹಿಂಸಾಚಾರದಲ್ಲಿ ನೊಂದ, ನಿರಾಶ್ರಿತರಾದ ಕೋಟ್ಯಂತರ ಜನರ ಆಕ್ರೋಶ ಮತ್ತು ಆರ್ತನಾದ ಎಂಬ ಅರ್ಥದ ನಿರೂಪಣೆಯನ್ನು ಅಡ್ಡಂಡ ಕಾರ್ಯಪ್ಪ ಮುಂದಿಟ್ಟಿದ್ದಾರೆ. ಈ ಎಲ್ಲ ನೋವುಗಳು ಮತ್ತು ಘಟನೆಗಳ ಅಂತರಂಗದ ಬಹಿರಂಗವೇ ‘ಗಾಂಧೀ ಹತ್ಯೆಯ ಸತ್ಯ’ ನಾಟಕ; ಇದು ಸತ್ಯದ ಮಹಾಸ್ಫೋಟ ಎಂಬುದು ಅವರ ಸಮರ್ಥನೆ.

ಆದರೆ, ಈ ನಿರೂಪಣೆಯೇ ಈಗ ವಿವಾದಕ್ಕೆ ಕಾರಣವಾಗಿದೆ. ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಮತ್ತು ನಿರಾಶ್ರಿತರ ಸಂಕಷ್ಟವನ್ನು ದಾಖಲಿಸುವುದಕ್ಕೂ, ಗಾಂಧೀಜಿಯವರ ಹತ್ಯೆಗೆ ಆ ಸನ್ನಿವೇಶಗಳನ್ನು ಕಾರಣವಾಗಿ ಮುಂದಿಟ್ಟು ಹತ್ಯೆಯನ್ನು ಸಮರ್ಥಿಸುವ ರೀತಿಯಲ್ಲಿ ವ್ಯಾಖ್ಯಾನಿಸುವುದಕ್ಕೂ ವ್ಯತ್ಯಾಸವಿದೆ ಎಂಬುದು ವಿಮರ್ಶಕರ ವಾದ.

ಗಾಂಧೀಜಿಯವರು ವಿಭಜನೆಯ ಹಿಂಸಾಚಾರದಿಂದ ತೀವ್ರವಾಗಿ ನೊಂದಿದ್ದರು. ಅವರು ವಿಭಜನೆಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿಲುವುಗಳು, ಅವರ ರಾಜಕೀಯ ನಿರ್ಧಾರಗಳು ಮತ್ತು ಆ ಕಾಲದ ಪರಿಸ್ಥಿತಿಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಬಹುದು. ಆದರೆ, ಈ ವಿಚಾರಗಳನ್ನು ಮಾತ್ರ ಮುಂದಿಟ್ಟು ಅವರ ಹತ್ಯೆಯ ಚಾರಿತ್ರಿಕ ಮತ್ತು ಸೈದ್ಧಾಂತಿಕ ಹಿನ್ನೆಲೆಯನ್ನು ಕಡೆಗಣಿಸುವುದು ಸಮಗ್ರ ಇತಿಹಾಸದ ಅಧ್ಯಯನವಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.

ವಿಭಜನೆಯ ದುರಂತ ಮತ್ತು ಗಾಂಧೀಜಿಯವರ ನಿಲುವು: ಸತ್ಯಾಸತ್ಯತೆಯ ಪ್ರಶ್ನೆ

1947ರ ದೇಶ ವಿಭಜನೆಯು ಭಾರತೀಯ ಉಪಖಂಡದ ಇತಿಹಾಸದಲ್ಲಿನ ಅತ್ಯಂತ ನೋವಿನ ಅಧ್ಯಾಯಗಳಲ್ಲಿ ಒಂದು. ಧಾರ್ಮಿಕ ಗುರುತಿನ ಆಧಾರದಲ್ಲಿ ಜನರ ಸ್ಥಳಾಂತರ, ಸಾಮೂಹಿಕ ಹಿಂಸಾಚಾರ, ಕೊಲೆಗಳು, ಅತ್ಯಾಚಾರಗಳು ಮತ್ತು ಕುಟುಂಬಗಳ ವಿಭಜನೆ ಲಕ್ಷಾಂತರ ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿದವು. ವಿಭಜನೆಯಿಂದ ಸಂಭವಿಸಿದ ಮಾನವೀಯ ದುರಂತವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಗಾಂಧೀಜಿಯವರನ್ನು ವಿಭಜನೆಯೊಂದರ ಆಧಾರದಲ್ಲಿ ಮಾತ್ರ ಅಳೆಯುವುದು ಎಷ್ಟು ಅಪೂರ್ಣವೋ, ಅವರ ಎಲ್ಲ ನಿರ್ಧಾರಗಳನ್ನೂ ವಿಮರ್ಶೆಗೆ ಮೀರಿದವುಗಳೆಂದು ಪರಿಗಣಿಸುವುದೂ ಅಷ್ಟೇ ಅಪೂರ್ಣ. ಆದರೆ, ಯಾವುದೇ ಚಾರಿತ್ರಿಕ ವ್ಯಕ್ತಿಯ ರಾಜಕೀಯ ನಿರ್ಧಾರಗಳನ್ನು ವಿಮರ್ಶಿಸುವುದು ಮತ್ತು ಅವರ ಹತ್ಯೆಗೆ ಸಮರ್ಥನೆ ನೀಡುವುದು ಪರಸ್ಪರ ವಿಭಿನ್ನವಾದ ವಿಚಾರಗಳು.

ಗಾಂಧೀಜಿಯವರು ದೇಶ ವಿಭಜನೆಗೆ ಒಪ್ಪಿಗೆ ನೀಡಿದರು ಎಂಬ ನಾಟಕದ ನಿರೂಪಣೆಯನ್ನು ವಿಮರ್ಶಕರು ಪ್ರಶ್ನಿಸುತ್ತಿದ್ದಾರೆ. ವಿಭಜನೆಯ ಅನಿವಾರ್ಯತೆ, ಅದನ್ನು ತಡೆಯಲು ನಡೆದ ಪ್ರಯತ್ನಗಳು ಮತ್ತು ಗಾಂಧೀಜಿಯವರ ವೈಯಕ್ತಿಕ ನಿಲುವುಗಳ ನಡುವಿನ ವ್ಯತ್ಯಾಸವನ್ನು ಪರಿಗಣಿಸದೆ ಈ ವಿಚಾರವನ್ನು ಸರಳೀಕರಿಸುವುದು ತಪ್ಪು ಎಂಬುದು ಅವರ ಅಭಿಪ್ರಾಯ.

ಈ ವಿಶೇಷ ವರದಿ ಓದಿದ್ದೀರಾ? ವಿಚಾರವಾದಿಗಳು ಕಂಡ ಗಾಂಧೀ-ಟಿಪ್ಪು ಮತ್ತು ಕೋಮುವಾದಿಗಳ ತಿರುಚುವಿಕೆ!

ಅದೇ ರೀತಿ, ಭಗತ್ ಸಿಂಗ್ ಅವರ ಗಲ್ಲುಶಿಕ್ಷೆಯನ್ನು ತಡೆಯಲು ಗಾಂಧೀಜಿಯವರು ಪ್ರಯತ್ನಿಸಿದರೇ ಎಂಬ ಪ್ರಶ್ನೆಯನ್ನೂ ಐತಿಹಾಸಿಕ ಪತ್ರವ್ಯವಹಾರ ಮತ್ತು ದಾಖಲೆಗಳ ಆಧಾರದಲ್ಲಿ ಪರಿಶೀಲಿಸಬೇಕು. ಈ ವಿಚಾರದಲ್ಲಿ ಗಾಂಧೀಜಿಯವರು ಬ್ರಿಟಿಷ್ ಸರ್ಕಾರಕ್ಕೆ ಪತ್ರ ಬರೆದಿದ್ದರು ಮತ್ತು ಶಿಕ್ಷೆ ಜಾರಿಯಾಗದಂತೆ ಪ್ರಯತ್ನಿಸಿದ್ದರು ಎಂಬುದನ್ನು ಗಾಂಧೀವಾದಿಗಳು ನೆನಪಿಸುತ್ತಾರೆ. ಅಂತಿಮವಾಗಿ ಭಗತ್ ಸಿಂಗ್ ಅವರಿಗೆ ಗಲ್ಲುಶಿಕ್ಷೆ ವಿಧಿಸಿ ಜಾರಿಗೊಳಿಸಿದ್ದು ಬ್ರಿಟಿಷ್ ವಸಾಹತುಶಾಹಿ ಸರ್ಕಾರವೇ ಎಂಬುದನ್ನು ಮರೆಮಾಚಬಾರದು ಎಂಬುದು ಅವರ ನಿಲುವು.

ಈ ವಿಶೇಷ ವರದಿ ಓದಿದ್ದೀರಾ? ಮುಸ್ಲಿಮರನ್ನು ಗುರಿಯಾಗಿಸಿ ಮತದಾನದ ಹಕ್ಕು ಕಸಿಯುವ ತಂತ್ರವೇ ‘SIR’: ಶಿವಸುಂದರ್

ವಿಭಜನೆಯ ನೋವನ್ನೂ, ಗಾಂಧೀಜಿಯವರ ರಾಜಕೀಯ ನಿರ್ಧಾರಗಳನ್ನೂ, ಭಗತ್ ಸಿಂಗ್ ಅವರ ಗಲ್ಲುಶಿಕ್ಷೆಯನ್ನೂ ಇತಿಹಾಸದ ದಾಖಲೆಗಳ ಆಧಾರದಲ್ಲಿ ಪರಿಶೀಲಿಸುವುದು ಅಗತ್ಯ. ಆದರೆ ಈ ಘಟನೆಗಳನ್ನು ಗಾಂಧೀಜಿಯವರ ಹತ್ಯೆಗೆ ನೈತಿಕ ಸಮರ್ಥನೆಯಾಗಿ ಬಳಸುವುದಕ್ಕೆ ಪ್ರಗತಿಪರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಂಚಿಕೆ ಮುಂದುವರೆಯುತ್ತದೆ…

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ ಜಂಬೂ ಸವಾರಿ ವೇಳೆ ಭಾರೀ ಅನಾಹುತ: ಅಂಬಾರಿ ಹೊತ್ತು ಅಡ್ಡಾದಿಡ್ಡಿ ಓಡಿದ ಆನೆ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಅದ್ಧೂರಿ ಚಾಲನೆ ಸಿಕ್ಕು ಅಲ್ಲಿನ...

​’ಪೊಲೀಸರು ಆರ್‌ಎಸ್‌ಎಸ್ ಗುಲಾಮರ ಮಕ್ಕಳಲ್ಲ’: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿರುವ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ ಹೊಸ ಸಂಚಲನ!

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು...

ಇಂಟರ್ನೆಟ್‌ನಿಂದ AIವರೆಗೆ.. ದಶಕಗಳ ಹಿಂದೆಯೇ ಜಗತ್ತಿನ ಭವಿಷ್ಯ ಕಂಡಿದ್ದ ಗೀತೆಗಳಿವು!

ತಂತ್ರಜ್ಞಾನ ನಮ್ಮ ಕೈಸೇರುವ, ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗುವ ದಶಕಗಳ ಹಿಂದೆಯೇ,...