ತಾಲ್ಲೂಕಿನ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕ ಎಚ್.ಎಂ. ಗಣೇಶಪ್ರಸಾದ್ ಸಂಪೂರ್ಣ ವಿಫಲರಾಗಿದ್ದಾರೆ. ಇದು ಅವರ ಆಡಳಿತಾತ್ಮಕ ಅಸಮರ್ಥತೆಗೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸಿ.ಎಸ್. ನಿರಂಜನಕುಮಾರ್ ವಾಗ್ದಾಳಿ ನಡೆಸಿದರು.
ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕು ಕಚೇರಿ ಎದುರು ಬಿಜೆಪಿ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಳೆ ಕೊರತೆಯಿಂದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ರೈತರು, ಕೃಷಿ ಕೂಲಿ ಕಾರ್ಮಿಕರು ಮತ್ತು ಜಾನುವಾರು ಸಾಕಾಣಿಕೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ, ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಸಂಬಂಧ ಯಾವುದೇ ಪರಿಣಾಮಕಾರಿ ಯೋಜನೆ ಜಾರಿಗೊಳಿಸಿಲ್ಲ. ರೈತರು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಬೆಳೆ ಬೆಳೆದಿದ್ದರೂ ಮಳೆಯ ಅಭಾವದಿಂದ ಬೆಳೆಗಳು ಹಾನಿಗೊಳಗಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದರೂ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿದರು.
ಬರಪೀಡಿತ ತಾಲೂಕು ಘೋಷಣೆಗೆ ಒತ್ತಾಯ
ಗುಂಡ್ಲುಪೇಟೆ ತಾಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಬೆಳೆ ನಷ್ಟ ಪರಿಹಾರ, ಸೂಕ್ತ ಪರಿಹಾರ ಧನ ಹಾಗೂ ಅಗತ್ಯ ಸೌಲಭ್ಯಗಳನ್ನು ಸರ್ಕಾರ ತುರ್ತಾಗಿ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಕೆರೆಗಳಿಗೆ ನೀರು ತುಂಬಿಸುವಲ್ಲಿ ಶಾಸಕರು ವಿಫಲರಾಗಿರುವುದು ಅವರ ಆಡಳಿತ ವೈಫಲ್ಯವನ್ನು ತೋರಿಸುತ್ತದೆ. ಉಸ್ತುವಾರಿ ಸಚಿವರು ಇದುವರೆಗೆ ತಾಲೂಕಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿಲ್ಲ. ಸಂಸದರೂ ಜನರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಟೀಕಿಸಿದರು.
ಅಕ್ರಮ ಚಟುವಟಿಕೆಗಳ ಹೆಚ್ಚಳ ಆರೋಪ
ಗುಂಡ್ಲುಪೇಟೆ ತಾಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಣೆ, ಕೇರಳ ಲಾಟರಿ ಮಾರಾಟ, ಗಾಂಜಾ ವ್ಯವಹಾರ, ಅಕ್ರಮ ದನ ಸಾಗಣೆ ಹಾಗೂ ಖನಿಜ ಸಂಪತ್ತಿನ ಅಕ್ರಮ ಸಾಗಣೆ ನಿರಂತರವಾಗಿ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಬಂಧಪಟ್ಟ ಇಲಾಖೆಗಳು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕತೆ ಇಲ್ಲ
ಕ್ಷೇತ್ರದ ಬಹುತೇಕ ಅಭಿವೃದ್ಧಿ ಕಾಮಗಾರಿಗಳನ್ನು ಲ್ಯಾಂಡ್ ಆರ್ಮಿಗೆ ವಹಿಸಿರುವುದರಿಂದ ಪಾರದರ್ಶಕತೆ ಪ್ರಶ್ನೆಗೆ ಒಳಗಾಗಿದೆ. ಹಣದ ಪ್ರಭಾವದಿಂದ ಆಡಳಿತ ವ್ಯವಸ್ಥೆ ಕುಸಿದಿದ್ದು, ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳಲ್ಲಿ ಸಮರ್ಪಕ ಸೇವೆ ದೊರೆಯುತ್ತಿಲ್ಲ. ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳಿಗಾಗಿ ರೈತರು ಮತ್ತು ಸಾರ್ವಜನಿಕರು ದಿನವಿಡೀ ಸರ್ಕಾರಿ ಕಚೇರಿಗಳಲ್ಲಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಲ್ಲದೆ, ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ಮಾಸಾಶನ ಸಕಾಲದಲ್ಲಿ ವಿತರಿಸಲಾಗುತ್ತಿಲ್ಲ. ಜನಪರ ಆಡಳಿತ ನಡೆಸುವ ಬದಲು ಸರ್ಕಾರ ಮತ್ತು ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯಿಂದ ದೂರ ಉಳಿದಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯ ಬಳಿಕ ಬಿಜೆಪಿ ಮುಖಂಡರು ವಿವಿಧ ಬೇಡಿಕೆಗಳ ಮನವಿಯನ್ನು ತಾಲೂಕು ಆಡಳಿತಕ್ಕೆ ಸಲ್ಲಿಸಿ, ಬರಪೀಡಿತ ತಾಲೂಕು ಘೋಷಣೆ ಸೇರಿದಂತೆ ರೈತರ ಸಮಸ್ಯೆಗಳಿಗೆ ತುರ್ತು ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಒಂಬತ್ತು ತಿಂಗಳಿಂದ ನಡೆದಿಲ್ಲ ಕೆಡಿಪಿ ಸಭೆ: ಅಭಿವೃದ್ಧಿ ಯೋಜನೆಗಳ ಪ್ರಗತಿಗೆ ಬ್ರೇಕ್? ಬರ, ಗ್ರೇಟರ್ ಮೈಸೂರು, ಎಸ್‌ಐಆರ್ ನಡುವೆ ಸಮನ್ವಯದ ಕೊರತೆ
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಿ. ಮಹದೇವಪ್ರಸಾದ್, ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಡಾ. ನವೀನ್ ಮೌರ್ಯ, ಎಲ್. ಸುರೇಶ್, ಡಿ. ಸ್ವಾಮಿ (ಮಾದಪ್ಪ), ಅಗತಗೌಡನಹಳ್ಳಿ ಬಸವರಾಜು, ಹರೀಶ್ ಚಂದ್ರ, ಪ್ರಣಯ್ ಹಂಗಳ, ನಾಗುಸ್ವಾಮಿ, ಶಿಂಡನಪುರ ಮಂಜುನಾಥ್, ಹುಂಡಿಪುರ ಮಂಜು, ಸುನೀಲ್ ಮೂಡ್ಲು, ಶಿವಪುರ ಮಂಜು, ಗರಗನಹಳ್ಳಿ ಮಹೇಂದ್ರ, ಸುಬ್ಬು ಬಲಚವಾಡಿ, ಸಾಗರ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.





