ಹೊಸ ಓದು | ಮಂಜುನಾಥ್ ಚಾಂದ್ ಅವರ ‘ಮಹಾತ್ಮನ ಮಗಳು’

Date:

ಮೀರಾ ಬೆಹನ್ ಎಂದು ಕರೆಯಲ್ಪಡುವ ಮೆಡಿಲಿನ್ ಸ್ಲೇಡ್ ಅವರ ಆತ್ಮ ಕಥೆಯ ಕನ್ನಡ ಅನುವಾದ 'ಮಹಾತ್ಮನ ಮಗಳು'. ಈ ಪುಸ್ತಕವನ್ನು ಲೇಖಕ, ಪತ್ರಕರ್ತ ಮುಂಜುನಾಥ್ ಚಾಂದ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಈಗ ದೇಶದಾದ್ಯಂತ ಚರ್ಚೆಯಾಗುತ್ತಿರುವ ಉಪವಾಸ ಸತ್ಯಾಗ್ರಹ, ಜಗತ್ತಿಗೆ ಗಾಂಧಿ ಕೊಟ್ಟ ಕೊಡುಗೆ. ಕೃತಿಯಿಂದ ಆಯ್ದ 'ಸಾವಿನಂಚಿನಲ್ಲಿ ಬಾಪು' ಎಂಬ ಅಧ್ಯಾಯ... ಈದಿನ ಓದುಗರಿಗಾಗಿ.

ಅದು ಹೇಗೋ ಏನೋ ನಾಗರಿಕ ಅಸಹಕಾರ ಚಳವಳಿ ಕ್ರಮೇಣ ತಣ್ಣಗಾಯಿತು. ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್ಸಿನ ಪ್ರಮುಖ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರ ಬಂಧನ. ಇನ್ನೂ ಒಂದು ಕಾರಣವೆಂದರೆ ಸರ್ಕಾರವು ಹೊಸ ತಂತ್ರವನ್ನು ರೂಪಿಸಿದ್ದು. ಕಾರ್ಯಕರ್ತರನ್ನು ಬಂಧಿಸುವುದು, ಹೊಡೆಯುವುದನ್ನು ಕೈಬಿಟ್ಟು ಯಾರು ಕಾನೂನು ಉಲ್ಲಂಘಿಸುತ್ತಾರೋ ಅವರ ಆಸ್ತಿಯನ್ನು ಮಾತ್ರವಲ್ಲದೆ ಅವರ ಪಾಲಕರು ಹಾಗೂ ಹತ್ತಿರದ ಸಂಬಂಧಿಕರ ಭೂಮಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲು ಶುರುಮಾಡಿದ್ದರು. ಇದರಿಂದಾಗಿ ಸತ್ಯಾಗ್ರಹದಲ್ಲಿ ಧುಮುಕುವುದು ಎಂದರೆ ಇಡೀ ಕುಟುಂಬವನ್ನು ವಿಘಟಿಸಿದಂತೆ ಆಗಿತ್ತು. ಬಹುಷಃ ಈ ಹಿನ್ನೆಲೆಯಲ್ಲಿಯೇ ಸಬರಮತಿ ಆಶ್ರಮವನ್ನು ವಿಸರ್ಜಿಸುವ ಯೋಚನೆಯನ್ನು ಮಾಡಿದ್ದರು. ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಮೀಸಲಾದ ಇತರ ಅನೇಕ ಆಶ್ರಮಗಳ ರೀತಿಯಲ್ಲಿಯೇ ಇದನ್ನು ಕೂಡ ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿತ್ತು. ಆದರೆ ಅಲ್ಲಿಯವರೆಗೆ ಅವರು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ತನ್ನ ‘ಕುಟುಂಬ’ ಆಶ್ರಮದ ಮನೆಯನ್ನು ಉಳಿಸಿಕೊಂಡಿರುವಾಗ ಉಳಿದವರು ಎಲ್ಲವನ್ನೂ ಕಳೆದುಕೊಳ್ಳಬೇಕೆಂದು ನಿರೀಕ್ಷಿಸುವುದು ಸರಿಯಲ್ಲ ಎಂದು ಬಾಪು ಅವರಿಗೆ ಅನಿಸಿರಬೇಕು.

- Advertisement -

ಸಬರಮತಿ ಕಾರಾಗ್ರಹ ಆಶ್ರಮದಿಂದ ಕೇವಲ ಒಂದು ಮೈಲಿ ದೂರದಲ್ಲಿತ್ತು. ಆಶ್ರಮವನ್ನು ವಿಸರ್ಜಿಸುವ ಸಂದರ್ಭದಲ್ಲಿ ಕಾರು-ಟ್ರಕ್ಕುಗಳು ಬಂದು ಹೋಗುತ್ತಿದ್ದಾಗ ಉಂಟಾಗುತ್ತಿದ್ದ ಮೋಟಾರ್ ಹಾರ್ನ್‌ ಸದ್ದು ಮತ್ತು ಗದ್ದಲವು ನಮ್ಮ ಜೈಲಿನ ಆವರಣದ ತನಕವೂ ಕೇಳಿಸುತ್ತಿತ್ತು. ಆಶ್ರಮದ ವ್ಯವಸ್ಥಾಪಕ ನಾರಾಯಣದಾಸ್ ಭಾಯ್ ಅವರೊಂದಿಗೆ ಒಂದು ವ್ಯಾಪಾರ ಸಂಬಂಧಿ ಸಂದರ್ಶನಕ್ಕೆ ಅವಕಾಶ ನೀಡುವಂತೆ ನಾನು ಸರ್ಕಾರವನ್ನು ವಿನಂತಿಸಿಕೊಂಡಿದ್ದೆ. ಈ ಎಲ್ಲ ಗೊಂದಲಗಳ ನಡುವೆ ನಾನು ಉಳಿಸಿಕೊಳ್ಳಲು ಬಯಸಿದ್ದ ಕೆಲವು ಪುಸ್ತಕಗಳು ಮತ್ತು ಕಾಗದಪತ್ರಗಳ ಬಗ್ಗೆ ವಿವರಿಸುವುದು ನನ್ನ ಉದ್ದೇಶವಾಗಿತ್ತು. ಆದರೆ ನನ್ನ ಆ ವಿನಂತಿಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿತ್ತು. ಇದರ ಫಲವಾಗಿ ನಾನು ಆಶ್ರಮದಲ್ಲಿ ಬಿಟ್ಟು ಬಂದಿದ್ದ ಕೆಲವು ಅಮೂಲ್ಯ ವಸ್ತುಗಳು ನಾಮಾವಶೇಷವಾಗಿ ಹೋದವು. ಅವುಗಳಲ್ಲಿ ಕೆಲವು ಪುಸ್ತಕಗಳು, ರೊಮೇನ್ ರೋಲ್ಯಾಂಡ್ ಅವರ ಭಾವಚಿತ್ರ (ಅದರ ಹಿಂಭಾಗದಲ್ಲಿ ಅವರು ಪವಿತ್ರ ಸಂಗೀತದ ಸಾಲನ್ನು ಬರೆದಿದ್ದರು) ಕೂಡ ಸೇರಿದ್ದವು. ನಾವು ಲಂಡನ್‌ನಿಂದ ಮರಳಿದ ಬಳಿಕ ಜೈಲಿಗೆ ಹೋಗುವುದು ಮತ್ತು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸಾಮಾನ್ಯವಾಗಲಿದೆ ಎಂಬುದು ನನಗೆ ತಿಳಿದಿತ್ತು. ಆದ್ದರಿಂದ ನಾನು ಬಾಪು ಮತ್ತು ರೋಲ್ಯಾಂಡ್ ಅವರ ಎಲ್ಲ ಪತ್ರಗಳನ್ನು ಪ್ಯಾಕ್ ಮಾಡಿ ಅಹಮದಾಬಾದ್‌ನಲ್ಲಿದ್ದ ಅತ್ಯಂತ ನಂಬಿಕಸ್ಥ ಗೆಳೆಯನೊಬ್ಬನ ಬಳಿ ಇರಿಸಿದ್ದೆ. ಅವರ ಮನೆಯನ್ನು ಪೊಲೀಸರು ಶೋಧಿಸುವ ಸಾಧ್ಯತೆ ಇರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಆಶ್ರಮವನ್ನು ವಿಸರ್ಜಿಸುವ ಆ ಸದ್ದು ಸುಮಾರು ಎರಡು ಮೂರು ದಿನಗಳ ಕಾಲ ಗಾಳಿಯಲ್ಲಿ ತೇಲಿ ಬರುತ್ತಲೇ ಇತ್ತು. ಅದನ್ನು ಕೇಳಿಸಿಕೊಳ್ಳುತ್ತ ಬಾಪು ಅವರು ಆಶ್ರಮಕ್ಕಾಗಿ ಧಾರೆ ಎರೆದಿದ್ದ ವರ್ಷಗಳು, ಶ್ರಮ, ಪ್ರೀತಿಯ ಬಗ್ಗೆ ಚಿಂತಿಸಿದೆ. ಬಾಪು ಇನ್ನು ಮುಂದೆ ಇನ್ನಷ್ಟು ಕಠಿಣವಾದ ಸತ್ಯಾಗ್ರಹ ಮಾಡಲು ಅಣಿಯಾಗುತ್ತಿದ್ದಾರೆ ಎಂಬುದೇ ಈ ತ್ಯಾಗದ ಅರ್ಥವಾಗಿತ್ತು.

ಇದನ್ನು ಓದಿದ್ದೀರಾ?: ಹೊಸ ಓದು | ರಾಜಾರಾಂ ತಲ್ಲೂರು ಅವರ ‘ಮಮ ಡೇಟಾ’: ನಮಗೆ ಡೇಟಾ ಈಗ ಯಾಕೆ ಮುಖ್ಯ?

ಈ ಎಲ್ಲ ಯೋಚನೆಗಳು ನನ್ನ ಮನಸ್ಸಿನಲ್ಲಿ ಸುಳಿಯುತ್ತಿರುವಾಗಲೇ ಜೈಲರ್ ಬಂದು, ಸೂಪರಿಂಟೆಂಡೆಂಟ್ ಕರೆಯುತ್ತಿದ್ದಾರೆ ಬನ್ನಿ ಎಂದರು. ನಾನೋ ಕುಂತಲ್ಲೇ ಆಕ್ಷೇಪಿಸಿದೆ. ಯಾರ ಜೊತೆ ಸಂದರ್ಶನ? ಬಾಪು ಅವರಿಂದ ವಾರಕ್ಕೊಂದು ಪತ್ರ ಪಡೆಯುವ ನನ್ನ ಹಕ್ಕಿಗೆ ಧಕ್ಕೆ ತಂದಿರುವವರ ಜೊತೆ ಯಾವುದೇ ಸಂದರ್ಶನ ನನಗೆ ಬೇಕಾಗಿಲ್ಲ ಎಂದು ಸಿಡಿಮಿಡಿಗೊಂಡೆ. ಅದನ್ನು ಕೇಳಿ ಮನಸಾರೆ ನಕ್ಕ ಜೈಲರ್, ‘ಬಂದಿರುವುದು ಸ್ವತಃ ಗಾಂಧೀಜಿಯವರೇ’ ಎಂದರು. ನಾನೋ ಒಮ್ಮೆಗೇ ದಿಗಿಲಾಗಿ ಕತ್ತೆತ್ತಿ ನೋಡಿದೆ. ನನ್ನ ಹೃದಯ ಸಂತೋಷದಿಂದ ಕುಣಿದಾಡಿತು. ಕಳೆದ ಇಡೀ ಒಂದೂವರೆ ವರ್ಷದಿಂದ ಬಾಪು ಅವರನ್ನು ನಾನು ನೋಡಿರಲೇ ಇಲ್ಲ. ಇನ್ನೇನು ನನ್ನ ಬಿಡುಗಡೆಗೆ ಕೇವಲ ಒಂದು ತಿಂಗಳು ಮಾತ್ರ ಇತ್ತು. ಅಂತಹ ಹೊತ್ತಿನಲ್ಲೇ ಅವರು ಇನ್ನೊಮ್ಮೆ ಜೈಲು ಸೇರುವ ಯಾವುದೋ ಯೋಜನೆಯಲ್ಲಿದ್ದಾರೆ ಎಂಬುದು ನನಗೆ ತಿಳಿದಿತ್ತು. ಆದ್ದರಿಂದ ನಾನು ಅವರನ್ನು ನೋಡಲು ಇನ್ನೂ ಬಹಳ ಕಾಲ ಕಾಯಬೇಕಾದೀತು ಎಂದೇ ಭಾವಿಸಿದ್ದೆ.

D 459PSUwAASqS
ಮೀರಾ ಬೆಹನ್ ಮತ್ತು ಗಾಂಧಿ

ಸೂಪರಿಂಟೆಂಡೆಂಟ್ ಕೊಠಡಿಯಲ್ಲಿದ್ದ ಬಾಪು ಅವರನ್ನು ಕಂಡ ಕೂಡಲೇ ಅವರ ಪಾದ ಮುಟ್ಟಿ ನಮಸ್ಕರಿಸಿದೆ. ಹಸನ್ಮುಖಿಯಾಗಿದ್ದ ಅವರು ನನ್ನ ಬೆನ್ನು ತಡವಿದರು. ಒಂದರ ಹಿಂದೆ ಒಂದರಂತೆ ಮಾಡಿದ ಉಪವಾಸದ ಕಾರಣದಿಂದ ಅವರು ಕೃಶವಾಗಿದ್ದು, ದೈಹಿಕವಾಗಿ ತುಂಬಾ ದುರ್ಬಲರಾಗಿದ್ದರು. ಆದರೆ ಅವರಲ್ಲಿನ ಚೈತನ್ಯ ಒಂದಿಷ್ಟೂ ಕುಂದಿರಲಿಲ್ಲ. ಅವರು ಉತ್ಸಾಹದ ಬುಗ್ಗೆಯಂತೆ ಕಂಡುಬಂದರು. ಹಾಗಂತ ಅವರು ಏನನ್ನೂ ಹೇಳುವಂತಿರಲಿಲ್ಲ. ಆಶ್ರಮದ ಬಗ್ಗೆ ಅವರು ಹೊಂದಿದ್ದ ತ್ಯಾಗದಿಂದ ಅವರ ಮನಸ್ಸಿನ ಭಾರ ಇಳಿದಿದೆ ಮತ್ತು ಇನ್ನು ಏನೋ ಹೊಸತು ಕಾದಿದೆ ಎಂಬುದನ್ನು ಮಾತ್ರ ನಾನು ಊಹಿಸಬಲ್ಲವಳಾಗಿದ್ದೆ.

ಅದೇ ದಿನ ರಾತ್ರಿ ನನ್ನ ಊಹೆ ನಿಜವಾಯಿತು. ಬಾಪು, ಬಾ (ಕಸ್ತೂರ್ಬಾ) ಮತ್ತು ಆಶ್ರಮದ ಮುವತ್ತಕ್ಕೂ ಅಧಿಕ ಮಂದಿಯನ್ನು ಸರ್ಕಾರ ಬಂಧಿಸಿತ್ತು. ಅವರು ಯೋಜಿಸಿದ್ದ ಸತ್ಯಾಗ್ರಹ ಮೆರವಣಿಗೆಯನ್ನು ತಡೆಯಲು ಈ ಕ್ರಮವನ್ನು ಕೈಗೊಂಡಿದ್ದರು. ಬಾ ಅವರನ್ನು ಸಬರಮತಿ ಜೈಲಿನ ನಮ್ಮ ಆವರಣಕ್ಕೇ ಕರೆತರಲಾಗಿತ್ತು ಮತ್ತು ಬಾಪು ನಮ್ಮದೇ ಜೈಲಿನಲ್ಲಿದ್ದಾರೆ ಎಂಬ ವಿಷಯ ಕೂಡ ಅವರಿಂದಲೇ ತಿಳಿಯಿತು. ಬಾಪು ನಮ್ಮ ಜೈಲಿನ ಒಳಗೇ ಇದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿ ಒಂದು ರೀತಿಯ ಉತ್ಸಾಹ ಹಾಗೂ ಸಂಚಲನ ಮೂಡಿತ್ತು. ಬಾಪು ಜೊತೆಗೆ ಮಹದೇವ್ ಅವರನ್ನೂ ಬಂಧಿಸಲಾಗಿದ್ದು ಇಬ್ಬರೂ ಜೊತೆಗೇ ಇದ್ದಾರೆ ಎಂದು ಬಾ ಹೇಳಿದಾಗ ಸಮಾಧಾನವೆನಿಸಿತು. ಬಾಪು ಅವರ ಉಪಸ್ಥಿತಿಯಿಂದಾಗಿ ಜೈಲು ನಿಜಕ್ಕೂ ಒಂದು ವಿಭಿನ್ನ ಸ್ಥಳದಂತೆ ಭಾಸವಾಯಿತು. ಆದರೆ ನಮ್ಮ ಆ ಖುಷಿ ಬಹಳ ಕಾಲ ಉಳಿಯಲಿಲ್ಲ. ಯಾಕೆಂದರೆ ಅವರನ್ನು ತಕ್ಷಣವೇ ಯರವಾಡ ಜೈಲಿಗೆ ಸ್ಥಳಾಂತರ ಮಾಡಲಾಯಿತು.

ಆ ಬಳಿಕ ಎಲ್ಲ ಸ್ತಬ್ಧವಾಗಿತ್ತು. ಯಾವ ಸುದ್ದಿಯೂ ಹೊರಬರಲಿಲ್ಲ. ಸರ್ಕಾರವು ಒಂದೆರಡು ದಿನಗಳಲ್ಲಿಯೇ ಬಾಪು ಮತ್ತು ಮಹದೇವ್ ಅವರನ್ನು ಬಿಡುಗಡೆಮಾಡಿ ಒಂದು ಕಾರಿನಲ್ಲಿ ಕುಳ್ಳಿರಿಸಿ ಯರವಾಡ ಸುಪರ್ದಿಯನ್ನು ಬಿಟ್ಟುಹೋಗುವಂತೆ ಅವರಿಗೆ ನೋಟಿಸ್ ನೀಡಿತು ಎಂಬ ವಿಷಯ ಆನಂತರವಷ್ಟೇ ತಿಳಿಯಿತು. 1932ರ ಜನವರಿಯಲ್ಲಿ ಮುಂಬೈನಲ್ಲಿ ಮಾಡಿದಂತೆಯೇ ಅವರು ಯಾವುದೇ ಕಾನೂನನ್ನು ಮುರಿಯುವ ಮೊದಲೇ ಈ ಬಾರಿಯೂ ಬಂಧಿಸಿದ್ದರು. ಅವರನ್ನು ಕೇವಲ ವಿಚಾರಣಾಧೀನ ಕೈದಿಯಾಗಿ ಇರಿಸಿಕೊಳ್ಳುವುದು ಸರ್ಕಾರಕ್ಕೆ ಇಷ್ಟವಿರಲಿಲ್ಲ. ಬದಲಿಗೆ ಶಿಕ್ಷೆಗೆ ಗುರಿಯಾದ ಅಪರಾಧಿಯನ್ನಾಗಿ ಮಾಡಲು ಬಯಸಿದ್ದರು. ಇದರಿಂದ ಜೈಲಿನ ನಿಯಮಗಳ ವಿಷಯದಲ್ಲಿ ಅವರು ಕಠಿಣವಾಗಿ ವರ್ತಿಸಲು ಒಂದು ನೆವ ಸಿಗುತ್ತಿತ್ತು. ನಿರೀಕ್ಷೆಯಂತೆಯೇ ಬಾಪು ಆ ಆದೇಶವನ್ನು ಉಲ್ಲಂಘಿಸಿದ್ದರು. ಹೀಗಾಗಿ ಸರ್ಕಾರಕ್ಕೆ ಅವರ ಮೇಲೆ ಅಪರಾಧ ಹೊರಿಸಲು ಸಾಧ್ಯವಾಯಿತು. ವಿಚಾರಣೆ ಅಂತ ನಡೆದಿದ್ದು ಜೈಲಿನ ಒಳಗೇ. ಅದರ ಫಲವಾಗಿ ಬಾಪು ಅವರಿಗೆ ಒಂದು ವರ್ಷದ ‘ಎ-ಕ್ಲಾಸ್’ ಸಾದಾ ಸಜೆ ವಿಧಿಸಲಾಯಿತು. ಯರವಾಡ ಒಪ್ಪಂದದ ವೇಳೆ ಹರಿಜನ ಸೇವೆಗಾಗಿ ಅವರಿಗೆ ನೀಡಲಾಗಿದ್ದ ಸೌಲಭ್ಯಗಳನ್ನು ಹಿಂದಕ್ಕೆ ಪಡೆಯಲಾಯಿತು. ಸಹಜವಾಗಿಯೇ ಬಾಪು ಇದನ್ನೆಲ್ಲ ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ವಾದ-ವಿವಾದಗಳು ಯಾವುದೇ ಫಲ ನೀಡದೇ ಹೋದಾಗ ಅವರು ಆಮರಣಾಂತ ಉಪವಾಸ ಸತ್ಯಾಗ್ರಹ ಘೋಷಿಸಿದರು. ಬಾ ಅವರನ್ನು ಸಬರಮತಿ ಕಾರಾಗ್ರಹದಿಂದ ಬಿಡುಗಡೆ ಮಾಡಲಾಯಿತು. ಅದರಿಂದಲೇ ಇನ್ನೊಂದು ಉಪವಾಸ ಆರಂಭವಾಯಿತು ಎಂಬ ಸುಳಿವು ಸಿಕ್ಕಿತು.

ಇದನ್ನು ಓದಿದ್ದೀರಾ?: ಹೊಸ ಓದು | ಶೂದ್ರ ಶ್ರೀನಿವಾಸರ ‘ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ’

ನಾನು ಜೈಲುವಾಸದ ಒಂದು ವರ್ಷ ಮುಗಿಸಿದ್ದೆ. ಆದರೆ ಆರ್ಥರ್ ರೋಡ್ ಜೈಲಿನಲ್ಲಿ ಕಳೆದ ಮೊದಲ ಒಂದು ವಾರ ವಿಚಾರಣಾಧೀನ ಅವಧಿಯಾದ ಕಾರಣ ಇನ್ನೂ ಏಳು ದಿನ ಹೆಚ್ಚು ಕಾಲ ಜೈಲಿನಲ್ಲಿ ಕಳೆಯಬೇಕಾಯಿತು. ಈ ಬಗ್ಗೆ ಜೈಲಿನ ಅಧೀಕ್ಷರಿಗೆ ಮನವಿ ಮಾಡಿಕೊಂಡೆ. ಆದರೆ ನಿಯಮದ ಪ್ರಕಾರ ಮೊದಲ ವಾರವನ್ನು ಶಿಕ್ಷೆಯ ಅವಧಿಯಲ್ಲಿ ಸೇರ್ಪಡೆಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಅಷ್ಟರಲ್ಲಾಗಲೇ ಉಪವಾಸ ಕುಳಿತ ಬಾಪು ಅವರ ಆರೋಗ್ಯ ಬಿಗಡಾಯಿಸುತ್ತಿದೆ ಮತ್ತು ಅದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ ಎಂಬ ಸುದ್ದಿ ತಿಳಿಯಿತು. ಜೈಲಿನೊಳಗೆ ಕುಳಿತ ನಾನು ಚಡಪಡಿಸತೊಡಗಿದೆ. ಅಧೀಕ್ಷಕರನ್ನು ಮತ್ತೊಮ್ಮೆ ಭೇಟಿಯಾಗಿ ಮನವಿ ಮಾಡಿಕೊಂಡೆ. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಗರಿಷ್ಠ ಸಹಾಯ ಮಾಡುವ ಭರವಸೆಯನ್ನು ಕೊಟ್ಟರು. ಅಂದರೆ ಬಿಡುಗಡೆ ಅವಧಿಯ ಕೆಲವೇ ಗಂಟೆಗಳಿಗೂ ಮೊದಲು ಬಿಡುಗಡೆ ಮಾಡುವುದಾಗಿ ಹೇಳಿದರು. ಹಾಗೆ ಮಾಡಿದರೆ ಮಾತ್ರ ನಾನು ಪೂನಾಕ್ಕೆ ಹೋಗುವ ರೈಲಿನಲ್ಲಿ ಪ್ರಯಾಣ ಮಾಡಲು ಸಾಧ್ಯವಾಗಿತ್ತು. ಇಲ್ಲವಾದರೆ ಇನ್ನೂ ಒಂದು ದಿನ ಅದಕ್ಕಾಗಿ ಕಾಯಬೇಕಾಗಿತ್ತು. ಆ ನಿರ್ಣಾಯಕ ಹೊತ್ತಿನಲ್ಲಿ ಅಷ್ಟು ಸಹಾಯ ಮಾಡಿದ ಅವರಿಗೆ ಧನ್ಯವಾದ ಸಮರ್ಪಿಸಿದೆ. ನಾನು ನೇರವಾಗಿ ರೈಲು ನಿಲ್ದಾಣಕ್ಕೆ ಧಾವಿಸಿ ಮುಂಬೈಗೆ ಹೋಗುವ ರೈಲನ್ನು ಹಿಡಿದೆ. ಅಲ್ಲಿಂದ ಮುಂದೆ ಪೂನಾಕ್ಕೆ ಹೋಗುವ ರೈಲನ್ನು ಸಂಪರ್ಕಿಸಬೇಕಾಗಿತ್ತು. 3ನೇ ದರ್ಜೆ ಬೋಗಿಯಲ್ಲಿ ಹೋಗಿ ನನ್ನ ಸೀಟಿನಲ್ಲಿ ಕುಳಿತುಕೊಳ್ಳುವ ಹೊತ್ತಿಗೆ ನನ್ನ ಸುತ್ತಲಿನ ಜನ ಬಾಪು ಸತ್ಯಾಗ್ರಹದ ಬಗ್ಗೆಯೇ ಮಾತನಾಡುತ್ತಿದ್ದರು. ಬಾಪು ಈ ಬಾರಿ ಉಳಿಯಲು ಸಾಧ್ಯವೇ ಇಲ್ಲ ಎನ್ನುವುದು ಅವರ ಮಾತಿನ ಧ್ವನಿಯಾಗಿತ್ತು. ಎಲ್ಲರ ಮುಖದಲ್ಲಿ ಹತಾಶೆ, ಸಂಕಟ, ಆಕ್ರೋಶ ಮನೆಮಾಡಿತ್ತು. ನನ್ನ ಹೊಟ್ಟೆಯೊಳಗಿನ ತಳಮಳವನ್ನು ಯಾರಿಗೂ ಹೇಳುವಂತಿರಲಿಲ್ಲ. ನಾನು ಕುಂತಲ್ಲೇ ಕದಲಿದೆ.

ಅಂತೂ ರೈಲು ಪೂನಾ ತಲುಪಿತು. ಅಲ್ಲಿಂದ ನೇರವಾಗಿ ಪರ್ಣಕುಟಿಗೆ ಧಾವಿಸಿದೆ. ಅಲ್ಲಿ ಸೇರಿದ್ದ ಜನ ಆತಂಕದಿಂದ ಕೈ ಕೈ ಹಿಸುಕಿಕೊಳ್ಳುತ್ತಿರುವುದನ್ನು ಕಂಡೆ. ಸರ್ಕಾರವನ್ನು ಒಪ್ಪಿಸಲು ಚಾರ್ಲಿ ಆಂಡ್ರೂಸ್ ಶಕ್ತಿಮೀರಿ ಪ್ರಯತ್ನ ನಡೆಸಿದ್ದಾರೆ. ಆದರೆ ಈ ಬಾರಿ ಸರ್ಕಾರ ಬಾಪು ಸಾವನ್ನು ನಿರೀಕ್ಷಿಸಿದಂತೆ ಕಾಣುತ್ತಿದೆ ಎಂದೂ ಜನ ಮಾತನಾಡಿಕೊಳ್ಳುತ್ತಿದ್ದರು. ಬಾಪುವನ್ನು ಕೈದಿಯಾಗಿಯೇ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆ ಹೊತ್ತಿಗೆ ಆಸ್ಪತ್ರೆಯ ಒಳಗೆ ಹೋಗಿದ್ದ ಬಾ ಅಲ್ಲಿಗೆ ಬಂದರು. ಬರುತ್ತಲೇ, “ಬಾಪು ಸಾವು ನಿಶ್ಚಿತ!” ಎಂದು ಕ್ಷೀಣ ದನಿಯಲ್ಲಿ ಹೇಳಿದರು. “ಅವರು ನೀರು ಕುಡಿಯಲು ನಿರಾಕರಿಸಿದ್ದಾರೆ. ತಮ್ಮ ಬಳಿಯಿದ್ದ ಅಲ್ಪಸ್ವಲ್ಪ ವಸ್ತುಗಳನ್ನೆಲ್ಲ ಆಸ್ಪತ್ರೆ ಸಿಬ್ಬಂದಿಗೆ ಹಂಚಿಬಿಟ್ಟಿದ್ದಾರೆ. ಎಲ್ಲವೂ ಮುಗಿದು ಹೋಯಿತು!” ಎಂದು ಹೇಳುತ್ತ ಹೇಳುತ್ತ ಅವರು ಗದ್ಗದಿತರಾದರು. ಮುಂದೆ ಅವರಿಗೆ ಮಾತೇ ಬಾರದಂತಾಯಿತು. ಆ ಸಂದರ್ಭದಲ್ಲಿ ನಂಬಲು ನನ್ನ ಬಳಿ ಯಾವುದೇ ಭೌತಿಕ ಪುರಾವೆಗಳು ಇಲ್ಲದೇ ಹೋದರೂ ದೇವರು ಬಾಪು ಅವರನ್ನು ಸಾಯಲು ಬಿಡುವುದಿಲ್ಲ ಎಂಬ ದೃಢವಾದ ನಂಬಿಕೆ ನನ್ನದಾಗಿತ್ತು. ಅಲ್ಲಿದ್ದ ಬಾ ಮತ್ತು ಇತರರಿಗೆ ನಾನು ಅದನ್ನೇ ಹೇಳಿದೆ. ಆದರೆ ಆ ಹೊತ್ತಿನಲ್ಲಿ ಯಾರಿಗೆ ತಾನೆ ಸಾಂತ್ವನ ಹೇಳಲು ಸಾಧ್ಯ?

ಅಂದು ಬೆಳಿಗ್ಗೆ ಚಾರ್ಲಿ ಆಂಡ್ರೂಸ್ ಮತ್ತೆ ಅಧಿಕಾರಿಗಳ ಬಳಿಗೆ ಹೋದರು. ಇಡೀ ದೇಶ ಆಕ್ರೋಶ ಮತ್ತು ಅಸಮಾಧಾನದಿಂದ ಕುದಿಯುತ್ತಿದೆ ಎಂಬುದನ್ನು ಸರ್ಕಾರಕ್ಕೆ ತಿಳಿಸಿ ಕೊನೆಯ ಕ್ಷಣದ ಒಪ್ಪಂದಕ್ಕೆ ಬರುವುದು ಅವರ ಉದ್ದೇಶವಾಗಿತ್ತು. ನಾವು ಕೂಡ ಅದೇ ಭರವಸೆಯೊಂದಿಗೆ ಕಾದೇ ಕಾದೆವು. ಎಲ್ಲರ ಹೃದಯಗಳು ಮೌನವಾಗಿ ಪ್ರಾರ್ಥಿಸುತ್ತಿದ್ದವು. ಅಂತಹ ಹೊತ್ತಿನಲ್ಲೇ ಒಂದು ಸುದ್ದಿ ಹೊರಬಂತು- ಬಾಪು ಬಿಡುಗಡೆಯಾಗುತ್ತಿದ್ದಾರೆ! ನಮ್ಮ ಕಣ್ಣುಗಳಲ್ಲಿ ನಿಜಕ್ಕೂ ಆನಂದಬಾಷ್ಪ. ನಾವೆಲ್ಲ ಟೆರೆಸ್‌ನಿಂದ ಹೊರಗೆ ಇಣುಕಿ ನೋಡುತ್ತಿರುವಾಗಲೇ ಒಂದು ರೆಡ್‌ಕ್ರಾಸ್ ಆಂಬುಲೆನ್ಸ್ ಹೊರಬರುತ್ತಿರುವುದು ಕಾಣಿಸಿತು. ಅತ್ಯಂತ ಕಿರಿದಾದ ದಾರಿಯಿಂದ ಸಾಗಿಬಂದ ಅದು ಮುಂಭಾಗದಲ್ಲಿ ನಿಂತಿತು. ಚಾಲಕನ ಪಕ್ಕದಲ್ಲಿ ಚಾರ್ಲಿ ಆಂಡ್ರೂಸ್ ನಗುಮೊಗ ಹೊತ್ತು ಕುಳಿತಿದ್ದರು. ಅಲ್ಲಿಂದ ಕೆಳಕ್ಕೆ ಇಳಿದ ಅವರು ಹಿಂದಿನ ಬಾಗಿಲನ್ನು ತೆರೆದು ಬಾಪು ಮಲಗಿದ್ದ ಸ್ಟ್ರೆಚರ್‌ನ್ನು ಹೊರಕ್ಕೆ ತೆಗೆದು ಮೇಲಕ್ಕೆ ಎತ್ತಿದರು. ಅಲ್ಲಿಂದಲೇ ಅವರ ಕಣ್ಣುಗಳು ಫಳಫಳನೆ ಹೊಳೆದವು. ಅವರಲ್ಲಿನ್ನೂ ಚೈತನ್ಯ ಬತ್ತಿರಲಿಲ್ಲ. ಆದರೆ ಕಣ್ಣುಗಳು ಕುಳಿಬಿದ್ದಿದ್ದವು. ದೇಹ ಹಿಂದೆಂದೂ ಕಾಣದಷ್ಟು ಕೃಶವಾಗಿತ್ತು. ಅವರನ್ನು ಅದೇ ಸ್ಟ್ರೆಚರ್ ಮೇಲೆ ಮಲಗಿಸಿಯೇ ಮುಂದೆ ಕರೆದೊಯ್ಯಲಾಯಿತು. ಆ ಒತ್ತಡದ ನಡುವೆಯೂ ಅವರು ನಗು ಬೀರುತ್ತಿದ್ದರು. ನನ್ನನ್ನು ಕಂಡವರೇ ತಮ್ಮ ಇಷ್ಟೇ ಇಷ್ಟು ಸಪೂರದ ಕೈಯನ್ನು ಎತ್ತಿ ಮೆಲ್ಲನೆ ಒಂದು ಪೆಟ್ಟುಕೊಟ್ಟರು!

ಇದನ್ನು ಓದಿದ್ದೀರಾ?: ಹೊಸ ಓದು | ವಿಕಾಸ್ ಮೌರ್ಯರ ‘ನುಡಿ ಚಮ್ಮಾಳಿಗೆ’

ಜೈಲಿನಲ್ಲಿ ಬಾಪು ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದರು. ಅವರನ್ನು ಆಂಬುಲೆನ್ಸ್‌ಗೆ ಶಿಫ್ಟ್ ಮಾಡುವ ಮೊದಲೇ ಕಿತ್ತಳೆ ಹಣ್ಣಿನ ರಸ ಕುಡಿಸಲಾಗಿತ್ತು. ಈಗ ನಾವೆಲ್ಲರೂ ಅವರು ಮಲಗಿದ್ದ ಹಾಸಿಗೆಯ ಸುತ್ತ ಜಮಾಯಿಸಿದ್ದೆವು ಮತ್ತು ಎಲ್ಲರೂ ಪ್ರಾರ್ಥನೆಯನ್ನು ಕೈಗೊಂಡೆವು. ಬಾಪು ಅವರಿಗೆ ಈ ಬೇಷರತ್ ಬಿಡುಗಡೆ ಎಷ್ಟು ಅನಿರೀಕ್ಷಿತವಾಗಿತ್ತೆಂದರೆ ಅವರು ತಮ್ಮ ಮುಂದೆ ಇನ್ನೂ ಸುದೀರ್ಘವಾದ ಜೀವನವಿರುವುದನ್ನು ಕಂಡು ದಿಗ್ಭ್ರಮೆಗೆ ಒಳಗಾದರು. ಪತ್ರಿಕೆಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅವರು ಹೀಗೆ ಹೇಳಿದರು:

“ದೇವರ ಲೀಲೆ ನಿಜಕ್ಕೂ ಅಭೇದ್ಯವಾದುದು. ನನ್ನ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಅತ್ಯಂತ ಅಚ್ಚರಿಯ ಮತ್ತು ಅನಿರೀಕ್ಷಿತ ಘಟನೆಗಳು ನಡೆಯುತ್ತಲೇ ಇವೆ. ಅವನ್ನು ನಾನು ನೋಡುತ್ತ ಬಂದಿದ್ದರೂ ನನ್ನ ಜೀವಮಾನದಲ್ಲೇ ಅತ್ಯಂತ ಅನಿರೀಕ್ಷಿತ ಘಟನೆ ಈಗಷ್ಟೇ ಸಂಭವಿಸಿದೆ. ಈಗ ನನಗಾಗಿ ಮುಂದೆ ಏನಿದೆ? ಜೈಲಿನಿಂದ ಸಿಕ್ಕ ಈ ಸ್ವಾತಂತ್ರ್ಯ ಹೇಗೆ ಬಳಸಿಕೊಳ್ಳಲಿ? ನನಗೆ ತಿಳಿಯದು…

459920 1 En 2 Fig6 HTML
ಮೀರಾ ಬೆಹನ್ ಮತ್ತು ಗಾಂಧಿ

ಅವರ ಹೇಳಿಕೆಯ ಉಳಿದ ಭಾಗವು ಅಸ್ಪೃಶ್ಯತೆಯ ಆಚರಣೆಯನ್ನು ನಿರ್ಮೂಲನ ಮಾಡುವಂತೆ ಸವರ್ಣೀಯ ಹಿಂದೂಗಳಿಗೆ ಮಾಡಿದ ಹೃದಯಸ್ಪರ್ಶಿ ಮನವಿಯಾಗಿತ್ತು.

ಈ ಇಷ್ಟೂ ಹೇಳಿಕೆಯನ್ನು ಹೇಳಿ ಬರೆಸುವಷ್ಟರಲ್ಲಿ ಬಾಪು ಸಂಪೂರ್ಣ ದಣಿದುಹೋಗಿದ್ದರು. ಹಾಗಾಗಿ ತಕ್ಷಣ ಪೂರ್ತಿ ವಿಶ್ರಾಂತಿಯನ್ನು ಪಡೆಯಬೇಕು ಮತ್ತು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ, ಯಾವುದೇ ಒತ್ತಡವಿಲ್ಲದೆ ಕಳೆಯಬೇಕು ಎಂದು ವೈದ್ಯರು ಕಟ್ಟಪ್ಪಣೆ ಮಾಡಿದರು. ಆದರೆ ಕೆಲವು ದಿನಗಳು ಕಳೆಯುವ ಹೊತ್ತಿಗಾಗಲೇ ಅವರು ತಮ್ಮ ಮುಂದಿನ ಹೆಜ್ಜೆಗಳ ಬಗ್ಗೆ ಯೋಚಿಸಲು ಶುರುಮಾಡಿದ್ದರು. ತಮಗೆ ಒಂದು ವರ್ಷದ ಜೈಲು ಶಿಕ್ಷೆಯಾಗಿರುವುದನ್ನು ಗಮನಿಸಿದ ಅವರು ಆ ಅವಧಿಯಲ್ಲಿ ಹೀಗೆ ಅನಿರೀಕ್ಷಿತವಾಗಿ ಸಿಕ್ಕ ಸ್ವಾತಂತ್ರ್ಯವನ್ನು ಯಾವುದೇ ರಾಜಕೀಯ ಕೆಲಸಗಳಿಗಾಗಿ ಬಳಸಬಾರದು ಎಂಬುದು ಸರ್ಕಾರದ ಬಗ್ಗೆ ತಮಗಿರುವ ಕರ್ತವ್ಯ ಎಂದು ಅವರು ಭಾವಿಸಿದರು. ಹಾಗಾಗಿ ಇಡೀ ವರ್ಷವನ್ನು ಅಸ್ಪೃಶ್ಯತೆ ನಿವಾರಣೆಯ ತೀವ್ರ ಪ್ರಚಾರಕ್ಕಾಗಿ ವಿನಿಯೋಗಿಸಲು ನಿರ್ಧರಿಸಿದರು. ಬಹುಷಃ ವಿಧಿಯೇ ಬಾಪು ಅವರ ಸ್ವಾತಂತ್ರ್ಯ ಹೋರಾಟವನ್ನು ತಡೆದು, “ಇಲ್ಲ, ಮೊದಲು ಈ ಕೆಲಸ ಆಗಬೇಕಿದೆ,” ಎಂದು ಹೇಳುತ್ತಿರುವಂತೆ ಭಾಸವಾಯಿತು. ಅದು ಸಾಧಿಸಬೇಕಾದ ಆಂತರಿಕ ಕ್ರಾಂತಿಯಾಗಿತ್ತು ಮತ್ತು ಅದನ್ನು ಸಾಧಿಸದೇ ರಾಷ್ಟ್ರಕ್ಕೆ ಶಾಶ್ವತ ಶಕ್ತಿ ಸಿಗಲು ಸಾಧ್ಯವಿರಲಿಲ್ಲ ಕೂಡ.

ಇದನ್ನು ಓದಿದ್ದೀರಾ?: ಹೊಸ ಓದು | ‘ಇಂದಿನ ಜಗತ್ತಿಗೆ ಬೌದ್ಧಧರ್ಮ’ ಬುದ್ಧನನ್ನು ಅರಿಯಲು ಮತ್ತೊಂದು ಮಾರ್ಗ

ದೇಹದಲ್ಲಿ ಒಂದಿನಿತು ಶಕ್ತಿ ಮರುಪೂರಣ ಆಗುತ್ತಲೇ ಬಾಪು ಮತ್ತೆ ಮೈಕೊಡವಿ ನಿಂತರು. ಈ ಬಾರಿ ಅಖಿಲ ಭಾರತ ಹರಿಜನ ಪ್ರವಾಸ. ‘ಇನ್ನೂ ಸಲ್ಪ ನಿಧಾನ ಮಾಡಿ, ಇನ್ನೊಂದಷ್ಟು ದಿನ ವಿಶ್ರಾಂತಿ ಪಡೆಯಿರಿ,’ ಎಂದು ವೈದ್ಯರು ಕೈಮುಗಿದು ಬೇಡಿಕೊಂಡರು. ಆದರೆ ಕೇವಲ ಎರಡು ತಿಂಗಳಲ್ಲಿ ಅವರು ಹೊಸ ಸಾಹಸಕ್ಕೆ ಸನ್ನದ್ಧರಾದರು. ಪ್ರವಾಸದ ಯೋಜನೆಗಳು ಸಿದ್ಧಗೊಂಡವು. ನವೆಂಬರ್ ತಿಂಗಳ ಆರಂಭದಲ್ಲಿ ಬಾಪು ಪ್ರವಾಸ ಹೊರಡಲಿದ್ದಾರೆ ಎಂದು ದೇಶಾದ್ಯಂತ ಇರುವ ಕಾರ್ಯಕರ್ತರಿಗೆ ಸಂದೇಶ ಕಳುಹಿಸಲಾಯಿತು. ಅದಕ್ಕೂ ಮೊದಲು ನಾವು ಕೆಲಕಾಲ ವಾರ್ಧಾಕ್ಕೆ ತೆರಳಿದೆವು.

(ಕೃತಿ: ಮಹಾತ್ಮನ ಮಗಳು, ಲೇ: ಮಂಜುನಾಥ್ ಚಾಂದ್, ಪ್ರ: ವೀರಲೋಕ ಬುಕ್ಸ್, ಸಂಪರ್ಕ: 70221 22121, 88612 12172)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನೆಹರೂ–ಗಾಂಧಿ, ಯಾದವ್ ಕುಟುಂಬಗಳ ನಾಯಕತ್ವ ಬೇಡ’: ಒವೈಸಿ ಹೇಳಿಕೆಗೆ ವಿಪಕ್ಷಗಳ ತೀವ್ರ ಆಕ್ರೋಶ

ಮುಸ್ಲಿಂ ಯುವಕರು ನೆಹರೂ–ಗಾಂಧಿ ಮತ್ತು ಯಾದವ್ ಕುಟುಂಬಗಳ ರಾಜಕೀಯ ನಾಯಕತ್ವವನ್ನು ಅನುಸರಿಸುವುದನ್ನು...

ಬೀದರ್‌ | ಗಾಯಕ ದೇವದಾಸಗೆ ಒಲಿದ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ

ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು,...

ಬಡತನ ಮೆಟ್ಟಿ ಬಿಲ್ಲುಗಾರಿಕೆ ಒಲಿಸಿಕೊಂಡ ದೇವಮ್ಮ: ಒಲಂಪಿಕ್ಸ್‌ ಕನಸಿಗೆ ಸ್ಪೂರ್ತಿ ತುಂಬಿದ ಎಂ.ಬಿ ಪಾಟೀಲ್‌

ಬಡತನದ ನಡುವೆಯೂ ಬಿಲ್ಲುಗಾರಿಕೆಯಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಲ್ಯಾಣ ಕರ್ನಾಟಕದ ಪ್ರತಿಭೆ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ ಲಾರೆನ್ಸ್ ಬಿಷ್ಣೋಯ್‌ವರೆಗೆ!

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ...