ಬೌದ್ಧ ಧಮ್ಮವು ವಿಶ್ವಮಾನ್ಯ ಧರ್ಮವಾಗಿದ್ದು, ವೈಜ್ಞಾನಿಕ ತಳಹದಿಯ ಮೇಲೆ ಸ್ಥಾಪಿತವಾಗಿದೆ ಎಂದು ಶಾಸಕ ಹಾಗೂ ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ಆಚರಣಾ ಸಮಿತಿ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆಯ ಗುರುಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಕ್ಟೋಬರ್ 24 ಮತ್ತು 25ರಂದು ನಡೆಯಲಿರುವ ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನದಲ್ಲಿ ಕನಿಷ್ಠ ಎರಡು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಪ್ರತಿ ಹಳ್ಳಿಗೂ ದಮ್ಮ ಪಯಣ ಹಾಗೂ ಸ್ತಬ್ಧಚಿತ್ರ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ.3ರಂದು ಚಾಮರಾಜನಗರದಲ್ಲಿ ದಮ್ಮ ಪಯಣಕ್ಕೆ ಚಾಲನೆ ದೊರೆಯಲಿದ್ದು, ಒಂದು ತಿಂಗಳ ಕಾಲ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.
ನಿವೃತ್ತ ಜಂಟಿ ನಿರ್ದೇಶಕ ಮಂಜು ಕೋಡಿಉಗನೆ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಕಷ್ಟು ಶೋಷಣೆ ಹಾಗೂ ಸಂಕಷ್ಟಗಳನ್ನು ಎದುರಿಸಿ ಬೆಳೆದವರು. ಅವರು ಬೌದ್ಧ ಧಮ್ಮವನ್ನು ಸ್ವೀಕರಿಸಿದ ಬಳಿಕ ಅವರ ಅನುಯಾಯಿಗಳಾದ ನಮಗೂ ಧಮ್ಮದ ಮಾರ್ಗವನ್ನು ಅನುಸರಿಸುವ ಜವಾಬ್ದಾರಿ ಇದೆ ಎಂದರು.
ದಲಿತ ಮುಖಂಡ ವೆಂಕಟರಮಣಸ್ವಾಮಿ ಮಾತನಾಡಿ, ವಿಶ್ವ ಬೌದ್ಧ ಸಮ್ಮೇಳನ ನಡೆಯುತ್ತಿರುವುದು ಹಾಗೂ ಅದರಲ್ಲಿ ಭಾಗವಹಿಸಲು ಅವಕಾಶ ದೊರೆತಿರುವುದು ಪುಣ್ಯದ ಕಾರ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮನೋರಕ್ಖಿತ ಬಂತೇಜಿ ಅವರು ಬುದ್ಧ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಹಳೇ ಮೈಸೂರಿನ ‘ನೀರ್ ಸಾಬ್’: ನೀರಿನಿಂದ ಪಂಚಾಯತ್ ರಾಜ್ವರೆಗೆ ಜನರ ಬದುಕಿಗೆ ದಾರಿ ತೋರಿದ ಅಪರೂಪದ ನಾಯಕ
ಬೋಧಿರತ್ನ ಬಂತೇಜಿ, ಮುಳ್ಳೂರು ಶಿವಮಲ್ಲು, ಕೇಶವಮೂರ್ತಿ, ಡಾ. ನವೀನ್ ಮೌರ್ಯ, ಪುರಸಭೆ ಮಾಜಿ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಜಿ.ಪಂ. ಮಾಜಿ ಸದಸ್ಯರಾದ ಬೊಮ್ಮಯ್ಯ ಹಾಗೂ ನಾಗರಾಜು, ಶಿವಸ್ವಾಮಿ ಹೊರೆಯಾಲ, ಆರ್. ಮಹದೇವ, ಸುಭಾಷ್ ಮಾಡ್ರಳ್ಳಿ, ಆರ್. ಸೋಮಣ್ಣ, ಹುಲಸಗುಂದಿ ಮಹದೇವಯ್ಯ, ಮಲ್ಲರಾಜ್, ಕಬ್ಬಳ್ಳಿ ನಂಜುಂಡಸ್ವಾಮಿ, ಸಂಪತ್, ಡಾ. ಲಕ್ಷ್ಮಿಪ್ರೇಮಕುಮಾರ್, ಪುಟ್ಟಬಸವಯ್ಯ, ಮುತ್ತಣ್ಣ, ವಕೀಲ ಎಂ.ಎನ್. ಸಂಪತ್, ಚಿಕ್ಕನಂಜಯ್ಯ, ರಾಜೇಶ್ ಹಂಗಳ, ಎಸ್. ರಾಜೇಂದ್ರ ಸೇರಿದಂತೆ ಹಲವರು ಇದ್ದರು.





