ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಯಬೇಕಿದ್ದ ಉಚಿತ ಸಾಮೂಹಿಕ ವಿವಾಹ 2 ಬಾರಿ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿದ್ದ 7 ಜೋಡಿ ಸೋಮವಾರ ಸಾಲೂರು ಬೃಹನ್ಮಠದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಆಗಸ್ಟ್ 23 ರಂದು ಸಮೂಹಿಕ ವಿವಾಹ ನಿಗದಿಪಡಿಸಲಾಗಿತ್ತು. ಆದರೆ ಸಾಮೂಹಿಕ ವಿವಾಹವನ್ನು ಕಾರಣಾಂತರದಿಂದ 28ಕ್ಕೆ ಮುಂದೂಡಲಾಗಿತ್ತು. ಈ ವೇಳೆಗೆ ಸುಮಾರು 65 ಜೋಡಿಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ಕೆಲವರು ಲಗ್ನ ಪತ್ರಿಕೆಯನ್ನೂ ಹಂಚಿದ್ದರು. ಇನ್ನು ಲಗ್ನಪತ್ರಿಕೆ ಮಾಡಿಸದ ಕೆಲವರು ವಿವಾಹಕ್ಕೆ ಆಗಮಿಸುವಂತೆ ಸಂಬಂಧಿಕರಿಗೆ 2 ಬಾರಿ ತಿಳಿಸಿದ್ದರು. ಆದರೆ ಪ್ರಾಧಿಕಾರ ಮುಂದೂಡಲಾದ ಮದುವೆಗೆ ಮುಂದಿನ ದಿನಾಂಕವನ್ನು ನಿಗದಿಪಡಿಸಿ ಖಚಿತಪಡಿಸಿಲ್ಲ. ಇದರಿಂದ ಗೊಂದಲಕ್ಕೆ ಸಿಲುಕಿದ್ದ 7 ಜೋಡಿ ವಧು-ವರರು ದೃಢ ನಿರ್ಧಾರ ಹೊಂದಿ ಸ್ವಂತ ಖರ್ಚಿನಲ್ಲಿಯೇ ಬೆಟ್ಟದಲ್ಲಿ ವಿವಾಹವಾದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ 7 ಜೋಡಿಗಳು: ಬಹುತೇಕ ಬಡ ವರ್ಗದ ವಧು-ವರರು ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದಿಂದ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಅರ್ಜಿ ಸಲ್ಲಿಸುವುದು ವಾಡಿಕೆ. ಆದರೆ 2 ಬಾರಿ ವಿವಾಹ ಮುಂದೂಡಿಕೆಯಾಗಿದ್ದ ಹಿನ್ನೆಲೆಯಲ್ಲಿ ಚಾಮರಾಜನಗರದ ಜಗದೀಶ್- ನಂಜನಗೂಡಿನ ಕಾವ್ಯಾಶ್ರೀ, ಪಿಜಿ ಪಾಳ್ಯದ ಮಹೇಶ್ ಕುಮಾರ್ ಮೈಸೂರಿನ ಹೊರಳವಾಡಿಯ ರಮ್ಯಾ, ತಾಳವಾಡಿಯ ಉದಯಕುಮಾರ್, ಇದೇ ಗ್ರಾಮದ ಸ್ನೇಹ, ನರಸೀಪುರದ ದಿನೇಶ್ ಮೈಸೂರಿನ ನಿರ್ಮಲಾ, ನಂಜನಗೂಡು ತಾಲೂಕಿನ ಹಳೇಪುರದ ಮಹೇಂದ್ರ, ಚಾಮರಾಜನಗರ ತಾಲೂಕಿನ ಅರಳೀಪುರ ಗ್ರಾಮದ ಮಂಗಳಮ್ಮ, ಮೈಸೂರಿನ ಸಂಜಯ್ – ಸೌಭಾಗ್ಯ ಹಾಗೂ ಚಾಮರಾಜನಗರದ ರವಿ-ಸೌಮ್ಯ ಜೋಡಿ ಸಾಲೂರು ಬೃಹನ್ಮಠದಲ್ಲಿ ವಿವಾಹವಾದರು. ಅಂತೆಯೆ ಮಹದೇಶ್ವರ ಬೆಟ್ಟದ ಬೊಮ್ಮೇಶ್ವರ ದೇಗುಲದಲ್ಲಿ ಮಹದೇವಪ್ಪ-ಸವಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪ್ರಚಾರಕ್ಕಾಗಿ ಸಚಿವರನ್ನ ರೇಣುಕಾಚಾರ್ಯ ಭೇಟಿ ಮಾಡುತ್ತಿದ್ದಾರೆ: ಶಾಸಕ ಬಸವರಾಜ್ ಶಿವಗಂಗಾ
ದಿನಾಂಕ ನಿಗದಿಗೆ ಒತ್ತಾಯ: ಈಗಾಗಲೇ 2 ಬಾರಿ ವಿವಾಹ ಮಂದೂಡಿಕೆಯಾಗಿರುವುದರಿಂದ ಅರ್ಜಿ ಸಲ್ಲಿಸಿರುವ ವಧು- ವರರು ಹಾಗೂ ಕುಟುಂಬಸ್ಥರು ಪ್ರಾಧಿಕಾರದ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಸಾಮೂಹಿಕ ವಿವಾದ ಮುಂದಿನ ದಿನಾಂಕವನ್ನು ಕೂಡಲೇ ನಿಗದಿಪಡಿಸುವಂತೆ ಒತ್ತಾಯಿಸಿದ್ದಾರೆ.