ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಕೇವಲ ಪಠ್ಯಾಭ್ಯಾಸ ಮಾತ್ರ ಸಾಕಾಗುವುದಿಲ್ಲ. ದೃಢಸಂಕಲ್ಪ, ನಿರಂತರ ಪರಿಶ್ರಮ, ಸಮಯದ ಸದ್ಬಳಕೆ, ಆತ್ಮವಿಶ್ವಾಸ ಹಾಗೂ ಸೂಕ್ತ ಮಾರ್ಗದರ್ಶನವನ್ನು ಅಳವಡಿಸಿಕೊಂಡಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಶಾಸಕ ಎಚ್.ಎಂ. ಗಣೇಶಪ್ರಸಾದ್ ಹೇಳಿದರು.
ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಪಟ್ಟಣದ ಗುರುಭವನದಲ್ಲಿ ಸಂಗಮ ಪ್ರತಿಷ್ಠಾನ ಹಾಲಹಳ್ಳಿ, ಸಂಕಲ್ಪ ಶಿಕ್ಷಕರ ವೇದಿಕೆ ಗುಂಡ್ಲುಪೇಟೆ ಹಾಗೂ ಮಹಾಮನೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ, ಪಟ್ಟಣ ಪೊಲೀಸ್ ಇನ್ಸ್‌ಪೆಕ್ಟರ್ ಜಯಕುಮಾರ್ ಅವರ ಆಯೋಜನೆಯಲ್ಲಿ ನಡೆದ ‘ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಸಂವಿಧಾನದ ಚಿಂತನೆ’ ಕುರಿತ ಒಂದು ದಿನದ ಉಚಿತ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳು ಲಭ್ಯವಿದ್ದು, ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ವಿದ್ಯಾರ್ಥಿಗಳು ಆರಂಭದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಶಿಸ್ತು, ಸಮಯಪಾಲನೆ, ನಿರಂತರ ಅಧ್ಯಯನ ಹಾಗೂ ಉತ್ತಮ ಯೋಜನೆಯೊಂದಿಗೆ ಸಿದ್ಧತೆ ನಡೆಸಿದರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.
ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವುದರ ಜೊತೆಗೆ ಪರೀಕ್ಷಾ ವಿಧಾನ, ಅಧ್ಯಯನ ತಂತ್ರ, ಸಮಯ ನಿರ್ವಹಣೆ ಹಾಗೂ ಭಾರತದ ಸಂವಿಧಾನದ ಮೂಲ ಆಶಯಗಳ ಕುರಿತು ಸಮಗ್ರ ಅರಿವು ಮೂಡಿಸುತ್ತವೆ. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಸಮಯ ವ್ಯರ್ಥ ಮಾಡದೆ, ತಮ್ಮ ಗುರಿಯತ್ತ ಏಕಾಗ್ರತೆಯಿಂದ ಶ್ರಮಿಸಿದರೆ ಉತ್ತಮ ಸಾಧನೆ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಾಗಾರವು ಪಡಗೂರು ಅಡವಿ ಮಠದ ಶಿವಲಿಂಗೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ವಿವಿಧ ವಿಷಯಗಳ ತಜ್ಞರು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ, ಸಂವಿಧಾನದ ಮಹತ್ವ, ಸಾಮಾನ್ಯ ಜ್ಞಾನ, ಅಧ್ಯಯನ ವಿಧಾನ, ಸಮಯ ನಿರ್ವಹಣೆ ಹಾಗೂ ಯಶಸ್ಸಿನ ಸೂತ್ರಗಳ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಿದರು.
ಈ ವಿಶೇಷ ವೀಡಿಯೊ ನೋಡಿ: https://youtu.be/thXOVUyNnoI?si=iff1RWgTAGsLR0GU
ನೂರಾರು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಉತ್ಸಾಹದಿಂದ ಭಾಗವಹಿಸಿ ತಜ್ಞರೊಂದಿಗೆ ಸಂವಾದ ನಡೆಸಿ ತಮ್ಮ ಸಂದೇಹಗಳಿಗೆ ಪರಿಹಾರ ಕಂಡುಕೊಂಡರು. ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಗಣ್ಯರು ಇದ್ದರು.





