ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಜನರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 2019ರಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ’ಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆ ಜಾರಿಯಾಗಿ ಈಗ 7 ವರ್ಷಗಳು ಪೂರ್ಣಗೊಂಡಿವೆ. ಆದರೂ, ಸಮುದಾಯದ ಬದುಕಿನಲ್ಲಿ ನಿರೀಕ್ಷಿತ ಬದಲಾವಣೆ ಕಂಡುಬಂದಿಲ್ಲ. ಕಾನೂನಿನ ಭರವಸೆಗಳು ಕಾಗದಕ್ಕೆ ಮಾತ್ರವೇ ಸೀಮಿತವಾಗಿದ್ದು, ಗೌರವಯುತ ಉದ್ಯೋಗ, ಸಮಾನ ಅವಕಾಶ ಹಾಗೂ ಆರ್ಥಿಕ ಸಬಲೀಕರಣವು ಸಮುದಾಯದಿಂದ ದೂರ ಉಳಿದಿವೆ ಎಂದು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ISEC)ಯ ವರದಿ ವಿವರಿಸಿದೆ.
ಐಟಿ ಹಬ್ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿಯೇ ಲಿಂಗತ್ವ ಅಲ್ಪಸಂಖ್ಯಾತರು ಔಪಚಾರಿಕ ಉದ್ಯೋಗ ಪಡೆಯಲು ತೀವ್ರ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇಂದಿಗೂ ಇದೆ. ಸಮಾಜದಲ್ಲಿ ಬೇರೂರಿರುವ ಕಳಂಕ, ಪೂರ್ವಾಗ್ರಹ ಮತ್ತು ವ್ಯವಸ್ಥಿತ ಬಹಿಷ್ಕಾರದಿಂದ ಅವರನ್ನು ಉದ್ಯೋಗ ಕ್ಷೇತ್ರದಿಂದ ದೂರವಿಡಲಾಗುತ್ತಿದ್ದು, ಬದುಕಿನ ಅನಿವಾರ್ಯತೆಯಿಂದ ಅನೇಕರು ಭಿಕ್ಷಾಟನೆ ಅಥವಾ ಲೈಂಗಿಕ ವೃತ್ತಿಯಂತಹ ಅಪಾಯಕಾರಿ ಜೀವನೋಪಾಯಗಳತ್ತ ತಳ್ಳಲ್ಪಡುತ್ತಿದ್ದಾರೆ ಎಂದು ಅಧ್ಯಯನ ಆತಂಕ ವ್ಯಕ್ತಪಡಿಸಿದೆ.
ISEC ಸಂಶೋಧಕರಾದ ಸ್ವರೂಪಾ ದೇಬ್ ಹಾಗೂ ಪ್ರೊ. ಕಲಾ ಸೀತಾರಾಮ್ ಶ್ರೀಧರ್ ನೇತೃತ್ವದಲ್ಲಿ ನಡೆದ ಈ ಅಧ್ಯಯನವು ವಿವಿಧ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯ 120 ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳೊಂದಿಗೆ ಸಂದರ್ಶನಗಳನ್ನು ನಡೆಸಿದೆ. ಜೊತೆಗೆ, ನೇರ ಕ್ಷೇತ್ರ ಅಧ್ಯಯನವನ್ನು ಆಧರಿಸಿದೆ. ಅಧ್ಯಯನದಲ್ಲಿ ಭಾಗವಹಿಸಿದ ಬಹುತೇಕರು ತಮ್ಮ ಲಿಂಗ ಗುರುತಿನ ಕಾರಣದಿಂದಲೇ ನಿರಂತರ ತಾರತಮ್ಯ ಮತ್ತು ಅಗೌರವಕ್ಕೆ ಒಳಗಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಕಾಯ್ದೆಯು ಉದ್ಯೋಗ, ಶಿಕ್ಷಣ ಮತ್ತು ಸಾರ್ವಜನಿಕ ಜೀವನದಲ್ಲಿ ಲಿಂಗಾಧಾರಿತ ತಾರತಮ್ಯವನ್ನು ಸ್ಪಷ್ಟವಾಗಿ ನಿಷೇಧಿಸಿದ್ದರೂ, ಅದರ ಪರಿಣಾಮಕಾರಿ ಅನುಷ್ಠಾನದಲ್ಲಿ ಗಂಭೀರ ಕೊರತೆ ಕಂಡುಬಂದಿದೆ ಎಂದು ಅಧ್ಯಯನ ಉಲ್ಲೇಖಿಸಿದೆ. ಉನ್ನತ ಶಿಕ್ಷಣ ಮತ್ತು ಅರ್ಹತೆ ಹೊಂದಿರುವ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೂ ಉದ್ಯೋಗ ನೇಮಕಾತಿ, ಸಮಾನ ವೇತನ ಹಾಗೂ ಸುರಕ್ಷಿತ ಕೆಲಸದ ವಾತಾವರಣ ದೊರೆಯುತ್ತಿಲ್ಲ. ಕಾರ್ಪೊರೇಟ್ ಸಂಸ್ಥೆಗಳು ‘ಡೈವರ್ಸಿಟಿ, ಈಕ್ವಿಟಿ ಅಂಡ್ ಇನ್‌ಕ್ಲೂಷನ್ (DEI)’ ನೀತಿಗಳ ಕುರಿತು ಪ್ರಚಾರ ನಡೆಸುತ್ತಿದ್ದರೂ, ವಾಸ್ತವದಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ನಾಯಕತ್ವದ ಸ್ಥಾನಗಳು ಮತ್ತು ನಿರ್ಧಾರ ಕೈಗೊಳ್ಳುವ ಅವಕಾಶಗಳು ಅತ್ಯಂತ ಸೀಮಿತವಾಗಿವೆ ಎಂದು ವರದಿ ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಶೋಧಕಿ ಸ್ವರೂಪಾ ದೇಬ್, “ಸೇರ್ಪಡೆಯ ಬಗ್ಗೆ ಕಂಪನಿಗಳು ಮಾತನಾಡುತ್ತವೆ. ಆದರೆ ನಾಯಕತ್ವದ ಅವಕಾಶಗಳು ಮತ್ತು ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಸಮಾನ ಸ್ಥಾನಮಾನ ನೀಡಲು ಹಿಂದೇಟು ಹಾಕುತ್ತವೆ” ಎಂದು ಹೇಳಿದ್ದಾರೆ.
“ಐಟಿ ಸೇರಿದಂತೆ ಹಲವು ಉದ್ಯೋಗ ಕ್ಷೇತ್ರಗಳಲ್ಲಿ ಇನ್ನೂ ಸಮುದಾಯದವರನ್ನು ಒಳಗೊಳ್ಳುವ ಮನೋಭಾವ ಬೆಳೆಯದಿರುವುದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಕೆಲಸ ದೊರೆತರೂ ಸಹೋದ್ಯೋಗಿಗಳ ಅಪಹಾಸ್ಯ, ಪೂರ್ವಾಗ್ರಹ ಮತ್ತು ಕೀಳು ನೋಟದಿಂದಾಗಿ ಅನೇಕರು ಉದ್ಯೋಗ ತೊರೆಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ” ಎಂದು ವರದಿ ಉಲ್ಲೇಖಿಸಿದೆ.
“ಲಿಂಗ ಗುರುತಿನ ಜೊತೆಗೆ ಜಾತಿ, ವರ್ಗ ಮತ್ತು ಧರ್ಮದಂತಹ ಸಾಮಾಜಿಕ ಅಂಶಗಳೂ ಟ್ರಾನ್ಸ್‌ಜೆಂಡರ್ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಹೊರಗಿಡುವಿಕೆಯನ್ನು ಮತ್ತಷ್ಟು ಗಾಢಗೊಳಿಸುತ್ತಿವೆ. ಲಿಂಗ ಪರಿವರ್ತನೆಗೆ ಸಂಬಂಧಿಸಿದ ರಚನಾತ್ಮಕ ಸವಾಲುಗಳು, ಸಾಮಾಜಿಕ ಭಯ ಹಾಗೂ ಭದ್ರತೆಯ ಕೊರತೆಯೂ ಅವರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ” ಎಂದು ಅಧ್ಯಯನ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದಲ್ಲಿರುವ ಜನಸಂಖ್ಯೆಯ ಸಮಗ್ರ ಮ್ಯಾಪಿಂಗ್ ನಡೆಸಿ, ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಸಾಮಾಜಿಕ ಸ್ಥಿತಿಗತಿಗಳ ಕುರಿತು ನಿಖರ ಮಾಹಿತಿಯನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ಅಧ್ಯಯನ ಶಿಫಾರಸು ಮಾಡಿದೆ. ವಿಶ್ವಾಸಾರ್ಹ ಅಂಕಿ-ಅಂಶಗಳ ಆಧಾರದಲ್ಲೇ ಪರಿಣಾಮಕಾರಿ ನೀತಿಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಜೊತೆಗೆ ಖಾಸಗಿ ಹಾಗೂ ಸರ್ಕಾರಿ ವಲಯಗಳಲ್ಲಿ ಕೇವಲ ಘೋಷಣೆಗಳಿಗೆ ಸೀಮಿತವಾಗದ, ನೈಜ ಒಳಗೊಳ್ಳುವಿಕೆ ಮತ್ತು ಉದ್ಯೋಗಾವಕಾಶಗಳನ್ನು ಖಾತರಿಪಡಿಸುವ ಕಡ್ಡಾಯ ವ್ಯವಸ್ಥೆಗಳನ್ನು ರೂಪಿಸುವ ಅಗತ್ಯವಿದೆ ಎಂದು ವರದಿ ಒತ್ತಿ ಹೇಳಿದೆ.



