ದಲಿತ ಚಳುವಳಿಯ ನಾಯಕ ಅಯ್ಯನ್ ಕಾಳಿ ಅವರ 160ನೇ ಜನ್ಕ ದಿನಾಚರಣೆಯನ್ನು ಗುಂಡ್ಲುಪೇಟೆಯಲ್ಲಿ ದಲಿತ ಸಾಹಿತ್ಯ ಪರಿಷತ್ತು ಆಚರಿಸಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಷತ್‌ನ ತಾಲೂಕು ಅಧ್ಯಕ್ಷ ಯೋಗೇಶ ಕೆ, “1863 ಆಗಸ್ಟ್ 28 ರಂದು ಕೇರಳದ ತಿರುವನಂತಪುರಂ ಜಿಲ್ಲೆಯ ವೆಂಗನೂರು ಗ್ರಾಮದಲ್ಲಿ ಅಯ್ಯನ್ ಮತ್ತು ಮಾಲ ದಂಪತಿಗಳ 8 ಜನ ಮಕ್ಕಳಲ್ಲಿ ಮೊದಲನೆ ಮಗನಾಗಿ ಅಯ್ಯನ್ ಕಾಳಿ ಅವರು ಜನಿಸಿದರು. ಅವರು ಬಾಲ್ಯದಲ್ಲಿಯೇ ಜಾತಿ ತಾರತಮ್ಯದ ನೋವನ್ನು ಅನುಭವಿಸಿದ ಕಾರಣದಿಂದ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲ ಮಾಡಬೇಕೆಂದು ಪಣತೊಟ್ಟಿದ್ದರು. ಅದಕ್ಕಾಗಿ ಜಾತಿ ನಿರ್ಮೂಲನೆ ಚಳುವಳಿಯನ್ನು ಆರಂಭಿಸಿದ್ದರು” ಎಂದು ತಿಳಿಸಿದರು.
“ಭಾರತದ ದಲಿತ ಚಳುವಳಿಗೆ ಸುದೀರ್ಘ ಹೋರಾಟದ ಇತಿಹಾಸ ಇದೆ. ಇಂತಹ ಚಳುವಳಿಯಲ್ಲಿ ತೊಡಗಿಸಿಕೊಂಡ ಮೊದಲಿಗರಲ್ಲಿ ಮಹಾರಾಷ್ಟ್ರದ ಕೊರೇಗಾಂವ್ ವಿಜಯೋತ್ಸವದ ರುವಾರಿ ಶಿದನಾಕ ಹಾಗೂ ಕೇರಳದ ಅಯ್ಯನ್ ಕಾಳಿ ಪ್ರಮುಖರು. ಅಯ್ಯನ್ ಕಾಳಿ ರವರು ತಾವು ಅಕ್ಷರಾಭ್ಯಾಸ ಮಾಡದಿದ್ದರೂ ನನ್ನ ಸಮುದಾಯದ ಜನರು ವಿದ್ಯೆಯಿಂದ ವಂಚಿತವಾಗಬಾರದೆಂಬ ಸದುದ್ದೇಶದಿಂದ ಅಸ್ಪೃಶ್ಯರಿಗಾಗಿ ಶಾಲೆಗಳನ್ನು ತೆರೆಯಲು ಆಲೋಚಿಸಿದ್ದರು. 1904 ರಲ್ಲಿ ‘ಪುಲಯ’ ಎಂಬ ಶಾಲೆಯನ್ನು ತೆರೆದರು” ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ದಲಿತ ಪರ ಹೋರಾಟಗಾರ ಕಂದೇಗಾಲ ಶಿವಣ್ಣ ,ದಸಾಪ ಅಧ್ಯಕ್ಷರಾದ ಯೋಗೇಶ ಕೆ, ಖಜಾಂಚಿ ಕಾಳಸ್ವಾಮಿ,ಚಿಜಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಪ್ರಾಂಶುಪಾಲರಾದ ಮಹದೇವ್ ಚಿಜಲ, ದಸಾಪ ನಿರ್ದೇಶಕರಾದ ತೊಂಡವಾಡಿ ಶಿವಣ್ಣ ಉಪಸ್ಥಿತರಿದ್ದರು.