ಜಗತ್ತಿಗೆ ಶಾಂತಿ, ಕರುಣೆ, ಮೈತ್ರಿ ಮತ್ತು ಸಮಾನತೆಯ ಸಂದೇಶವನ್ನು ಸಾರಿದ ಬೌದ್ಧ ಧಮ್ಮವು ಇಂದಿನ ಯುದ್ಧ, ದ್ವೇಷ ಮತ್ತು ಅಸಮಾನತೆಗಳಿಂದ ಕೂಡಿದ ಸಮಾಜಕ್ಕೆ ಅತ್ಯಗತ್ಯವಾಗಿದೆ. ಆಯುಧಗಳ ಬದಲಿಗೆ ಆದರ್ಶಗಳು ಮಾತನಾಡಬೇಕು. ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕುವೆಂಪು ಅವರ ವಿಚಾರಧಾರೆಗಳ ಮೂಲಕ ಪ್ರಬುದ್ಧ ಭಾರತವನ್ನು ನಿರ್ಮಿಸುವತ್ತ ಹೆಜ್ಜೆ ಇಡಬೇಕು ಎಂಬ ಆಶಯ ಚಾಮರಾಜನಗರದಲ್ಲಿ ನಡೆದ ಎರಡನೇ ಬೌದ್ಧ ಸಮ್ಮೇಳನದಲ್ಲಿ ವ್ಯಕ್ತವಾಯಿತು.
ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧಮ್ಮವನ್ನು ಸ್ವೀಕರಿಸಿ 70 ವರ್ಷಗಳಿಗೂ ಹೆಚ್ಚು ಕಾಲ ಕಳೆದಿರುವ ಈ ಸಂದರ್ಭದಲ್ಲಿ, ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ಸಾಕಾರಗೊಳಿಸುವುದು ಹಾಗೂ ಬೌದ್ಧ ಧಮ್ಮದ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಅಗತ್ಯವನ್ನು ಸಮ್ಮೇಳನದಲ್ಲಿ ಪ್ರತಿಪಾದಿಸಲಾಯಿತು. ಬುದ್ಧರ ಧಮ್ಮಯಾನದಲ್ಲಿ ಜಾತಿ, ವರ್ಗ ಮತ್ತು ಸಾಮಾಜಿಕ ಸ್ಥಾನಮಾನಗಳಿಗೆ ಮನ್ನಣೆ ಇರಲಿಲ್ಲ. ಕರುಣೆ ಮತ್ತು ಮೈತ್ರಿಯೇ ಪ್ರಧಾನವಾಗಿದ್ದವು. ಮನುಷ್ಯನನ್ನು ಆತನ ಜನ್ಮದ ಆಧಾರದಲ್ಲಿ ಅಳೆಯದೆ, ಆತನ ಗುಣ, ನಡತೆ ಮತ್ತು ಜ್ಞಾನದ ಆಧಾರದಲ್ಲಿ ಗೌರವಿಸಬೇಕು ಎಂಬ ಸಂದೇಶವನ್ನು ಬುದ್ಧರು ಸಾರಿದ್ದರು ಎಂದು ತಿಳಿಸಲಾಯಿತು.
ಜ್ಞಾನ ಪ್ರಕಾಶ ಸ್ವಾಮೀಜಿ: ಪ್ರಬುದ್ಧ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು
ಭೀಮ ಸಂದೇಶ ನೀಡಿದ ಜ್ಞಾನ ಪ್ರಕಾಶ ಸ್ವಾಮೀಜಿ, ಪ್ರಬುದ್ಧ ಭಾರತದ ನಿರ್ಮಾಣದ ಆಶಯದೊಂದಿಗೆ ಜನರು ಜ್ಞಾನ ಮತ್ತು ಪರಿಶುದ್ಧತೆಯ ಮಾರ್ಗದಲ್ಲಿ ಸಾಗಬೇಕು ಎಂದು ಕರೆ ನೀಡಿದರು. ಒಳ್ಳೆಯದನ್ನು ಬೆಂಬಲಿಸಿ, ಕೆಟ್ಟದ್ದನ್ನು ತ್ಯಜಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮನುಷ್ಯನಿಗೆ ಸ್ವಾಭಿಮಾನ, ಸಮಾನತೆ ಮತ್ತು ಹಕ್ಕುಗಳ ಅರಿವು ಮೂಡಿಸುವ ಮೂಲಕ ಮಾನವ ಘನತೆಗೆ ಮಹತ್ವ ನೀಡಿದವರು ಬಾಬಾಸಾಹೇಬ್ ಅಂಬೇಡ್ಕರ್. ಅವರ ವಿಚಾರಧಾರೆಯನ್ನು ಜನಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರಬುದ್ಧ ಪ್ರಜ್ಞೆಯತ್ತ ಸಾಗಬೇಕು ಎಂದು ಹೇಳಿದರು.

ಬೌದ್ಧ ಧಮ್ಮವನ್ನು ಸ್ವೀಕರಿಸುವವರ ಸಾಮಾಜಿಕ ಮತ್ತು ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ನವಬೌದ್ಧರನ್ನು ಸೇರ್ಪಡೆಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಬೌದ್ಧ ಅಭಿವೃದ್ಧಿ ನಿಗಮವನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ನಾಡಗೀತೆಯಲ್ಲಿ ಬೌದ್ಧ ಧಮ್ಮದ ಪರಂಪರೆಗೆ ಸೂಕ್ತ ಸ್ಥಾನ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬೌದ್ಧ ಧಮ್ಮದ ಅಧ್ಯಯನ ಮತ್ತು ಸಂಶೋಧನೆಗೆ ಅನುಕೂಲವಾಗುವಂತೆ ಬೌದ್ಧ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಂಥಾಲಯ ಸ್ಥಾಪಿಸಬೇಕು. ಬುದ್ಧಗಯಾದಲ್ಲಿನ ಬೌದ್ಧ ಧಾರ್ಮಿಕ ಸ್ಥಳಗಳ ನಿರ್ವಹಣೆ ಮತ್ತು ಸೌಲಭ್ಯಗಳ ವಿಚಾರದಲ್ಲಿ ಬೌದ್ಧ ಅನುಯಾಯಿಗಳಿಗೆ ಸೂಕ್ತ ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಹೇಳಿದರು.
ದೇಶದಲ್ಲಿ ಆಯುಧಗಳಿಗಿಂತ ಆದರ್ಶಗಳು ಮಾತನಾಡುವ ವಾತಾವರಣ ನಿರ್ಮಾಣವಾಗಬೇಕು. ಬುದ್ಧ, ಬಸವಣ್ಣ, ಅಂಬೇಡ್ಕರ್ ಮತ್ತು ಕುವೆಂಪು ಅವರ ಮಾನವೀಯ ಮೌಲ್ಯಗಳು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿ, ಚಾಮರಾಜನಗರದಲ್ಲಿ ನಿರ್ಮಾಣ ಹಂತದಲ್ಲಿರುವ ನಳಂದ ಬೌದ್ಧ ವಿಹಾರಕ್ಕೆ ಸಂಬಂಧಿಸಿದಂತೆ, ಯೋಜನೆಗೆ ಮಂಜೂರಾಗಿರುವ ಅನುದಾನದಲ್ಲಿ ಬಾಕಿ ಇರುವ ₹5 ಕೋಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಯೋಜನೆ ಮಾಜಿ ಸಚಿವ ದಿವಂಗತ ಶ್ರೀನಿವಾಸ್ ಪ್ರಸಾದ್ ಅವರ ಕನಸಿನ ಭಾಗವಾಗಿದ್ದು, ಅದರ ಪೂರ್ಣಗೊಳಿಸುವಿಕೆಗೆ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಜಗತ್ತು ಒಪ್ಪುವ ಧರ್ಮ ಬೌದ್ಧ ಧಮ್ಮ: ಕೆ.ಎಚ್. ಮುನಿಯಪ್ಪ

ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಜಗತ್ತು ಒಪ್ಪುವಂತಹ ಧರ್ಮವೆಂದರೆ ಅದು ಬೌದ್ಧ ಧಮ್ಮ ಎಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸಲು ಡಾ. ಬಿ.ಆರ್. ಅಂಬೇಡ್ಕರ್ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಬ್ರಾತೃತ್ವ, ಪ್ರೀತಿ, ಸ್ನೇಹ ಮತ್ತು ಮಾನವೀಯತೆಯನ್ನು ಸಾರುವ ಬೌದ್ಧ ಧಮ್ಮದ ಸಂದೇಶ ಇಡೀ ಜಗತ್ತಿಗೆ ಅಗತ್ಯವಾಗಿದೆ. ಯುದ್ಧದ ಮಾರ್ಗವನ್ನು ತ್ಯಜಿಸಿ ಶಾಂತಿಯ ಹಾದಿಯಲ್ಲಿ ಸಾಗುವ ಮೂಲಕ ವಿಶ್ವದಲ್ಲಿ ನೆಮ್ಮದಿ ನೆಲೆಸುವಂತಾಗಬೇಕು. ಬೌದ್ಧ ಧಮ್ಮದ ಸಾರ್ವತ್ರಿಕ ಮೌಲ್ಯಗಳು ಎಲ್ಲೆಡೆ ಹರಡಬೇಕು. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಹಿಂದುಳಿದಿರುವ ಕಾಮಗಾರಿಗಳಿಗೆ ಚಾಲನೆ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗುವುದು. ಬೌದ್ಧ ಅಭಿವೃದ್ಧಿ ನಿಗಮದ ಅನುಷ್ಠಾನಕ್ಕೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಾಬಾಸಾಹೇಬರ ಕಡೆಗೆ, ಬುದ್ಧರ ಕಡೆಗೆ ನಮ್ಮ ನಡೆ: ಸಚಿವ ನರೇಂದ್ರ ಸ್ವಾಮಿ
ಕೃಷಿ ಸಚಿವ ನರೇಂದ್ರ ಸ್ವಾಮಿ ಮಾತನಾಡಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯ ಹೊಂದಿರುವ ಚಾಮರಾಜನಗರ ಜಿಲ್ಲೆಗೆ ಬೌದ್ಧ ಧಮ್ಮದೊಂದಿಗೆ ಐತಿಹಾಸಿಕ ಸಂಬಂಧವಿದೆ ಎಂದು ಹೇಳಿದರು. ಬೌದ್ಧ ಧಮ್ಮವು ಸಮಾನತೆ, ಜ್ಞಾನ ಮತ್ತು ಮಾನವೀಯತೆಯ ತತ್ವಗಳನ್ನು ಬಿತ್ತಿದ ಮಾರ್ಗವಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಡುಬಡತನದ ನಡುವೆಯೂ ಶಿಕ್ಷಣ ಪಡೆದು, ದೇಶಕ್ಕೆ ಸಂವಿಧಾನವನ್ನು ನೀಡುವ ಮೂಲಕ ವಿಶ್ವಜ್ಞಾನಿಯಾಗಿ ಹೊರಹೊಮ್ಮಿದರು. ಅವರ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ ಎಂದರು.
ಬಾಬಾಸಾಹೇಬರು ಒಪ್ಪಿಕೊಂಡ ಬೌದ್ಧ ಧಮ್ಮದ ತತ್ವಗಳನ್ನು ಅರ್ಥಮಾಡಿಕೊಂಡು, ಅವರ ಆಶಯದಂತೆ ಸಮಾಜವನ್ನು ರೂಪಿಸುವ ಅಗತ್ಯವಿದೆ. ಧಮ್ಮವನ್ನು ಸ್ವೀಕರಿಸುವ ವಿಚಾರದಲ್ಲಿ ಜನರು ಅನಗತ್ಯ ಸಂಕೋಚಕ್ಕೆ ಒಳಗಾಗದೆ, ಅದರ ತತ್ವಗಳನ್ನು ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು. ಬೌದ್ಧ ಧಮ್ಮವನ್ನು ಸ್ವೀಕರಿಸುವುದರಿಂದ ಲಭ್ಯವಿರುವ ಸವಲತ್ತುಗಳು ಕೈತಪ್ಪುತ್ತವೆ ಎಂಬ ಆತಂಕ ಬೇಡ. ನವಬೌದ್ಧರ ಹಕ್ಕುಗಳು ಮತ್ತು ಸೌಲಭ್ಯಗಳ ಕುರಿತು ಜನರಲ್ಲಿ ಇರುವ ಗೊಂದಲಗಳಿಗೆ ಸ್ಪಷ್ಟತೆ ದೊರೆಯುವಂತೆ ಸರ್ಕಾರ ಗಮನಹರಿಸಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದರು. ‘ಬಾಬಾಸಾಹೇಬರ ಕಡೆಗೆ, ಬುದ್ಧರ ಕಡೆಗೆ ನಮ್ಮ ನಡೆ’ ಎಂಬ ಸಂದೇಶದೊಂದಿಗೆ ಸಮಾನತೆ ಮತ್ತು ಸ್ವಾಭಿಮಾನದ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.
ಬುದ್ಧ ಬೇಕು, ಯುದ್ಧ ಬೇಡ: ಶಾಸಕ ಎ.ಆರ್. ಕೃಷ್ಣಮೂರ್ತಿ

ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಬುದ್ಧರ ಶಾಂತಿ ಮತ್ತು ಪ್ರೀತಿಯ ಸಂದೇಶ ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ. ಬುದ್ಧ ಬೇಕು, ಯುದ್ಧ ಬೇಡ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲು ಸಾಧ್ಯ ಎಂದರು. ಪ್ರೀತಿ ಮತ್ತು ಮಾನವೀಯತೆಯ ಮೂಲಕ ಎಲ್ಲವನ್ನೂ ಸಾಧಿಸಬಹುದು. ದ್ವೇಷ ಮತ್ತು ಸಂಘರ್ಷಗಳಿಂದ ಸಮಾಜವನ್ನು ಗೆಲ್ಲಲು ಸಾಧ್ಯವಿಲ್ಲ. ಪರಸ್ಪರ ಗೌರವ ಮತ್ತು ಸಹಬಾಳ್ವೆಯೇ ಪ್ರಗತಿಯ ಮೂಲ ಎಂದು ಹೇಳಿದರು.
ಪ್ರಸ್ತುತ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಕೆರೆಕಟ್ಟೆಗಳು ತುಂಬಿವೆ. ಚಿಕ್ಕಹೊಳೆ ಜಲಾಶಯವೂ ಭರ್ತಿಯಾಗಿದೆ. ಈ ಭಾಗದ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಬೌದ್ಧ ಧಮ್ಮವನ್ನು ಸ್ವೀಕರಿಸಿರುವ ನವಬೌದ್ಧರನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ 102ನೇ ಕ್ರಮಸಂಖ್ಯೆಯಡಿ ಸೇರ್ಪಡೆಗೊಳಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ನ್ಯಾಯದ ಆಶಯ ಸಾಕಾರಗೊಳಿಸಲು ಆಗ್ರಹ
ಸಮ್ಮೇಳನದಲ್ಲಿ ಬೌದ್ಧ ಧಮ್ಮದ ತತ್ವಗಳ ಪ್ರಚಾರದ ಜೊತೆಗೆ, ನವಬೌದ್ಧರ ಹಕ್ಕುಗಳು, ಬೌದ್ಧ ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ಪ್ರಶ್ನೆಗಳು ಪ್ರಮುಖವಾಗಿ ಚರ್ಚೆಗೆ ಬಂದವು. ಬೌದ್ಧ ಅಭಿವೃದ್ಧಿ ನಿಗಮದ ತ್ವರಿತ ಅನುಷ್ಠಾನ, ಬೌದ್ಧ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ, ಗ್ರಂಥಾಲಯ ನಿರ್ಮಾಣ, ನಳಂದ ಬೌದ್ಧ ವಿಹಾರದ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಬಿಡುಗಡೆ, ನಾಡಗೀತೆಯಲ್ಲಿ ಬೌದ್ಧ ಪರಂಪರೆಗೆ ಸೂಕ್ತ ಸ್ಥಾನ ಮತ್ತು ನವಬೌದ್ಧರನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸುವ ಬೇಡಿಕೆಗಳು ಸರ್ಕಾರದ ಗಮನ ಸೆಳೆಯುವಂತೆ ಪ್ರತಿಪಾದಿಸಲಾಯಿತು.

ಬೌದ್ಧ ಧಮ್ಮದ ಆಶಯ ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಶಿಕ್ಷಣ, ಸಾಮಾಜಿಕ ಸಮಾನತೆ, ಸ್ವಾಭಿಮಾನ ಮತ್ತು ಮಾನವ ಘನತೆಯ ಮೂಲಕ ಜನರ ಬದುಕಿನಲ್ಲಿ ಪ್ರತಿಫಲಿಸಬೇಕು ಎಂಬ ಸಂದೇಶ ಸಮ್ಮೇಳನದಲ್ಲಿ ಮೊಳಗಿತು. ಜಾತಿ ಮತ್ತು ಅಸಮಾನತೆಗಳಿಂದ ಮುಕ್ತವಾದ ಸಮಾಜ ನಿರ್ಮಾಣ, ಯುದ್ಧದ ಬದಲಿಗೆ ಶಾಂತಿ, ದ್ವೇಷದ ಬದಲಿಗೆ ಮೈತ್ರಿ ಹಾಗೂ ಅಜ್ಞಾನದ ಬದಲಿಗೆ ಜ್ಞಾನವನ್ನು ಪ್ರತಿಪಾದಿಸುವ ಬೌದ್ಧ ಧಮ್ಮದ ಮಾರ್ಗದಲ್ಲಿ ಸಾಗುವ ಮೂಲಕವೇ ಪ್ರಬುದ್ಧ ಭಾರತದ ಕನಸನ್ನು ನನಸಾಗಿಸಲು ಸಾಧ್ಯ ಎಂಬ ಆಶಯದೊಂದಿಗೆ ಸಮ್ಮೇಳನದ ಸಂದೇಶ ಮುನ್ನೆಲೆಗೆ ಬಂದಿತು.
ಈ ವಿಶೇಷ ವರದಿ ಓದಿದ್ದೀರಾ? ‘ಟಿಪ್ಪು ನಿಜ ಕನಸು’ಗಳಿಂದ ‘ಗಾಂಧೀ ಹತ್ಯೆಯ ಸತ್ಯ’ದವರೆಗೆ: ಇತಿಹಾಸ ತಿರುಚುವಿಕೆಯ ಸುತ್ತ ಮತ್ತೆ ವಿವಾದ
ಸಮ್ಮೇಳನದಲ್ಲಿ ಸಚಿವ ಸಿ. ಪುಟ್ಟರಂಗಶೆಟ್ಟಿ, ಶಾಸಕರಾದ ದರ್ಶನ್ ದೃವನಾರಾಯಣ, ಗಣೇಶ್ ಪ್ರಸಾದ್, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ವಾಣಿ ಶಿವರಾಂ, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ನಂಜುಂಡಸ್ವಾಮಿ, ಅಂಬೇಡ್ಕರ್ ನಿಗಮದ ಅಧ್ಯಕ್ಷ ನರೇಂದ್ರ ಸೇರಿದಂತೆ ಹಲವರು ಇದ್ದರು.





