ಟ್ರ್ಯಾಕ್ಟರ್ ನೋಂದಣಿಗೆ ರೈತ ದೃಢೀಕರಣ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಹಣವನ್ನು ಪಡೆಯುವಾಗ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಉಪತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಚನ್ನಗಿರಿ ತಾಲೂಕಿನ ದೇವರಹಳ್ಳಿ ನಾಡ ಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸುಧಾ ಮೂಡಲಗಿರಿಯಪ್ಪ, ಲೋಕಾಯುಕ್ತ ದಾಳಿಯ ವೇಳೆ ಲಂಚ ಹಣದ ಜೊತೆಗೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಟ್ರ್ಯಾಕ್ಟರ್ ಖರೀದಿ ನಂತರ ಸಾರಿಗೆ ಇಲಾಖೆ ನೋಂದಣಿಗೆ ತೆರಿಗೆ ವಿನಾಯಿತಿ ಪಡೆಯಲು ರೈತರು ದೃಢೀಕರಣ ಪತ್ರ ಸಲ್ಲಿಸಬೇಕು. ದೃಢೀಕರಣ (ಬೋನಾಫೈಡ್) ಪತ್ರ ನೀಡುವಂತೆ ಚನ್ನಗಿರಿ ತಾಲೂಕಿನ ಹಿರೇಗಂಗೂರು ಗ್ರಾಮದ ರೈತ ಎಸ್. ಆರ್. ಕುಮಾರ್ ಅವರು ಅರ್ಜಿ ಸಲ್ಲಿಸಿದ್ದರು. ಅದನ್ನು ನಾಡ ಕಚೇರಿಯಿಂದ ತಿರಸ್ಕರಿಸಿದ್ದರು. ನಂತರ ಅರ್ಜಿ ಬಗ್ಗೆ ವಿಚಾರಿಸಿದಾಗ ದೃಢೀಕರಣ ಪತ್ರ ನೀಡಲು 2 ಸಾವಿರ ರೂಪಾಯಿ ಕೇಳಿದ್ದರು. ಸುಧಾ ಅವರು ₹1500 ರೂಪಾಯಿ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಟ್ರ್ಯಾಕ್ಟರ್ ಖರೀದಿಗೆ ಬೇಕಾಗಿದ್ದ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದ ರೈತ ಕುಮಾರ್ ಗೆ ದೃಡೀಕರಣ ಪತ್ರ ಹಸ್ತಾಂತರಕ್ಕೆ ಉಪ ತಹಶೀಲ್ದಾರವರು ಹಣ ಕೇಳಿದ್ದಾರೆ ಎಂದು ಕುಮಾರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಅಧಿಕಾರಿಗೆ ಮುಂಗಡವಾಗಿ 500 ರೂಪಾಯಿ ಕೊಟ್ಟಿದ್ದ ಅವರು, 1500 ರೂಪಾಯಿ ಹಣ ನೀಡಲು ಇಷ್ಟವಿಲ್ಲದೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಲೋಕಾಯುಕ್ತ ಪೊಲೀಸರು ಕಲಂ: 7(3) ಪಿಸಿ ಆಕ್ಟ್-1988 (ತಿದ್ದುಪಡಿ ಕಾಯ್ದೆ-2018) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿ ಉಪತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಅವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಹಜ್ಜ್ ಯಾತ್ರಿಕರ ಅನುಕೂಲಕ್ಕಾಗಿ ಜಿಲ್ಲಾ ಮಾಹಿತಿ ಕೇಂದ್ರ ಆರಂಭ
ದಾವಣಗೆರೆ ಲೋಕಾಯುಕ್ತ ಎಸ್‌ಪಿ ಎಂ.ಎಸ್.ಕೌಲಾಪೂರೆ, ಪೊಲೀಸ್ ಉಪಾಧೀಕ್ಷಕಿ ಕಲಾವತಿಯವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕರಾದ ಮಧುಸೂದನ್ ಸಿ, ಪ್ರಭು ಬಸೂರು ಮತ್ತು ಶ್ರೀಮತಿ ಸರಳ.ಪಿ ಹಾಗೂ ಸಿಹೆಚ್‌ಸಿ ಸಿಬ್ಬಂದಿಗಳಾದ ಆಂಜನೇಯ, ವೀರೇಶಯ್ಯ, ಸುಂದರೇಶ್, ಶ್ರೀಮತಿ ಆಶಾ, ಸಿಪಿಸಿಗಳಾದ ಮಲ್ಲಿಕಾರ್ಜುನ, ಎನ್.ಬಿ. ಅಂಗೇಶ, ಎಸ್.ಎನ್. ಧನರಾಜ್, ಗಿರೀಶ ಎಸ್.ಹೆಚ್, ಹಾಗೂ ಚಾಲಕರಾದ ಬಸವರಾಜ್, ಕೃಷ್ಣ, ವಿನಾಯಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
