ರಾಮನಗರ ಜಿಲ್ಲೆಯ ಚನ್ನಪಟ್ಟಣ ಉಪಚುನಾವಣೆಗೆ ನವೆಂಬರ್ 13ರಂದು ಮತದಾನ ನಡೆಯಲಿದೆ. ಇದರ ಹಿನ್ನೆಲೆಯಲ್ಲಿ ನ.11ರ ಸಂಜೆ 5.30 ರಿಂದ ನ.20ರ ಸಂಜೆ 6.30ರವರೆಗೆ ಬಹಿರಂಗ ಪ್ರಚಾರ, ಚರ್ಚೆ, ಸಂವಾದ, ಸಮೀಕ್ಷೆ ಮತ್ತು ಚುನಾವಣೆ ಸಂಬಂಧಿತ ಇತರ ಕಾರ್ಯಕ್ರಮಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ರಾಮನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ನೀಡಿದ ಮಾಹಿತಿಯ ಪ್ರಕಾರ, “ಚುನಾವಣೆಯ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಮಾಧ್ಯಮ, ಟಿವಿ, ಕೇಬಲ್, ರೇಡಿಯೋ, ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಚುನಾವಣೆ ಸಂಬಂಧಿತ ಚರ್ಚೆ, ವಿಶ್ಲೇಷಣೆ, ಮತ್ತು ಚುನಾವಣೋತ್ತರ ಸಮೀಕ್ಷೆ ಪ್ರಸಾರ ಮತ್ತು ಬಿತ್ತರವನ್ನೂ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸುವವರು ಪ್ರಜಾ ಪ್ರತಿನಿಧಿ ಕಾಯ್ದೆ-1951ರ ಕಲಂ 126ರ ಅನ್ವಯ 2 ವರ್ಷಗಳ ಶಿಕ್ಷೆ ಇಲ್ಲವೇ ದಂಡ, ಇಲ್ಲವೇ ಎರಡನ್ನೂ ಎದುರಿಸಬೇಕಾಗುತ್ತದೆ.
ಮತದಾನ ಪೂರ್ವ 48 ಗಂಟೆಗಳ ಅವಧಿಯಲ್ಲಿ ಮತ್ತು ಮತದಾನದ ದಿನದಂದು, ಯಾವುದೇ ಮಾಧ್ಯಮಗಳು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವಂತಹ, ಮತದಾರರ ಮೇಲೆ ಪ್ರಭಾವ ಬೀರುವ ಮಾತುಗಳನ್ನು ಪ್ರಸಾರ ಮಾಡಬಾರದು. ಯಾವುದೇ ಪಕ್ಷದ ಪರವಾಗಿ ಇಲ್ಲವೇ ವಿರೋಧವಾಗಿ ನೀಡುವ ಅಭಿಪ್ರಾಯ ಸಂಗ್ರಹಗಳ ಫಲಿತಾಂಶವನ್ನು ಪ್ರಕಟಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ಹಣ ಹಂಚುತ್ತಿದ್ದುದ್ದನ್ನು ಪ್ರಶ್ನಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರಿಂದ ಕೆಆರ್‌ಎಸ್ ಕಾರ್ಯಕರ್ತರ ಮೇಲೆ ಹಲ್ಲೆ
ಮತದಾನದ ಪೂರ್ವ 48 ಗಂಟೆ ಮತ್ತು ಮತದಾನದ ಸಮಯ ಮುಗಿದ ನಂತರದ ಅರ್ಧ ಗಂಟೆವರೆಗೂ ಅಂದರೆ ನ.20ರ ಸಂಜೆ 6.30 ಗಂಟೆಯವರೆಗೆ ಯಾವುದೇ ಸುದ್ದಿ ವಾಹಿನಿ, ಕೇಬಲ್ ಟಿವಿ ಸೇರಿದಂತೆ ಇನ್ನಿತರ ಡಿಜಿಟಲ್ ಮಾಧ್ಯಮಗಳು ಎಕ್ಸಿಟ್ ಪೋಲ್ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ.