ಕೆಆರ್‌ಎಸ್ ಜಲಾಶಯಕ್ಕೆ 80 ಅಡಿ ನೀರು ಬರುತ್ತಿದ್ದಂತೆ ಮಂಡ್ಯ ಜಿಲ್ಲೆಯ ಕೆರೆಗಳಿಗೆ ನೀರನ್ನು ತುಂಬಿಸಿಕೊಳ್ಳಬೇಕು. ಆದರೆ ಸ್ಟಾರ್ ಚಂದ್ರು ಮಂಡ್ಯ ಜಿಲ್ಲೆಯಲ್ಲಿ 400 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಂಡ ಕಾರಣ ಕೆಆರ್‌ಎಸ್‌ನಿಂದ ನೀರು ಬಿಟ್ಟರೆ ಈ ಕಾಮಗಾರಿ ಮಾಡಲು ಸಾಧ್ಯವಿಲ್ಲ ಎಂದು ನೀರನ್ನು ತಡೆ ಹಿಡಿಸಿದ್ದಾರೆ ಎಂಬ ಆರೋಪಗಳು ಇದೆ. ಇಂದು ಕೆರೆಗಳಿಗೆ ನೀರನ್ನು ತುಂಬದೆ ಮುಂದೆ ಮಳೆ ಬರದಿದ್ದರೆ ಜನರು ಸಾಯುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಸರ್ಕಾರ ಕೂಡಲೇ ಕೆರೆಗಳಿಗೆ ನೀರನ್ನು ಬಿಡಬೇಕು ಎಂದು ರಮೇಶ್ ಗೌಡ ಒತ್ತಾಯಿಸಿದರು.
ಕೆರೆಕಟ್ಟೆಗಳಿಗೆ ನೀರು ತುಂಬಿಸದ ಕಾವೇರಿ ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಚನ್ನಪಟ್ಟಣ ತಾಲೂಕು ಕಚೇರಿ ಮುಂದೆ ಕರ್ನಾಟಕ ಜನಪರ ವೇದಿಕೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಎಚ್ಚರಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವಿಲ್ಲದಂತೆ ಮೌನವಾಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಚನ್ನಪಟ್ಟಣ ಸ್ಪೋಟ್ಸ್ ಕ್ಲಬ್ ಅಧ್ಯಕ್ಷರಾದ ನಿಂಗೇಗೌಡರು (ಎನ್‌ಜಿ), ಮಾತನಾಡಿ, ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಕಕಜ ವೇದಿಕೆ 321 ದಿನಗಳಿಂದ ಕಾವೇರಿ ಸರ್ಕಲ್‌ನಲ್ಲಿ ನಿರಂತರ ಹೋರಾಟ ಮಾಡುತ್ತಾ ಬಂದಿದೆ. ರಾಜಕೀಯ ಕೆಸರೆರೆಚಾಟದಲ್ಲಿ ಮುಳುಗಿರುವ ರಾಜ್ಯದ ಸಂಸದರು ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲು ಶ್ರಮಿಸಲಿ. ಅಧಿಕಾರಿಗಳು ಯಾವುದೇ ಕೆಲಸಗಳತ್ತ ಗಮನ ನೀಡದೆ ನಿರ್ಲಕ್ಷ್ಯ ವಹಿಸುತ್ತಾ ಬಂದಿದ್ದರಿಂದ ಇಂದು ತಾಲೂಕಿನ ಕೆರೆಗಳು ಬರಿದಾಗಿವೆ. ಮುಂದಿನ ದಿನಗಳಲ್ಲಿ ಎಚ್ಚೆತ್ತು ಕೆರೆಗಳಿಗೆ ನೀರನ್ನು ತುಂಬಿಸಲು ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಮದ್ದೂರು ರೈತ ಮುಖಂಡ ಸೊ.ಸಿ. ಪ್ರಕಾಶ್ ಅವರು ಮಾತನಾಡಿ, ತಲಕಾವೇರಿಯಲ್ಲಿ ಹುಟ್ಟಿ ಕೆಆರ್‌ಎಸ್‌ನಿಂದ ಹರಿಯುವ ಕಾವೇರಿ ನದಿಯಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿದು ಸಮುದ್ರಕ್ಕೆ ಸೇರಿದೆ. ಆದರೆ ಜಲಾಶಯ ಇರುವ ಮಂಡ್ಯ ಜಿಲ್ಲೆಯ 240 ಕೆರೆಗಳು ಸೇರಿದಂತೆ ಚನ್ನಪಟ್ಟಣದಲ್ಲಿ ನೂರಾರು ಕೆರೆಗಳು ನೀರಿಲ್ಲದೆ ಒಣಗಿವೆ. ಇಲ್ಲಿನ ರೈತರು ಮಳೆಯನ್ನು ನಂಬಿ ಕೃಷಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಮಹಿಳಾ ರೈತಮುಖಂಡರಾದ ಅನುಸೂಯಮ್ಮ ಅವರು ಮಾತನಾಡಿ, ರೈತರಿಂದ ಸರ್ಕಾರ, ಅಧಿಕಾರಿಗಳು ಇರುವುದು. ಈ ನಿಟ್ಟಿನಲ್ಲಿ ರೈತರಿಗೆ ಕೃಷಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಮೊದಲ ಆಧ್ಯತೆ ನೀಡಬೇಕು. ಇಲ್ಲವಾದರಲ್ಲಿ ರೈತರು ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹೋರಾಟಗಾರರಿಂದ ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್ ಲಕ್ಷ್ಮಿದೇವಮ್ಮ ಅವರು ಮಾತನಾಡಿ, ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರದ ಗಮನಕ್ಕೆ ತಂದು ರೈತರ ಪರವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ಎಇಇ ಸುರೇಶ್ ಮಾತನಾಡಿ, ಕೆಆರ್‌ಎಸ್‌ನಿಂದ ಶಿಂಷಾ ನದಿಗೆ ನೇರವಾಗಿ ನೀರು ಬರುವ ಕಾಲುವೆಗಳಿಲ್ಲ. ಮಂಡ್ಯ ಜಿಲ್ಲೆಯ ಕೆರೆಗಳು ತುಂಬಿದ ಬಳಿಕ ಶಿಂಷಾ ನದಿಗೆ ನೀರು ಹರಿದು ಅಲ್ಲಿಂದ ಬರುವ ಸೋರಿಕೆ ನೀರಿನಿಂದ ಇಗ್ಗಲೂರು ಜಲಾಶಯಕ್ಕೆ ನೀರು ಬರುತ್ತದೆ. ಕಳೆದ ವರ್ಷ ಮಳೆ ಇಲ್ಲದ ಕಾರಣ ಮಂಡ್ಯ ಜಿಲ್ಲೆಯ ಎಲ್ಲ ಕೆರೆಗಳು ನೀರಿಲ್ಲದ ಒಣಗಿದ್ದವು. ಅಲ್ಲಿನ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದು ಮುಂದಿನ ಕೆರೆಗಳ ಮೂಲಕ ಶಿಂಷಾ ನದಿಗೆ ಹರಿಯಲು ತಡವಾಗಿದೆ. ಇಗ್ಗಲೂರು ಜಲಾಶಯಲ್ಲಿ 5 ಅಡಿ ಡೆಡ್ ಸ್ಟೋರೇಜ್ ನೀರಿತ್ತು. ಇದೀಗ 17.6 ಅಡಿ ನೀರು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಗರಕಹಳ್ಳಿ ಪಂಪ್‌ಹೌಸ್‌ನ ಕೆರೆಗಳಿಗೆ ನೀರನ್ನು ತುಂಬಲು ಮೋಟಾರ್‌ಗಳನ್ನು ಆನ್ ಮಾಡಲಾಗಿದೆ. ನೀರಿನ ಲಭ್ಯತೆ ಮೇರೆಗೆ ಕಣ್ವಾ ಪಂಪ್‌ಹೌಸ್ ಮೋಟಾರ್‌ಗಳನ್ನು ಆನ್ ಮಾಡಿ ತಾಲೂಕಿನ ಇತರೆ ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಮಂಡ್ಯ | ಅನುಮಾನಾಸ್ಪದವಾಗಿ ಪತ್ನಿ ಸಾವಿನ ಬಳಿಕ ಪತಿಯೂ ಆತ್ಮಹತ್ಯೆ; ಅನಾಥವಾದ ಪುಟ್ಟ ಮಗು!
ಪ್ರತಿಭಟನೆಯಲ್ಲಿ ಕಕಜ ವೇದಿಕೆ ಮಂಡ್ಯ ಜಿಲ್ಲಾಧ್ಯಕ್ಷ ಉಮಾಶಂಕರ್, ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ಡೈರಿ ಕಾರ್ಯದರ್ಶಿ ಪುಟ್ಟರಾಜು, ಬುಕ್ಕಸಾಗರ ಕುಮಾರ್, ಡಿಎಎಸ್‌ಗ ಸಂಚಾಲಕ ವೆಂಕಟೇಶ(ಸೇಟು) ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ರಂಜಿತ್ ಗೌಡ, ರಾಜ್ಯ ಯುವ ಘಟಕದ ಅಧ್ಯಕ್ಷ ಮಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಚಾಮರಾಜ ನಗರ ಜಿಲ್ಲಾಧ್ಯಕ್ಷ ಮಲ್ಲು, ತಾಲೂಕು ಉಪಾಧ್ಯಕ್ಷ ಮಹೇಶ್ ಮೆಣಸಿಗನಹಳ್ಳಿ, ವೇದಿಕೆಯ ಪದಾಧಿಕಾರಿಗಳಾದ ನಾಗವಾರ ಶಿವಲಿಂಗೇಗೌಡ, ಜಯರಾಮು, ರಾಮಕೃಷ್ಣಯ್ಯ ಸಿಂಗರಾಜಿಪುರ, ರಾಮೇಗೌಡ ಚಕ್ಕೆರೆ, ವೇಣುಗೋಪಾಲಸ್ವಾಮಿ ರೈತ ಸಂಘದ ಚಾಮರಾಜು, ಶಂಕರ್, ಬೋರೇಗೌಡ, ರಮೇಸ್ ಎಸ್.ಟಿ., ಪ್ರಸನ್ನಕುಮಾರ್, ಚಾಮರಾಜ ನಗರದ ಮಹದೇವಶೆಟ್ಟಿ, ಮೋಹನ್, ಅಶೋಕ್ ಕುಮಾರ್, ಮಹಿಳಾ ಪದಾಧಿಕಾರಿಗಳಾದ ರಾಜಮ್ಮ, ಸುಮ ಕನ್ನಡತಿ, ಲೀಲಾ ರಾಜಣ್ಣ, ಭಾರತಿ, ಚಿಕ್ಕಣ್ಣಪ್ಪ, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ, ಹುಚ್ಚಯ್ಯ, ಶ್ಯಾಂ, ಬೀರೇಶ್, ಡ್ರೈವರ್ ಶಿವಣ್ಣ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಹೆಚ್. ಆರ್. ರಮೇಶ್, ಕುಮಾರ್, ಹೊಂಬಾಳಯ್ಯ, ಉಮಾಶಂಕರ್ ಹನಿಯೂರು, ಚಾಮರಾಜು ಸಿಂಗರಾಜಿಪುರ, ಅಜಯ್ ಮೈಲ್ನಾಯ್ಕನ ಹೊಸಹಳ್ಳಿ, ಮುಕುಂದ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.
