ನಾಡು ನುಡಿ ಜಲ ಸಂರಕ್ಷಣೆಗೆ ಹೋರಾಟ ಮಾಡುತ್ತಿದ್ದು, ಮುಂದೆಯೂ ನಿರಂತರವಾಗಿ ಹೋರಾಟ ಮುಂದುವರಿಯಲಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡ ತಿಳಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಚನ್ನಪಟ್ಟಣದ ಕಾವೇರಿ ಸರ್ಕಲ್‌ನಲ್ಲಿ ಆಯೋಜಿಸಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಬಾವುಟ, ಸಸಿ ವಿತರಣೆ, ಮಹನೀಯರ ಭಾವಚಿತ್ರ ವಿತರಣೆ ಮತ್ತು ಆನೆ ಹಿಮ್ಮೆಟ್ಟಿಸಲು ಶ್ರಮಿಸಿದ ಐವರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಅವರು ಮಾತನಾಡಿದರು.
“ಇಂದು ಕರ್ನಾಟಕದ ರಾಜಕಾರಣಿಗಳಿಗೆ ಇಚ್ಚಾಶಕ್ತಿಯಿಲ್ಲ. ನೂರಾರು ಜ್ವಲಂತ ಸಮಸ್ಯೆಗಳಿದ್ದರೂ ಗಮನ ಹರಿಸದೇ ತಮ್ಮ ಏಳಿಗೆಗೆ ಆದ್ಯತೆ ನೀಡುತ್ತಿರುವುದು ಸರಿಯಾದ ಸಮಾಜ ಸೇವೆಯಲ್ಲ. ಕನ್ನಡ ನಾಡಿನ ಅಸ್ಮಿತೆಗಾಗಿ 1885ರಿಂದಲೂ ನೆಲದ ಸಹಸ್ರಾರು ವೀರ ಕನ್ನಡಿಗರ ಅವಿರತ ಹೋರಾಟ ಮಾಡಿದ್ದರ ಪ್ರಯುಕ್ತ ಕರ್ನಾಟಕ ಅಸ್ತಿತ್ವಕ್ಕೆ ಬಂದಿದೆ. ಅದರಲ್ಲಿ ಕುವೆಂಪು, ಬಿ.ಎಂ.ಶ್ರಿ ಮೈ ನವಿರೇಳಿಸುವ ಕವನದ ಸಾಲುಗಳು ಕನ್ನಡಿಗರ ಮೈಮನದಲಿ ಹಾಸು ಹೊಕ್ಕಿದ್ದವು. ಆ ನಿಟ್ಟಿನಲ್ಲಿ ಡಿ. ದೇವರಾಜು ಅರಸು, ಜಯಚಾಮರಾಜ ಒಡೆಯರ್‌ರವರ ಕಾರ್ಯ ಶ್ಲಾಘನೀಯ. ಕರ್ನಾಟಕದಲ್ಲಿ ಕನ್ನಡ ಆಡಳಿತದ ಭಾಷೆಯಾಗಬೇಕು ಎಂದು ಆಡಳಿತಾತ್ಮಕ ಆದೇಶ ನೀಡಿದ ರಾಮಕೃಷ್ಣ ಹೆಗ್ಗಡೆಯವರ ನಿರಂತರ ನೆನಪು ಸಹ ಅಗತ್ಯ” ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಂಶುಪಾಲರಾದ ನಿಂಗೇಗೌಡ ಮಾತನಾಡಿ, ಕನ್ನಡ ರಾಜ್ಯೋತ್ಸವ ನಮ್ಮ ನಾಡ ಹಬ್ಬದ ಸಂದರ್ಭದಲ್ಲಿ ಕನ್ನಡ ನೆಲ ಜಲದ ಸಂರಕ್ಷಣೆ ಮತ್ತು ಉಳಿವಿಗೆ ಪ್ರತಿಜ್ಞೆ ಮಾಡಬೇಕು. ಆಳುವ ಸರ್ಕಾರಗಳು ಕನ್ನಡಿಗರ ಭಾವನೆಯನ್ನು ಅರಿಯಬೇಕು. ಈ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಸಕ್ರಿಯ ಸಂಘಟನೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವರ್ಷದಿಂದ ನಿರಂತರವಾಗಿ ಜಲ ರಕ್ಷಣೆ, ನುಡಿ ರಕ್ಷಣೆ ಕಾರ್ಯಕ್ರಮ ಆಯೋಜಿಸಿಕೊಂಡು ಸರ್ಕಾರಕ್ಕೆ ಚಾಟಿ ಬೀಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಕಲಾ ಸಂಘಟಕ ಗುರುಮಾದಯ್ಯ ಮಾತನಾಡಿ, ಕನ್ನಡ ನಾಡು-ನುಡಿಯ ಹೋರಾಟದಲ್ಲಿ ಚನ್ನಪಟ್ಟಣ ತಾಲೂಕು ಸದಾ ಮುಂದಿದ್ದು 69ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಏರ್ಪಡಿಸಿ ಸದಾ ಕ್ರಿಯಾಶೀಲತೆಯಿಂದ ಸಂಸ್ಕೃತಿ ಪರಂಪರೆ ಮುಂದಿನ ಪೀಳಿಗೆಗೂ ತಲುಪಬೇಕೆನ್ನುವ ಉದ್ದೇಶದಿಂದ ಕಲಾತ್ಮಕ ನಡವಳಿಕೆ ಅಭಿನಂದನೀಯ. ಚನ್ನಪಟ್ಟಣ ರಾಜ್ಯದಲ್ಲಿಯೇ ಮಾದರಿ ಕಲೆ, ಸಾಹಿತ್ಯ ಸಂಸ್ಕೃತಿಗಳ ತವರು ನೆಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಡಾ. ರಾಜ್ ಕಲಾ ಬಳಗದ ಅಧ್ಯಕ್ಷರಾದ ಎಲೆಕೇರಿ ಮಂಜುನಾಥ್ ಮಾತನಾಡಿ, ಕನ್ನಡ ನಾಡು ವಿದ್ಯುಕ್ತವಾಗಿ ಅಸ್ಥಿತ್ವ ಕಂಡ ಸವಿನೆನಪಿಗೆ ಕನ್ನಡ ರಾಜ್ಯೋತ್ಸವ ಆಚರಣೆಯಾಗುತ್ತಿದ್ದು ಅರ್ಥಪೂರ್ಣ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಕನ್ನಡ ನಾಡು ಏಕೀಕೃತಗೊಳ್ಳಲು ಹಲವಾರು ವರ್ಷಗಳ ಲಕ್ಷಾಂತರ ಕನ್ನಡ ಮನಸ್ಸುಗಳ ಹೋರಾಟ, ನಿರಂತರ ಪರಿಶ್ರಮದ ಕಾರಣ ನವೆಂಬರ್ 1, 1973 ರಂದು ಹಂಪಿ ಉತ್ಸವದಲ್ಲಿ ನಾಡಿನ ಮುಖ್ಯಮಂತ್ರಿ ಡಿ. ದೇವರಾಜು ಅರಸು, ಅಂದಿನ ರಾಜ ಪ್ರಮುಖರಾದ ಜಯ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಅಂದಿನಿಂದ ನಮ್ಮನ್ನಾಳುವ ಸರ್ಕಾರಗಳು ಕನ್ನಡ ಪ್ರಣೀತ ನಾಡು-ನುಡಿ, ಸಂಸ್ಕೃತಿ, ಪರಂಪರೆಯನ್ನು ಸಾರುವ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರುತ್ತಿದ್ದು ಅದರ ಭಾಗವಾಗಿ ತಾಲೂಕಿನ ಹೋರಾಟಗಾರರು ಅರ್ಥಪೂರ್ಣ ಕಾರ್ಯ ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಿರುವುದು ಮುಂದಿನ ಪೀಳಿಗೆಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದರು.

ಬರಹಗಾರ ಬಿ.ಪಿ. ಸುರೇಶ್ ಮಾತನಾಡಿ, ಕನ್ನಡಿಗರು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದೇ ಪ್ರತ್ಯೇಕ ಕನ್ನಡ ನಾಡಿಗಾಗಿ. ಆ ನಿಟ್ಟಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸಮಿತಿಯನ್ನು ಅಸ್ತಿತ್ವಕ್ಕೆ ತಂದ ಮೈಲಾರ ಮಹಾದೇವಮ್ಮ, ಆಲೂರು ವೆಂಕಟರಾಯರು, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದ ಉಯಿಲಗೋಳ ನಾರಾಯಣ ರಾವ್, ಕುವೆಂಪುರವರ ಬಾರಿಸುವ ಕನ್ನಡ ಡಿಂಡಿಮ, ಬಿ.ಎಂ.ಶ್ರೀಯವರ ತಾಯಿ ಬಾರೇ ಮೊಗವ ತೋರೆ ಎಂಬ ಕೃತಿಗಳು ಕನ್ನಡಿಗರಲ್ಲಿ ಜಾಗೃತಿ ಮೂಡಿಸಿ ನಿರಂತರ ಚಳುವಳಿಯ ಕಾರಣದಿಂದ ಕನ್ನಡ ನಾಡು ಅಸ್ತಿತ್ವ ಕಂಡಿತು ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕಕಜವೇ ಜಿಲ್ಲಾಧ್ಯಕ್ಷ ಬಿ.ಸಿ. ಯೋಗೇಶ್‌ಗೌಡ, ಕಸ್ತೂರಿ ಕರ್ನಾಟಕ ಜನಪರವೇದಿಕೆ ನಾಡಿನ ಸಂಸ್ಕೃತಿ ಪರಂಪರೆ, ನೆಲ ಜಲದ ರಕ್ಷಣೆಗೆ ಪ್ರತಿಕ್ಷಣ, ಪ್ರತೀದಿನ ವರ್ಷಪೂರ್ತಿ ಕಟಿಬದ್ಧ ಹೋರಾಟಕ್ಕೆ ಸಿದ್ಧವಿದ್ದು ಅದರ ಪ್ರತೀಕವಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣ ನಮ್ಮ ಹಕ್ಕು ಅದು ಜಾರಿಯಾಗಲೇಬೇಕು ಎಂದು ಹೋರಾಟ ನಡೆಸುತ್ತಿದೆ. ನಾಡಿನ ಪ್ರತಿಭೆಗಳನ್ನು ಗುರುತಿಸಿ ಅಭಿನಂದಿಸುವುದು, ಪ್ರಕೃತಿಯ ಪೋಷಣೆಯಲ್ಲಿ ನಿರಂತವಾಗಿರುವುದು ಎಂದರು.
ಕಾರ್ಯಕ್ರಮದಲ್ಲಿ ಅರ್ಥ ಪೂರ್ಣ ಕನ್ನಡ ಗೀತೆಗಳನ್ನು ಗೋವಿಂದಹಳ್ಳಿ ಶಿವಣ್ಣ, ನಿವೃತ್ತ ಅಧ್ಯಾಪಕ ಸಾಕ್ಷರ ಕೋಗಿಲೆ. ಚೌ.ಪು.ಸ್ವಾಮಿ, ಅಂತರ್ ಸಂಸ್ಕೃತಿ ಪರಿಚಾರಕಿ ಗಾಯಕಿ ತಸ್ಮಿಯಾಬಾನು, ಕಲಾವಿದ ಎಲೆಕೇರಿ ಮಂಜುನಾಥ್, ಹೊಟ್ಟಿಗನಹೊಸಹಳ್ಳಿ ರಮೇಶ್, ಕುಂತೂದೊಡ್ಡಿ ಕುಮಾರ್ ಮುಂತಾದವರು ಹಾಡಿ ನೆರೆದ ಸಭಿಕರನ್ನು ರಂಜಿಸಿದರು.
ಇದನ್ನು ಓದಿದ್ದೀರಾ? ಶಿವಮೊಗ್ಗ | ಬಿಸಿ ಚಹಾ ಮೈಮೇಲೆ ಬಿದ್ದು ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ನಿಧನ
ಅರಣ್ಯ ಇಲಾಖೆಯ ಐವರು ಸಿಬ್ಬಂದಿಗೆ ಸನ್ಮಾನ
ಹಲವು ವರ್ಷಗಳಿಂದ ತಾಲೂಕಿನ ನಾಗರೀಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಬೆಳೆ ಹಾಳುಮಾಡುತ್ತಿದ್ದ ಆನೆಗಳನ್ನು ಓಡಿಸುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆಯ ಐವರು ಸಿಬ್ಬಂದಿಯನ್ನು ಇದೇ ವೇಳೆ ಸನ್ಮಾನಿಸಿ, ಅಭಿನಂದಿಸಲಾಯಿತು. ಆನೆ ಓಡಿಸಲು ಶ್ರಮಿಸಿದ ಕೇತೋಹಳ್ಳಿಯ ಇಬ್ರಾಹಿಂ ಪಾಷ, ಕುಂತೂದೊಡ್ಡಿ ಭರತ್ ಕುಮಾರ್, ಮಲ್ಲುಂಗೆರೆಯ ಎನ್. ಹೃತಿಕ್, ಬುಕ್ಕಸಾಗರದ ಪಿ. ದಿನೇಶ್, ಅಮ್ಮಳ್ಳಿದೊಡ್ಡಿಯ ಕೆ. ಅನಿಲ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.
ಖ್ಯಾತ ರಂಗ ಕಲಾವಿದೆ ಚಂದನ ನಟರಾಜ್‌ರವರು ಶ್ರೀ ಚಾಮುಂಡೇಶ್ವರಿ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರಿಂದ ಪ್ರಶಂಸೆಗೊಳಪಟ್ಟರು. ಕಾರ್ಯಕಮ್ರದ ನಂತರ ಕನ್ನಡ ಬಾವುಟ ವಿತರಣೆ, ಕನ್ನಡ ಶಾಲುಗಳ ವಿತರಣೆ, ವಿಭಿನ್ನ ರೀತಿಯ ಆರೋಗ್ಯ ಸ್ನೇಹಿ ಗಿಡಗಳ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ರಂಜಿತ್‌ಗೌಡ, ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ದುರ್ಗೇಗೌಡ ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
