ಛತ್ರಪತಿ ಶಿವಾಜಿ ಮಹಾರಾಜರ ಹೆಸರೇ ಒಂದು ಮಹಾನ್ ಶಕ್ತಿಯಾಗಿದ್ದು, ನಮ್ಮ ದೇಶದ ಅತ್ಯಂತ ಧೈರ್ಯಶಾಲಿ ರಾಜ ಮಾತ್ರವಲ್ಲ, ಹಿಂದೂ ಧರ್ಮವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿರುವಂತಹ ರಾಜರಲ್ಲಿ ಶಿವಾಜಿ ಪ್ರಮುಖರು ಎಂದು ಅಪರ ಜಿಲ್ಲಾಧಿಕಾರಿ ಡಾ.ಭಾಸ್ಕರ್ ಬಣ್ಣಿಸಿದರು.
ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತಿ” ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಶಿವಾಜಿ ಮಹಾರಾಜರು 14ನೇ ವಯಸಿನಲ್ಲಿ ಕರ್ನಾಟಕದ ಹಂಪಿಗೆ ಭೇಟಿ ನೀಡಿದಾಗ ಅಲ್ಲಿ ಇರುವಂತಹ ಸಮ್ರಾಜ್ಯವನ್ನು ಕಂಡು ಪ್ರೆರಣೆಗೊಂಡು ತಾನು ಕೂಡ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿ ವಿಸ್ತರಿಸಿದರು. ಅವರು ತಮ್ಮ ಜೀವಿತಾವಧಿಯಲ್ಲಿ ತನ್ನ ಸಾಮ್ರಾಜ್ಯವನ್ನು ಮೊಘಲರಿಂದ ಕಾಪಾಡಿಕೊಳ್ಳಲು ಅನೇಕ ವರ್ಷಗಳ ಕಾಲ ಹೋರಾಡಿದರು. ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿ ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹಳ ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಭಾರತದ ಬಹು ಭಾಗವನ್ನು ತಮ್ಮ ಆಳ್ವಿಕೆಗೆ ಒಳಪಡಿಸಿದರು. ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತಿ ಎಂದೆಂದಿಗೂ ಪ್ರೇರಣಾದಾಯಕ. ಅವರ ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಕರಾದ ಗಂಗಾಧರ ಮೂರ್ತಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು 1630ರ ಫೆಬ್ರುವರಿ 19 ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿನ ಶಿವನೇರಿ ಎನ್ನುವ ಕೋಟೆಯಲ್ಲಿ ಜನಿಸಿದರು. ಬಾಲ್ಯದಲ್ಲೇ ನಾಯಕತ್ವದ ಗುಣಗಳನ್ನು ಹೊಂದಿದ್ದು, ತನ್ನ ತಾಯಿಯ ಆರೈಕೆಯಲ್ಲಿ ಮುದ್ದು ಮಗನಾಗಿ ಬೆಳೆದರು. ಶಿವಾಜಿ ಮಹಾರಾಜರಿಗೆ ಕೇವಲ 14 ವರ್ಷ ವಯಸ್ಸಿನಲ್ಲೇ ಅತ್ಯಂತ ಧೈರ್ಯಶಾಲಿ, ನಿರ್ಭೀತ, ನ್ಯಾಯಸಮ್ಮತವಾಗಿದ್ದ ನಿರ್ಧಾರ ತೆಗೆದುಕೊಳ್ಳುತ್ತಿದ್ದ ವಿಶೇಷ ಶಕ್ತಿ ಹೊಂದಿದ್ದರು. ಮಹಿಳೆಯರ ಬಗ್ಗೆ ವಿಶೇಷ ಗೌರವವನ್ನು ತೋರುತ್ತಿದ್ದರು. ಭಾರತದಲ್ಲಿ ಮೊದಲ ಬಾರಿಗೆ ಗೆರಿಲ್ಲಾ ಯುದ್ಧವನ್ನು ಪ್ರಾರಂಭಿಸಿದರು. 16ನೇ ವಯಸಿನಲ್ಲೆ ಶಿವನೇರಿ ದುರ್ಗದ ಮೇಲೆ ಯುದ್ದ ಮಾಡಿ ಕೊಟೆಯನ್ನು ವಶಪಡಿಸಿಕೊಂಡ ನಂತರ ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತಂದರು, ತನ್ನ ಸಾಮ್ರಾಜ್ಯವನ್ನು ತಮಿಳುನಾಡುವರೆಗೂ ವಿಸ್ತರಿಸಿದರು ಎಂದರು.
ಶಿವಾಜಿಯು ಕೊಂಕಣ ಕರಾವಳಿಯಲ್ಲಿ ನೌಕಾಪಡೆಯನ್ನು ಸ್ಥಾಪಿಸಿ 160 ಹಡಗುಗಳನ್ನು ಹೊಂದಿದ್ದರು. ಅವರ ಏಳಿಗೆಯನ್ನು ಕಂಡಂತಹ ಮೊಘಲರು, ಬಹುಮನಿ ಸುಲ್ತಾನರು ಬೇಸರಗೊಂಡು ಅವರ ಸಾಮ್ರಾಜ್ಯವನ್ನು ಅಂತ್ಯ ಮಾಡಲು ಸಾಕಷ್ಟು ಪ್ರಯತ್ನಗಳು ಮಾಡಿದರಾದರೂ ಮೊಘಲರ ಯಾವುದೇ ದಾಳಿಗೆ ಎದೆಗುಂದದೆ ಸಾಮ್ರಾಜ್ಯವನ್ನು ವಿಸ್ತರಿಸಿದರು. ದಕ್ಕಿಣ ಭಾರತದಲ್ಲಿ ಇಂದಿಗೂ ಕೂಡ ಪ್ರಾಚೀನ ಹಿಂದೂ ದೇವಾಲಯಗಳು ಅಳಿಯದೇ ಉಳಿದಿದೆಯೆಂದರೆ ಅದಕ್ಕೆ ಮುಖ್ಯ ಕಾರಣ ಛತ್ರಪತಿ ಆಡಳಿತ ಎಂದು ಹೇಳಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರನ್ನು ಜಿಲ್ಲಾಡಳಿತ ವತಿಯಿಂದ ಸನ್ಮಾನ ಮಾಡಲಾಯಿತು.
ಇದನ್ನೂ ಓದಿ : ಬೆಂಗಳೂರು | ಪಿಂಚಣಿ ಕೊಡುಗೆಗಾಗಿ ವಿದ್ಯುತ್ ದರ ಹೆಚ್ಚಳ; ಸಾರ್ವಜನಿಕರ ಆಕ್ರೋಶ
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ಕುಮಾರ್, ಮರಾಠ ಸಮುದಾಯದ ಮುಖಂಡರಾದ ಡಾ.ಸುರೇಶ್ ಬಾಬು, ಸತೀಶ್, ಜಯಮುನಿ ರಾವ್, ಪ್ರದೀಪ್ ರಾವ್, ಈಶ್ವರ್, ರಂಗನಾಥ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮರಾಠ ಸಮುದಾಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.