ಕಲ್ಯಾಣ ಕರ್ನಾಟ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಸುಧಾರಣಾ ತಜ್ಞರ ಸಮಿತಿ ಪುನರ್ ರಚಿಸಿ, ಡಾ.ಛಾಯಾ ದೇಗಾಂವಕರ ಅಧ್ಯಕ್ಷ ನೇತೃತ್ವದ 8 ಜನ ಸದಸ್ಯರು ಹೊಂದಿರುವ ಶಿಕ್ಷಣ ತಜ್ಞರ ಸಮಿತಿ ಪುನರ್ ರಚಿಸಲಾಗಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳ 11 ಮಂದಿ ಶಿಕ್ಷಣ ತಜ್ಞರ ಪಟ್ಟಿಯ ಪ್ರಸ್ತಾವವನ್ನು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅವರು ಸರ್ಕಾರಕ್ಕೆ ಸಲ್ಲಿಸಿದ್ದರು. ಪ್ರಸ್ತಾವವನ್ನು ಪರಿಶೀಲಿಸಿದ ಮುಖ್ಯಮಂತ್ರಿ, ಒಬ್ಬರು ಅಧ್ಯಕ್ಷರು ಹಾಗೂ ಏಳು ಮಂದಿ ಸದಸ್ಯರನ್ನು ಆಯ್ಕೆ ಮಾಡಿ ಅನುಮೋದನೆ ನೀಡಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದ ಛಾಯಾ ದೇಗಾಂವಕರ್ ಅವರು ಅಧ್ಯಕ್ಷರಾಗಿದ್ದರೆ, ಬೀದರ್‌ನ ಡಾ.ಅಬ್ದುಲ್ ಖದೀರ್, ಮಲ್ಲಿಕಾರ್ಜುನ ಎಂ.ಎಸ್., ಬಳ್ಳಾರಿಯ ಫ್ರಾಂಸಿಸ್ ಬಾಷ್ಯಮ್, ಕಲಬುರಗಿಯ ಎನ್.ಬಿ.ಪಾಟೀಲ, ರುದ್ರೇಶ್ ಎಸ್., ಯಶವಂತ ಹರಸೂರ್ ಹಾಗೂ ನಾಗಾಬಾಯಿ ಬಿ.ಬುಳ್ಳಾ ಅವರು ಸದಸ್ಯರಾಗಿದ್ದಾರೆ.
ಈ ಸಮಿತಿಯು ಪ್ರತಿ ತಿಂಗಳು ಅಕ್ಷರ ಆವಿಷ್ಕಾರ ಯೋಜನೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ನಡೆಸಿ ಸೂಕ್ತ ಸಲಹೆ, ಮಾರ್ಗದರ್ಶನಗಳನ್ನು ಕೆಕೆಆರ್‌ಡಿಬಿಗೆ ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಗುರುರಾಜ ಕರಜಗಿ ನೇತೃತ್ವದ ಸಮಿತಿಗೆ ತೀವ್ರ ವಿರೋಧ:
ಈ ಹಿಂದೆ ಶಿಕ್ಷಣ ತಜ್ಞ ಗುರುರಾಜ ಕರಜಗಿ ನೇತೃತ್ವದಲ್ಲಿ ಆರು ಜನ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಕರಜಗಿ ಜತೆಗೆ ಸದಸ್ಯರಾಗಿ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಡಾ. ರುದ್ರೇಶ್, ಹಿರೇಮಠ ಸ್ವಾಮೀಜಿ, ಬಳ್ಳಾರಿಯ ಫಾದರ್ ಫ್ರಾನ್ಸಿಸ್, ಬೀದರ್‌ನ ಶಹೀನ್ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಅಬ್ದುಲ್ ಖದೀರ್ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ಎನ್.ಬಿ. ಪಾಟೀಲ ಅವರನ್ನು ಕೆಕೆಆರ್‌ಡಿಬಿ ಅಧ್ಯಕ್ಷರು ಆಯ್ಕೆ ಮಾಡಿ ಘೋಷಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಫೈನಾನ್ಸ್ ಕಂಪನಿಯಿಂದ ಮನೆಗೆ ಬೀಗ: ವಿಶೇಷ ಚೇತನ ಮಗುವಿನೊಂದಿಗೆ ಬೀದಿಗೆ ಬಿದ್ದ ಕುಟುಂಬ!
ಆರ್‌ಎಸ್‌ಎಸ್ ಹಿನ್ನೆಲೆಯ ಗುರುರಾಜ ಕರಜಗಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರನ್ನು ಕೈಬಿಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು. ಈಗ ಅವರನ್ನು ಕೈಬಿಟ್ಟು ಸಮಿತಿ ಪುನರ್ ರಚಿಸಿ ಛಾಯಾ ದೇಗಾಂವಕರ್ ಅವರನ್ನು ನೇಮಕಮಾಡಿ ಜವಾಬ್ದಾರಿ ವಹಿಸಲಾಗಿದೆ.