ಚಿಕ್ಕಬಳ್ಳಾಪುರ ನಗರ ಹೊರವಲಯದ ಎಸ್ ಜೆ ಸಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಚುಂಚಾದ್ರಿ ಕ್ರೀಡೋತ್ಸವ – 2024
ಭಾಗವಹಿಸುವಿಕೆ ಅತೀ ಮುಖ್ಯ, ಸೋಲು ಗೆಲುವಿನ ಲೆಕ್ಕಾಚಾರ ಆನಂತರ. ಕ್ರೀಡೆಗಳಲ್ಲಿ ಭಾಗವಹಿಸಿದವರ ಶಿಸ್ತು ಬೇರೆಯವರಲ್ಲಿ ಇರುವುದಿಲ್ಲ. ಹಾಗಾಗಿ ಕ್ರೀಡೆಯೊಳಗಿನ ಶಿಸ್ತು ನಿಮ್ಮ ಬದುಕಿನ ಭಾಗವಾಗಲಿ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶಿಸಿದರು.
ಚಿಕ್ಕಬಳ್ಳಾಪುರ ನಗರ ಹೊರವಲಯದ ಎಸ್.ಜೆ.ಸಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ 27ನೇ ವರ್ಷದ ರಾಜ್ಯಮಟ್ಟದ ಚುಂಚಾದ್ರಿ ಕ್ರೀಡೋತ್ಸವದ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಸೋತಾಗ ಕುಗ್ಗದೇ, ಗೆದ್ದಾಗ ಬೀಗದೆ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ ಎಂದು ಸಲಹೆ ನೀಡಿದರು.
ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ತಮ್ಮ ಭವಿಷ್ಯವನ್ನು ಲೆಕ್ಕಿಸದೇ ದುಡಿಯುತ್ತಾರೆ. ಅದಕ್ಕೆ ಪ್ರತಿಯಾಗಿ ತಾವುಗಳು ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೆ ಮಾಡಬೇಕೆಂದು. ಈ ದೇಶದ ಮುಖ್ಯ ಸಂಪತ್ತಾದ ಮಾನವ ಸಂಪತ್ತನ್ನು ನಾವುಗಳು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ವಿ.ಗೋಪಾಲ್ ಗೌಡ ಮಾತನಾಡಿ, ವಿದ್ಯಾರ್ಥಿಗಳು ಜವಾಬ್ದಾರಿಯುತ ನಾಗರೀಕರಾಗಿ ದೇಶ ಸೇವೆಗಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಪ್ರಸ್ತುತ ವಿದ್ಯಾರ್ಥಿ ಯುವಜನರು ಅತ್ಯಾಧುನಿಕತೆಯ ಭರಾಟೆಯಲ್ಲಿ ಮೊಬೈಲ್ ಬಳಕೆ, ದುಶ್ಚಟಗಳ ದಾಸರಾಗುತ್ತಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಮಾರಕ. ಆದ್ದರಿಂದ, ಶ್ರದ್ಧಾ ಭಕ್ತಿಯಿಂದ ಕೆಲಸ ಮಾಡಿದಲ್ಲಿ ಯಶಸ್ಸು ನಮ್ಮದಾಗುತ್ತದೆ ಎಂದು ಸಲಹೆ ನೀಡಿದರು.
ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ಇತರೆ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಬೆಳಗ್ಗೆ 9 ಗಂಟೆಗೆ ಆರಂಭವಾದ ಕ್ರೀಡಾಕೂಟದಲ್ಲಿ ರಾಜ್ಯದ 21 ಜಿಲ್ಲೆಗಳಿಂದ 6000ಕ್ಕೂ ಹೆಚ್ಚು ವಿದ್ಯಾರ್ಥಿಗಳು 30ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಪೋಕ್ಸೊ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನ್ಯಾಯಾಂಗದ ನಿರಾಸಕ್ತಿ; ಸದನದ ಚರ್ಚೆ ಸ್ವಾಗತಾರ್ಹ

ಸಮಾರಂಭದಲ್ಲಿ ಪುರುಷೋತ್ತಮನಂದನಾಥ ಸ್ವಾಮೀಜಿ, ಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಪ್ರಕಾಶನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ, ಆದಿಚುಂಚನಗಿರಿ ವಿವಿ ಉಪಕುಲಪತಿ ಡಾ.ಎಂ.ಎ ಶೇಖರ್, ಅಕ್ಕ ಸಮ್ಮೇಳನದ ಅಧ್ಯಕ್ಷ ಅಮರನಾಥ ಗೌಡ, ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ, ಎಸ್ಪಿ ಕುಶಾಲ್ ಚೌಕ್ಸೆ, ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಉಷಾರಾಣಿ, ಡಾ.ಶಿವರಾಮರೆಡ್ಡಿ, ಪ್ರಾಂಶುಪಾಲರಾದ ಡಾ.ಜಿ.ಟಿ.ರಾಜು, ಕುಲಸಚಿವ ಸುರೇಸ್ ಜೆ ಸೇರಿದಂತೆ ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.