ದೇಶದ ಪೌರತ್ವ ಜಾತಿ, ಧರ್ಮ ಆಧಾರಿತ ಆಗಿಲ್ಲ. ಸಂವಿಧಾನಬದ್ಧವಾದ ಹಕ್ಕು ಆದರ ದೇಶದ ಪೌರತ್ವನ್ನು ಕಸಿಯಲು ಚುನಾವಣಾ ಆಯೋಗದ ಮೂಲಕ ಎಸ್ಐಆರ್ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಹುನ್ನಾರ ಮಾಡಿದೆ. ಇದರಿಂದ ಪ್ರತಿಯೊಬ್ಬ ಅರ್ಹ ಮತದಾರರ ಹೆಸರುಗಳನ್ನು ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಹೊರಹಾಕದಂತೆ ಎಚ್ಚರ ವಹಿಸಬೇಕು ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ರಾಜ್ಯ ಸಮಿತಿ ಕಾರ್ಯದರ್ಶಿ ಡಾ.ಕೆ.ಪ್ರಕಾಶ್ ತಿಳಿಸಿದರು.
ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಬಾಗೇಪಲ್ಲಿ ವಿಧಾನಸಭಾಕ್ಷೇತ್ರದ ವತಿಯಿಂದ ಹಮ್ಮಿಕೊಂಡಿದ್ದ ‘ಮತದಾರರ ತೀವ್ರ ವಿಶೇಷ ಪರಿಷ್ಕರಣೆ ನ ಸಮಸ್ಯೆಗಳ ಕುರಿತು ಬಿಎಲ್ಎ-2 ಮತ್ತು ಮುಖಂಡರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶ ಉದ್ಘಾಟಿಸಿದ ಪ್ರಕಾಶ್ರವರು
2014 ರಲ್ಲಿ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶದಂದ ದೇಶಕ್ಕೆ ಬರುವ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಸಮುದಾಯದವರಿಗೆ ದೇಶದ ಪೌರತ್ವ ನೀಡುತ್ತೇವೆ ಎಂದು ಕೇಂದ್ರ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಘೋಷಣೆ ಮಾಡಿತು. ಇದರಿಂದ ಅನೇಕರು ದೇಶಕ್ಕೆ ವಲಸೆ ಬಂದಿದ್ದಾರೆ. ಬಿಜೆಪಿ ಮತ್ತು ಆರ್ಎಸ್ಎಸ್ ತಮ್ಮ ಹಿಂದುತ್ವವನ್ನು ಉಳಿಸಲು ಮತ್ತು ಮತಬ್ಯಾಂಕಿಗೆ ವಲಸೆ ಬಂದವರಿಗೆ ದೇಶದ ಪೌರತ್ವ ನೀಡಿದೆ. ಆದರೆ ಮುಸ್ಲಿಂ ಸಮುದಾಯದವರು ಬಿಜೆಪಿ ಮತ ಹಾಕುವುದಿಲ್ಲ ಎನ್ನುವ ಉದ್ದೇಶಿ ಇರಿಸಿ, ಇಂದಿಗೂ ದೇಶದ ಪೌರತ್ವ ನೀಡಿಲ್ಲ ಎಂದು ಆರೋಪಿಸಿದರು.
ಪ್ರಧಾನಮಂತ್ರಿ, ವಿರೋಧಪಕ್ಷದ ನಾಯಕರು, ಸರ್ವೋಚ್ಛನ್ಯಾಯಾಲಯದ ನ್ಯಾಯಮೂರ್ತಿಗಳ ಸಮಿತಿಯು ಹಿಂದೆ ಮುಖ್ಯಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಕಾಯಿದೆ ಇತ್ತು. ಆದರೆ ನರೇಂದ್ರಮೋದಿ ಪ್ರಧಾನಮಂತ್ರಿ ಆದ ನಂತರ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿರನ್ನು ಹೊರತೆಗೆದು ತಮ್ಮ ಸಂಪುಟದ ಸಚಿವರನ್ನು ಸೇರಿಸಿಕೊಂಡು, ಮುಖ್ಯಚುನಾವಣಾ ಆಯುಕ್ತರ ನೇಮಕ ಮಾಡಲಾಗಿದೆ. ಇದರಿಂದ ಇದೀಗ ಕೇಂದ್ರ ಚುಣಾವಣಾ ಆಯೋಗ ಬಿಜೆಪಿ, ಆರ್ಎಸ್ಎಸ್ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಸಿಪಿಐ(ಎಂ) ಪಕ್ಷ ಎಸ್ಐಆರ್ನ ಅನೇಕ ಗೊಂದಲಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಆದರೆ ಪತ್ರಕ್ಕೆ ಉತ್ತರ ನೀಡಿಲ್ಲ. ಬಿಹಾರ, ಪಶ್ಚಿಮಬಂಗಾಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಲಕ್ಷಾಂತರ ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಹೊರಹಾಕಲಾಗಿದೆ. ಈ ಪೈಕಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರೇ ಹೆಚ್ಚಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರುಗಳು ಇದ್ದರೆ ಮಾತ್ರ ಆಯಾಯ ಬಿಜೆಪಿ ರಾಜ್ಯಗಳ ಸರ್ಕಾರಗಳು ಯೋಜನೆಗಳ ಅರ್ಹ ಫಲಾನುಭವಿಗಳು ಆಗಿರುತ್ತಾರೆ ಎಂದು ಘೋಷಣೆ ಮಾಡಿವೆ. ಆದರೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಮತದಾರರ ಪಟ್ಟಿಯಲ್ಲಿ ಹೆಸರುಗಳು ಇರುವವರಿಗೆ ಮಾತ್ರ ಯೋಜನೆಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಒಂದೇ ಹೇಳಿಕೆ ಆಗಿವೆ. ಒಂದೇ ನಾಣ್ಯದ ಎರಡು ಮುಖಗಳು ಆಗಿವೆ ಎಂದು ತಿಳಿಸಿದರು.
ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ಸಂಧರ್ಭದಲ್ಲಿ ಸಿಪಿಎಂ ಪಕ್ಷದ ಬೂತ್ ಮಟ್ಟದ ಏಜೆಂಟರು, ಪ್ರತಿಯೊಬ್ಬ ಅರ್ಹ ಮತದಾರರ ಹೆಸರುಗಳನ್ನು ಬಿಡದಂತೆ ಎಚ್ಚರ ವಹಿಸಬೇಕು. ಧರ್ಮ, ಜಾತಿ ಆಧಾರದಲ್ಲಿ ಮತದಾರರನ್ನು ನೋಡಬಾರದು ಎಂದರು.
ಸಿಪಿಎಂ ಪಕ್ಷದ ರಾಜ್ಯ ಸಮಿತಿ ಸದಸ್ಯ ಡಾ.ಅನಿಲ್ಕುಮಾರ್ ಮಾತನಾಡಿ ಮತದಾನ ಎನ್ನುವುದು ಸಂವಿಧಾನಬದ್ಧವಾದ ಹಕ್ಕು ಆಗಿದೆ. ಆದರೆ ಜಾತಿ, ಧರ್ಮಗಳ ಹೆಸರಿನಲ್ಲಿ, ಹಣ, ಹೆಂಡ ಹಂಚಿಕೆಯಲ್ಲಿ ಮತದಾರರ ಹಕ್ಕುಗಳು ಮಾರಾಟಕ್ಕೆ ಇಡಲಾಗುತ್ತಿದೆ. ಕ್ಷೇತ್ರದಲ್ಲಿ ಜಾತಿ, ಧರ್ಮ, ಹಣ, ಹೆಂಡ ಹಂಚಿಕೆಗೆ ಮಾರಾಟ ಆಗುವುದು ಬೇಡ. ಅನೇಕ ವರ್ಷಗಳಿಂದ ಗ್ರಾಮ, ಪಟ್ಟಣ, ನಗರಗಳಲ್ಲಿ ವಾಸ ಆದರೂ, ರೈತರು ಕೃಷಿಭೂಮಿ ಇದ್ದರೂ, ಮತದಾರರ ಹಕ್ಕು ವಿಶೇಷ ಪರಿಷ್ಕರಣೆಯ ಸಂಧರ್ಭದಲ್ಲಿ ಕೆಲ ರಾಜ್ಯಗಳಲ್ಲಿ ಹೆಸರುಗಳನ್ನು ಹೊರಹಾಕಲಾಗಿದೆ. ಪ್ರತಿಯೊಬ್ಬ ಮತದಾರರು ಅರ್ಜಿ ನಮೂನೆಯಲ್ಲಿ ಎಚ್ಚರದಿಂದ ಅರ್ಜಿ ಭರ್ತಿ ಮಾಡಬೇಕು. ನಂತರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳು ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಇದನ್ನು ಓದಿದ್ದೀರಾ..?ಬಾಗೇಪಲ್ಲಿ |ಸಮಾಜದ ಮುಖ್ಯವಾಹಿನಿಗೆ ತರಲು ಬಲಗೈ ಜನ ಜಾಗೃತಿ ಸಮಾವೇಶ
ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ, ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ, ಬಾಗೇಪಲ್ಲಿ ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ, ಚೇಳೂರು ತಾಲ್ಲೂಕು ಕಾರ್ಯದರ್ಶಿ ಬೈರೆಡ್ಡಿ, ಗುಡಿಬಂಡೆ ತಾಲ್ಲೂಕು ಕಾರ್ಯದರ್ಶಿ ವೆಂಕಟರಾಜು, ಪಕ್ಷದ ಬೂತ್ ಮಟ್ಟದ ಅಧಿಕಾರಿ ಡಿ.ಟಿ.ಮುನಿಸ್ವಾಮಿ ಇದ್ದರು.




