ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಪಟ್ಟಣಕ್ಕೆ ಸಮೀಪದ ಗಡಿದಂ ರಾಜರಾಜೇಶ್ವರಿ ಸಭಾಂಗಣದಲ್ಲಿ ಅಂತರರಾಜ್ಯ ಮಟ್ಟದ ಬಹುಭಾಷಾ ದಸರಾ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಬಹುಭಾಷಾ ಕವಿಗೋಷ್ಠಿಗೆ ಕರ್ನಾಟಕದ ಬೆಂಗಳೂರು, ಮೈಸೂರು, ಹಾವೇರಿ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ನಾಡಹಬ್ಬ ದಸರಾ ಮತ್ತು ಅದರ ಸಾಂಸ್ಕೃತಿಕ ಮಹತ್ವವನ್ನು ಬಿಂಬಿಸುವ ವಿವಿಧ ಭಾಷೆಗಳ ಕವನಗಳನ್ನು ವಾಚಿಸಿದರು.
ದಸರಾ ಹಬ್ಬದ ಐತಿಹಾಸಿಕ ಹಿನ್ನೆಲೆ, ನಾಡಿನ ಪರಂಪರೆ, ಸಂಸ್ಕೃತಿ, ಧಾರ್ಮಿಕ ನಂಬಿಕೆಗಳು ಹಾಗೂ ವಿಜಯದ ಸಂಕೇತವಾದ ವಿಜಯದಶಮಿಯ ಮಹತ್ವವನ್ನು ಸಾರುವ ಕವನಗಳು ಕವಿಗೋಷ್ಠಿಯ ಪ್ರಮುಖ ಆಕರ್ಷಣೆಯಾಗಿದ್ದವು. ಕವಿಗಳು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಕವನಗಳನ್ನು ಪ್ರಸ್ತುತಪಡಿಸಿ ಸಾಹಿತ್ಯಾಸಕ್ತರ ಗಮನ ಸೆಳೆದರು.
ವಿವಿಧ ರಾಜ್ಯಗಳ ಕವಿಗಳು ಒಂದೇ ವೇದಿಕೆಯಲ್ಲಿ ಸೇರಿ ಬಹುಭಾಷಾ ಕವನಗಳನ್ನು ವಾಚಿಸುವ ಮೂಲಕ ಭಾಷಾ ವೈವಿಧ್ಯತೆಯ ನಡುವೆ ಸಾಹಿತ್ಯಿಕ ಏಕತೆ ಮತ್ತು ಸಾಂಸ್ಕೃತಿಕ ಸೌಹಾರ್ದದ ಸಂದೇಶವನ್ನು ಸಾರಿದರು. ವಿಶೇಷವಾಗಿ ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ಕವಿಗಳು ತಮ್ಮ ಗಾಯನದ ಮೂಲಕ ದಸರಾ ವೈಭವವನ್ನು ವರ್ಣಿಸಿದ್ದಿ ವಿಶೇಷವಾಗಿತ್ತು.
ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳು ವಿವಿಧ ಭಾಷೆಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದರೊಂದಿಗೆ ಕನ್ನಡ ನಾಡಿನ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಬೆಳವಣಿಗೆಗೆ ಪೂರಕವಾಗಿವೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಇದನ್ನು ಓದಿದ್ದೀರಾ..?ಕೋಲಾರ | ಟಾಟಾ ಎಲೆಕ್ಟ್ರಾನಿಕ್ಸ್‌ನಲ್ಲಿ ಮಹಿಳಾ ಕಾರ್ಮಿಕರ ಸಾವು: ಸಮಗ್ರ ತನಿಖೆಗೆ ಸಿಐಟಿಯು ಒತ್ತಾಯ
ಕವಿಗೋಷ್ಠಿ ಕಾರ್ಯಕ್ರಮವನ್ನು ಅಭಾಸಾಪ ಜಿಲ್ಲಾಧ್ಯಕ್ಷ ಹಾಗು ಹಿರಿಯ ಸಾಹಿತಿ ಕಾಗತಿ ವೆಂಕಟರತ್ಮಂ ರವರು ಉದ್ಘಾಟಿಸಿದರು. ಆನಂದಾಶ್ರಮದ ಶ್ರೀ ಸೂರ್ಯ ನಾರಾಯಣಸ್ವಾಮಿ, ಅಭಾಸಾಪ ಬಾಗೇಪಲ್ಲಿ ತಾಲ್ಲುಕು ಅಧ್ಯಕ್ಷ ಪಿ.ಜಿ.ಶಿವಶಂಕರಾಚಾರ್ಯ, ಚೇಳೂರು ತಾ ಅಧ್ಯಕ್ಷ ಪಿ.ಎಸ್. ಶ್ರೀಧರ್, ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ.ಸತ್ಯನಾರಾಯಣರಾವ್, ವಿ.ಎಸ್.ಸತ್ಯನಾರಾಯಣ, ಜಿಲ್ಲಾ ಸಮಿತಿ ಸದಸ್ಯರಾದ ರಾಧಾಮಣಿಕೋಲಾರ, ಹಿರಿಯ ವಕೀಲ ಎ.ಜಿ.ಸುಧಾಕರ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ, ಬಾಗೇಪಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, ಕಸಾಪ ಗೌ ಕಾರ್ಯದರ್ಶಿ ಶ್ರೀನಿವಾಸ್ ಬಾಣಾಲಪಲ್ಲಿ, ಧರ್ಮದರ್ಶಿ ಕೆ.ಎಂ.ನಾಗರಾಜ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವಿ.ವೆಂಕಟೇಶ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ವೆಂಕಟಸ್ವಾಮಿ, ಯೋಗಗುರು ರಘುನಾಥರೆಡ್ಡಿ, ರಾಮದಾಸು, ರಾಜರಾಜೇಶ್ವರಿ, ರಾಮಕೃಷ್ಣಾರೆಡ್ಡಿ, ವಲೀಭಾಷ, ಮತ್ತಿತರರು ಉಪಸ್ಥಿತರಿದ್ದರು.





