ವಿಶ್ವಗುರು ಬಸವಣ್ಣನವರ ತತ್ವ-ಸಿದ್ಧಾಂತಗಳು, ವಚನ ಸಾಹಿತ್ಯದ ಸಂದೇಶ ಹಾಗೂ ಶರಣರ ಸಮಾನತೆಯ ಆಶಯಗಳನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶದಿಂದ ಬಸವ ಧರ್ಮ ಪೀಠ ಹಾಗೂ ಕಲ್ಯಾಣ ಪರ್ವ ಉತ್ಸವ ಸಮಿತಿ ವತಿಯಿಂದ ಅಕ್ಟೋಬರ್ 24ರಿಂದ 26ರವರೆಗೆ ಬಸವಕಲ್ಯಾಣದಲ್ಲಿ 25ನೇ ವರ್ಷದ ‘ಕಲ್ಯಾಣ ಪರ್ವ’ ರಜತ ಮಹೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದು ಅಲ್ಲಮಪ್ರಭು ಶೂನ್ಯ ಪೀಠದ ಪೀಠಾಧ್ಯಕ್ಷ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಬಸವಕಲ್ಯಾಣದ 108 ಅಡಿ ಎತ್ತರದ ಬಸವಣ್ಣನವರ ಪ್ರತಿಮೆ ಹೊಂದಿರುವ ಬಸವ ಮಹಾಮನೆ ಆವರಣದಲ್ಲಿ ಮೂರು ದಿನಗಳ ಕಾಲ ರಾಷ್ಟ್ರಮಟ್ಟದ ಧಾರ್ಮಿಕ, ಸಾಮಾಜಿಕ, ವೈಚಾರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ” ಎಂದರು.
ಲಿಂಗೈಕ್ಯ ಡಾ.ಮಾತೆ ಮಹಾದೇವಿ ಅವರ ನೇತೃತ್ವದಲ್ಲಿ 2001ರಲ್ಲಿ ಆರಂಭವಾದ ಕಲ್ಯಾಣ ಪರ್ವ 25ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಬಾರಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲದೆ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಿಂದ ಸಹಸ್ರ ಸಂಖ್ಯೆಯಲ್ಲಿ ಬಸವಾಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕೂಡಲಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರ ಸಾನ್ನಿಧ್ಯದಲ್ಲಿ ಹಾಗೂ ತಮ್ಮ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಅಕ್ಟೋಬರ್ 24ರಂದು ಬೆಳಿಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ವೇದಿಕೆ ದೈವೀಕರಣದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಬೆಳಿಗ್ಗೆ 10 ಗಂಟೆಗೆ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರು ರಜತ ಮಹೋತ್ಸವ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಧ್ವಜಾರೋಹಣ ನೆರವೇರಿಸಲಿದ್ದು, ಶಾಸಕ ಶರಣು ಸಲಗರ ಗೌರವಾಧ್ಯಕ್ಷತೆ ವಹಿಸಲಿದ್ದಾರೆ.
ಉದ್ಘಾಟನೆಯ ಬಳಿಕ ಧರ್ಮ ಚಿಂತನಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3.30ರಿಂದ 5.30ರವರೆಗೆ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಸಮಾವೇಶ ಹಾಗೂ ಸಂಜೆ 6.30ಕ್ಕೆ ‘12ನೇ ಶತಮಾನದ ಅನುಭವ ಮಂಟಪದಲ್ಲಿ ಮಹಿಳೆಯರ ಸ್ಥಾನ’ ವಿಷಯದ ಕುರಿತು ಮಹಿಳಾ ಗೋಷ್ಠಿ ನಡೆಯಲಿದೆ. ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ ಗೋಷ್ಠಿ ಉದ್ಘಾಟಿಸಲಿದ್ದಾರೆ. ನೂತನವಾಗಿ ನಿರ್ಮಿಸಿರುವ ಹರಳಯ್ಯ ಸಮುದಾಯ ಭವನವನ್ನು ಮಾಜಿ ಸಚಿವ ಎಚ್.ಆಂಜನೇಯ ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು.
ಹಿರಿಯ ಮುಖಂಡ ಬಸವರಾಜ ಬುಳ್ಳಾ ಮಾತನಾಡಿ, “ಅಕ್ಟೋಬರ್ 25ರಂದು ಬೆಳಿಗ್ಗೆ 7 ಗಂಟೆಗೆ ವಚನ ಸಾಹಿತ್ಯ ಮತ್ತು ಶರಣ ಧರ್ಮದ ರಕ್ಷಣೆಗಾಗಿ ಬಲಿದಾನ ಮಾಡಿದ 770 ಅಮರಗಣಂಗಳಿಗೆ ಶರಣ ವಂದನೆ ಸಲ್ಲಿಸಲಾಗುವುದು. ಬೆಳಿಗ್ಗೆ 8 ಗಂಟೆಗೆ ಪ್ರಥಮ ಶೂನ್ಯ ಪೀಠಾರೋಹಣದ 841ನೇ ಸಂಸ್ಮರಣೆ ಹಾಗೂ ದ್ವಿತೀಯ ಶೂನ್ಯ ಪೀಠಾರೋಹಣದ 24ನೇ ವಾರ್ಷಿಕೋತ್ಸವ ನಡೆಯಲಿದೆ ಎಂದರು.
ಬೆಳಿಗ್ಗೆ 10 ಗಂಟೆಗೆ ‘ಬಸವಾದಿ ಪ್ರಮಥರು ಮತ್ತು ಸಾಮಾಜಿಕ ನ್ಯಾಯ’ ವಿಷಯದ ಸಮಾಜ ಚಿಂತನಗೋಷ್ಠಿಯನ್ನು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಲಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಮಹಾರಾಷ್ಟ್ರದ ಶರಣರು ಹಾಗೂ ಬಸವಾಭಿಮಾನಿಗಳಿಗಾಗಿ ವಿಶೇಷ ಮರಾಠಿ ಗೋಷ್ಠಿ ನಡೆಯಲಿದೆ. ಸಂಜೆ 6.30ಕ್ಕೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ‘ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ: ಭವಿಷ್ಯದ ನಡೆ’ ವಿಷಯದ ಧರ್ಮ ಚಿಂತನಗೋಷ್ಠಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಮಾತನಾಡಿ, “ಅಕ್ಟೋಬರ್ 26ರಂದು ಬೆಳಿಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶರಣ ಸದ್ಭಾವನಾ ಗೋಷ್ಠಿ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಬಸವಕಲ್ಯಾಣದ ಕೋಟೆ ಆವರಣದಿಂದ ಬೆಳ್ಳಿ ರಥದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ” ಎಂದರು.
ಸಮಿತಿಯ ಕಾರ್ಯಾಧ್ಯಕ್ಷ ಜೈರಾಜ ಖಂಡ್ರೆ ಮಾತನಾಡಿ, “‘ಶರಣ ಪಥಸಂಚಲನ’ ಹೆಸರಿನಲ್ಲಿ ನಡೆಯುವ ಮೆರವಣಿಗೆಗೆ ಸಂಸದ ಸಾಗರ್ ಖಂಡ್ರೆ ಚಾಲನೆ ನೀಡಲಿದ್ದಾರೆ. ಸ್ಥಳೀಯ ಆಡಳಿತಾಧಿಕಾರಿಗಳು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಸಮಾರೋಪ ಸಮಾರಂಭ ಹಾಗೂ ದಾಸೋಹಿಗಳ ಗೌರವ ಸತ್ಕಾರದೊಂದಿಗೆ ಮೂರು ದಿನಗಳ ಉತ್ಸವ ಸಂಪನ್ನಗೊಳ್ಳಲಿದೆ” ಎಂದು ತಿಳಿಸಿದರು.
25 ಗಣ್ಯರಿಗೆ ಸನ್ಮಾನ, ಆರು ರಾಷ್ಟ್ರಮಟ್ಟದ ಪ್ರಶಸ್ತಿ
ರಜತ ಮಹೋತ್ಸವದ ಅಂಗವಾಗಿ ಬಸವತತ್ವ ಪ್ರಚಾರ, ಸಾಮಾಜಿಕ ಸೇವೆ ಹಾಗೂ ಧಾರ್ಮಿಕ ಜಾಗೃತಿಗೆ ಶ್ರಮಿಸಿದ 25 ಗಣ್ಯರು ಮತ್ತು ಶರಣ ದಂಪತಿಗಳನ್ನು ಸತ್ಕರಿಸಲಾಗುವುದು. ಮೂರು ದಿನಗಳಲ್ಲಿ ಆರು ರಾಷ್ಟ್ರಮಟ್ಟದ ವಿಶೇಷ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ರಾಜೇಂದ್ರ ಗಂದಗೆ ಹೇಳಿದರು.
ರಾಜೇಂದ್ರ ಜೊನ್ನಿಕೇರಿ ಮಾತನಾಡಿ, “ತಮಿಳುನಾಡಿನ ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷೆ ಶರಣೆ ನಿರ್ಮಲಾ ಹಾಗೂ ಶರಣ ಎಸ್. ಮೇಘೇಶ್ವರನ್ ಅವರಿಗೆ ‘ಬಸವ ಕಾಯಕ ರತ್ನ’ ಪ್ರಶಸ್ತಿ ನೀಡಲಾಗುವುದು. ಚಿತ್ರದುರ್ಗದ ಶರಣ ದಂಪತಿಗಳಾದ ಅಕ್ಕಮಹಾದೇವಿ ಮತ್ತು ತಿಪ್ಪೇಸ್ವಾಮಿ ಅವರಿಗೆ ‘ಧರ್ಮ ಸಂಸ್ಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು” ಎಂದು ಹೇಳಿದರು.

ಚಂದ್ರಶೇಖರ ಹೆಬ್ಬಾಳೆ ಮಾತನಾಡಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಸದ್ಗುರು ಮಹಾದೇಶ್ವರ ಸ್ವಾಮೀಜಿ, ಕುಂಬಳಗೋಡಿನ ಸದ್ಗುರು ಶಿವಯೋಗಿ ಮಹಾಸ್ವಾಮಿ, ಚಿತ್ರದುರ್ಗದ ಬಸವ ಹರಳಯ್ಯ ಸ್ವಾಮೀಜಿ ಹಾಗೂ ಹೈದರಾಬಾದ್‌ನ ಸದ್ಗುರು ನಿಜಾನಂದ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಸಚಿವರಾದ ಎಚ್.ಕೆ. ಪಾಟೀಲ, ಸಂತೋಷ್ ಲಾಡ್, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ರಹೀಂ ಖಾನ್, ಡಾ. ಅಜಯ್ ಸಿಂಗ್, ರಾಜಶೇಖರ ಪಾಟೀಲ, ಭೀಮರಾವ್ ಪಾಟೀಲ, ಚಂದ್ರಶೇಖರ ಪಾಟೀಲ, ಅಶೋಕ ಮನಗೂಳಿ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಕೃಷಿ ಸಾಧಕಿ ಕವಿತಾ ಮಿಶ್ರಾ ಸೇರಿದಂತೆ ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷ ಶಿವಶರಣಪ್ಪ ಹುಗ್ಗೆ ಪಾಟೀಲ ಮಾತನಾಡಿ, “ಸಮಾವೇಶದ ಅಂಗವಾಗಿ ಪ್ರತಿದಿನ ಬೆಳಿಗ್ಗೆ ಉಚಿತ ಯೋಗ ಶಿಬಿರ, ಇಷ್ಟಲಿಂಗ ದೀಕ್ಷೆ ಹಾಗೂ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಸಂಜೆ ವಚನ ನೃತ್ಯ, ಭಜನೆ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ” ಎಂದರು.
ಉತ್ಸವ ಸಮಿತಿ ಖಜಾಂಚಿ ಸಂಜೀವಕುಮಾರ ಪಾಟೀಲ ಮಾತನಾಡಿ, “ಹೊರರಾಜ್ಯಗಳಿಂದ ಆಗಮಿಸುವ ಭಕ್ತರಿಗಾಗಿ ವಿಶಾಲ ಮಂಟಪ, ವಸತಿ ಹಾಗೂ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ಶರಣರು ಬಿಳಿ ಬಟ್ಟೆ ಮತ್ತು ಕಾವಿ ಬಣ್ಣದ ಸ್ಕಾರ್ಫ್ (ಬಸವ ರಕ್ಷೆ) ಧರಿಸಿ ಬರಬೇಕು. ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ, ಬೀದರ್ ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷ ಕೆ.ವೀರೇಶ, ಮಾರ್ಗದರ್ಶಕ ಕಂಟೆಪ್ಪ ಗಂದಿಗುಡಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಗಾಯಕ ದೇವಿದಾಸಗೆ ಒಲಿದ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ





