ಜನವಸತಿ ಇಲ್ಲದ ಪ್ರದೇಶಗಳನ್ನು ಪಂಚಾಯತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿಕೊಂಡು, ಅಕ್ರಮವಾಗಿ ಖಾತೆಗಳನ್ನು ಸೃಷ್ಟಿಸಿ ಮಾರಾಟ ಮಾಡಿರುವುದನ್ನು ತಿಳಿದ ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಗಳು ಮತ್ತೊಂದು ಜನವಸತಿ ಇಲ್ಲದ ಪ್ರದೇಶ ಮಾರಾಟವಾಗುವುದಕ್ಕೂ ಮುನ್ನವೇ ಎಚ್ಚರಗೊಂಡಿದ್ದು, ಖಾಲಿ ಇರುವ ಸರ್ಕಾರಿ ಗ್ರಾಮ ಠಾಣೆ ಜಾಗದಲ್ಲಿ ರಾತ್ರೊ ರಾತ್ರಿ 80ಕ್ಕೂ ಹೆಚ್ಚು ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಂಡು ನಿವೇಶನಗಳನ್ನಾಗಿ ವಿತರಣೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜರಾ ಬಾರ್ಲಹಳ್ಳಿ ಎನ್ನುವ ಜನವಸತಿ ಇಲ್ಲದ ಗ್ರಾಮವನ್ನು, ಸ್ವತಃ ಪಂಚಾಯತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿಕೊಂಡು, ಅಕ್ರಮವಾಗಿ ಖಾತೆಗಳನ್ನು ಸೃಷ್ಟಿಸಿ ಮಾರಾಟ ಮಾಡಿದ್ದು, ಇದೀಗ ಸೀಗಹಳ್ಳಿ ಎಂಬ ಜನವಸತಿ ಇಲ್ಲದ ಪ್ರದೇಶ ಮಾರಾಟಕ್ಕೆ ಮುಂದಾಗುವುದಕ್ಕೂ ಮುನ್ನ ಸ್ಥಳೀಯ ನಿವಾಸಿಗಳು ಎಚ್ಚೆತ್ತುಕೊಂಡು ನಿವೇಶನಕ್ಕಾಗಿ ಒತ್ತಾಯಿಸಿದ್ದಾರೆ.
ದಸಂಸ ಮುಖಂಡ ಗುಡಿಬಂಡೆ ಗಂಗಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಆವಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಸೆಪಾಳ್ಯಾ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಮನೆಗಳಿಲ್ಲ. ನಿವೇಶನಗಳೂ ಇಲ್ಲ. ಬಹುತೇಕರು ದಲಿತರು ಹಾಗೂ ಕ್ರೈಸ್ತರು ಇರುವ ಸರ್ಕಾರಿ ಗ್ರಾಮ ಠಾಣೆ ಜಾಗವನ್ನು ಎಲ್ಲಿ ಅಕ್ರಮವಾಗಿ ಮಾರಿ ಬೀಡುತ್ತಾರೋ ಎಂದು ಆಕ್ರೋಶಗೊಂಡು, ಕಳೆದ 15 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದ, ಖಾಲಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಹಗಲು ರಾತ್ರಿ ಧರಣಿ ಮಾಡುತ್ತಿದ್ದಾರೆ” ಎಂದು ಹೇಳಿದರು.
“ತಾತ್ಕಾಲಿಕ ಗುಡಿಸಲುಗಳಲ್ಲಿ ಅಡುಗೆ, ಸ್ನಾನ ಮಾಡಿಕೊಂಡು ಕೊರೆಯುವ ಚಳಿಯಲ್ಲಿ ನಡಗುತ್ತಿದ್ದು, ಸರ್ಕಾರಿ ಜಮೀನನ್ನು ಬಲಾಢ್ಯರಿಗೆ ಮಾರುವುದರ ಬದಲು, ಕಡು ಬಡವ ನಿರ್ಗತಿಕರಿಗೆ ನಿವೇಶನಗಳನ್ನು ನೀಡುವಂತೆ ಸ್ಥಳಿಯರು ಒತ್ತಾಯ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
“ಈಗಾಗಲೇ ಮಜರಾ ಬಾರ್ಲಹಳ್ಳಿ ಎನ್ನುವ ಜನವಸತಿ ಇಲ್ಲದ ಗ್ರಾಮವನ್ನು, ಸ್ವತಃ ಪಂಚಾಯತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿಕೊಂಡು, ಅಕ್ರಮವಾಗಿ ಖಾತೆಗಳನ್ನು ಸೃಷ್ಟಿಸಿ, ಹಿಂದಿನ ಸಚಿವರ ಒತ್ತಡಕ್ಕೆ ಮಣಿದು ಸರ್ಕಾರಿ ಜಾಗವನ್ನು ಈಶಾ ಫೌಂಡೇಶನ್‌ಗೆ ಮಾರಾಟ ಮಾಡಿದ್ದಾರೆ” ಎಂದು ಸ್ಥಳೀಯರು ಆರೋಪಿಸಿದ್ದಾರೆ.
“ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಈಶಾ ಫೌಂಡೇಶನ್ ನಿರ್ಮಾಣ ಆಗಿದ್ದೇ ತಡ, ಸುತ್ತಮುತ್ತಲ ಪ್ರದೇಶಗಳ ಜಮೀನು ಹಾಗೂ ನಿವೇಶನಗಳಿಗೆ ಚಿನ್ನದ ಬೆಲೆ ಬಂದಿದೆ. ಇದರಿಂದ ನನಗೊಂದು, ತನಗೊಂದು ನಿವೇಶನಗಳನ್ನು ನೀಡುವಂತೆ ಜನರು ಆಗ್ರಹ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆವಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಮೀನನ್ನು ಬಿಲ್ ಕಲೆಕ್ಟರ್ ಮತ್ತು ಹಾಲಿ ಅಧ್ಯಕ್ಷ ಮಂಜುನಾಥ್ ಸೇರಿಕೊಂಡು ಈಶಾ ಫೌಂಡೇಶನ್‌ಗೆ ಮಾರಾಟ ಮಾಡಿದ್ದಾರೆ” ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭದ್ರಾವತಿ | ಕೌಟುಂಬಿಕ ಕಲಹ; ಪತಿಯ ವಿರುದ್ಧವೇ ಮಗಳ ಅಪಹರಣದ ದೂರು ನೀಡಿದ ಪತ್ನಿ
ಖಾಲಿ ಜಾಗ ಹಂಚಿಕೆ ವಿಷಯದಲ್ಲಿ ಅಕ್ರಮ ಎಸಗಿರುವ ಹಿಂದೆ ಕರ್ತವ್ಯದಲ್ಲಿದ್ದ ಪಿಡಿಒ ಹಾಗೂ ಬಿಲ್ ಕಲೆಕ್ಟರ್ ಇಬ್ಬರು ಅಧಿಕಾರಿಗಳನ್ನೂ ಅಮಾನತು ಮಾಡಬೇಕೆಂದು ಒತ್ತಾಯಿಸಿ ಸ್ಥಳೀಯರು ಟಮಟೆ ಚಳವಳಿ ಮೂಲಕ ಆವಲಗುರ್ಕಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.