ಇಲ್ಲಿಗೆ ಸಮೀಪದ ಅನ್ನಮಯ್ಯ ಜಿಲ್ಲೆಯ ಕುರಬಳಕೋಟ ಮಂಡಲದ ಚೆನ್ನಾಮರ್ರಿ ಮಿಟ್ಟ ಎಂಬಲ್ಲಿ ಸೋಮವಾರ ಬೆಳಗಿನ ಜಾವ ವೇಗವಾಗಿ ಬಂದ ಲಾರಿಯೊಂದು ಟೆಂಪೋ ಟ್ರಾವೆಲರ್‌ಗೆ ಅಪ್ಪಳಿಸಿದ ಪರಿಣಾಮ ಕರ್ನಾಟಕದ ಮೂವರು ಮೃತಪಟ್ಟಿದ್ದು, ಇತರ 12 ಜನರು ಗಾಯಗೊಂಡಿದ್ದಾರೆ.
ಮೃತರನ್ನು ಚಿಕ್ಕಬಳ್ಳಾಪುರದ ಬಾಗೇಪಲ್ಲಿ ನಿವಾಸಿಗಳಾದ ಮೇಘರಾಜ್(17), ಚರಣ್(17) ಮತ್ತು ಶ್ರಾವಣಿ(28) ಎಂದು ಗುರುತಿಸಲಾಗಿದೆ.
ಲಾರಿ ಡಿಕ್ಕಿ ಹೊಡೆದಾಗ ಟೆಂಪೋ ಟ್ರಾವೆಲರ್ ಮದನಪಲ್ಲಿಯಿಂದ ಬಾಗೇಪಲ್ಲಿ ಕಡೆಗೆ ಹೋಗುತ್ತಿತ್ತು. ಅಪಘಾತದ ತೀವ್ರತೆಗೆ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ. ಟೆಂಪೋದಲ್ಲಿದ್ದವರು ತಿರುಪತಿ ದರ್ಶನ ಮುಗಿಸಿ ಊರಿಗೆ ಮರಳುತ್ತಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನಾಗರಹೊಳೆ ಬುಡಕಟ್ಟು ಜನಾಂಗಕ್ಕೆ ಸಿಗಲಿ ನ್ಯಾಯ
ಗಾಯಾಳುಗಳನ್ನು ಮದನಪಲ್ಲಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಅಪಘಾತದ ಬಳಿಕ ಲಾರಿ ಸಹಿತ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆಯು ಪ್ರಗತಿಯಲ್ಲಿದೆ ಎಂದು ಪೋಲಿಸ್ ಅಧಿಕಾರಿ ಸತ್ಯನಾರಾಯಣ ತಿಳಿಸಿದ್ದಾರೆ.
ಆಂಧ್ರಪ್ರದೇಶದ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಅವರು ಭೀಕರ ದುರಂತದ ಬಗ್ಗೆ ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.